ಹುಕ್ಕೇರಿ: ಹಿಡಕಲ್ ನದಿಪಾತ್ರದಲ್ಲಿ ಸತತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿರುವ ನದಿಯ ಎರಡೂ ಜಲಾಶಯಗಳಿಂದ ಸೋಮವಾರ ನೀರು ಹೊರಗೆ ಬಿಡಲಾಯಿತು. ರಾಜಾ ಲಖಮಗೌಡ ಜಲಾಶಯದಿಂದ (ಹಿಡಕಲ್ ಡ್ಯಾಂ) 20,800 ಕ್ಯುಸೆಕ್ ನೀರು ಹಾಗೂ ಶಿರೂರ್ ಜಲಾಶಯದಿಂದ 2,300 ಕ್ಯುಸೆಕ್ ನೀರನ್ನು ಸೋಮವಾರ ನದಿಗೆ ಬಿಡಲಾಯಿತು.
ಹಿಡಕಲ್ ಜಲಾಶಯವು ಬಹುತೇಕ ಭರ್ತಿಯಾಗಿದ್ದು, ಸೋಮವಾರ ಜಲಾಶಯದ ನೀರಿನ ಮಟ್ಟ 2174.967 ಅಡಿ ಇದ್ದ (ಗರಿಷ್ಠ ಮಟ್ಟ 2175 ಅಡಿ) ಒಳಹರಿವು ಸಂಜೆ ಹೊತ್ತಿಗೆ 25,000 ಕ್ಯುಸೆಕ್ ಇದೆ. 18,000 ಕ್ಯುಸೆಕ್ ನೀರನ್ನು ನದಿಗೆ ಮತ್ತು 2,800 ಕ್ಯುಸೆಕ್ ನೀರನ್ನು ಕೆಪಿಸಿ ವಿದ್ಯುತ್‌ಗಾರದ ಮೂಲಕ ನದಿಗೆ ನೀರು ಬಿಡಲಾಗಿದೆ ಎಂದು ಎಇಇ ಜಗದೀಶ್ ಬಿ.ಕೆ.ತಿಳಿಸಿದ್ದಾರೆ.
ಶಿರೂರ್ ಡ್ಯಾಂ: ಮಾರ್ಕಂಡೇಯ ನದಿಗೆ ಅಡ್ಡಲಾಗಿ ಶಿರೂರ್ ಬಳಿ ನಿರ್ಮಿಸಿರುವ ಜಲಾಶಯದಲ್ಲಿ ಸೋಮವಾರ ಗರಿಷ್ಠ ಮಟ್ಟ 3.69 ಟಿಎಂಸಿ ಪೈಕಿ 3.67 ಟಿಎಂಸಿ ನೀರು ತುಂಬಿದೆ. ಸಂಜೆಯ ಹೊತ್ತಿಗೆ ಒಳಹರಿವು 2300 ಕ್ಯುಸೆಕ್ ಇದ್ದು, ಹೊರ ಹರಿವು 2300 ಕ್ಯುಸೆಕ್ ಇತ್ತು.
ಅದರಲ್ಲಿ ಬಲದಂಡೆ ಕಾಲುವೆಗೆ 60ಕ್ಯುಸೆಕ್, ನದಿಗೆ 1500 ಕ್ಯುಸೆಕ್ ಮತ್ತು ಇತರೆ 339 ಕ್ಯುಸೆಕ್ ಸೇರಿ ಒಟ್ಟು 1889 ಕ್ಯುಸೆಕ್ ಹೊರಬಿಡಲಾಗುತ್ತಿದೆ.
ನದಿ ತಟದ ಗ್ರಾಮಗಳಲ್ಲಿ ಸೋಮವಾರ ಡಂಗುರ ಸಾರಲಾಗಿದ್ದು, ಜನರು ತಮ್ಮ ಜಾನುವಾರ ಸಮೇತ ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ತಹಶೀಲ್ದಾರ್ ಬಲರಾಮ ಕಟ್ಟಿಮನಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.