ಹುಕ್ಕೇರಿ: ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ತಾಲ್ಲೂಕಿನಲ್ಲಿ ಹರಿಯುವ ಹಿರಣ್ಯಕೇಶಿ ನದಿಯ ಒಳಹರಿವು ಏರಿಕೆಯಾಗಿದೆ. ನದಿಪಾತ್ರದ ಹೊಲಗಳಿಗೆ ನೀರು ನುಗ್ಗಿದ್ದು, ಬೆಳೆಗಳು ಜಲಾವೃತಗೊಂಡಿವೆ. ತಾಲ್ಲೂಕಿನ ಕೊಟಬಾಗಿ ಗ್ರಾಮದ ದುರ್ಗಾದೇವಿ (ಲಕ್ಷ್ಮೀದೇವಿ) ಮಂದಿರ ಜಲಾವೃತಗೊಂಡಿದೆ. ಇನ್ನಷ್ಟು ನೀರು ಬಂದಲ್ಲಿ ಬಡಕುಂದ್ರಿ ಬಳಿಯ ಹೊಳೆಮ್ಮ ದೇವಸ್ಥಾನವೂ ಜಲಾವೃತಗೊಳ್ಳುವ ಹಂತದಲ್ಲಿದೆ.
ತಾಲ್ಲೂಕಿನ ಸಂಕೇಶ್ವರ ನಾಗನೂರ ನಡುವಿನ ಸೇತುವೆ, ದಡ್ಡಿ ಮೋದಗಾ ನಡುವಿನ ಸೇತುವೆ, ಮೋದಗಾ–ರಾಜಗೂಳಿ– ಮಾರಣಹೊಳಿ ನಡುವಿನ ಸೇತುವೆ, ಶೆಟ್ಟಿಹಳ್ಳಿ –ರಾಜಗೂಳಿ–ಮಾರಣಹೊಳಿ ನಡುವಿನ ಸೇತುವೆ, ಯರನಾಳ ಮದುಮಕ್ಕನಾಳ ನಡುವಿನ ಸೇತುವೆ, ಪಾಶ್ಚಾಪುರ ಅಂಕಲಗಿ ನಡುವಿನ ಸೇತುವೆ ಸೇರಿ ಒಟ್ಟು 6 ಸೇತುವೆಗಳು ಜಲಾವೃತಗೊಂಡಿವೆ. ತಹಶೀಲ್ದಾರ್ ಬಲರಾಮ ಕಟ್ಟಿಮನಿ ಸ್ಥಳಕ್ಕೆ ಭೇಟಿ ನೀಡಿ ಸೇತುವೆ ಮೇಲೆ ತಿರುಗಾಡದಂತೆ ರಸ್ತೆ ಮೇಲೆ ಪೊಲೀಸ್ ಬ್ಯಾರಿಕೇಡ್ ಇರಿಸಿ ಬಂದ್ ಮಾಡಿಸಿದ್ದಾರೆ.
ಜತೆಗೆ ತಾಲ್ಲೂಕಿನಲ್ಲಿ ಹರಿಯುವ ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಹಿಡಕಲ್ ಜಲಾಶಯಕ್ಕೆ ಬುಧವಾರ 51 ಟಿಎಂಸಿ (ಗರಿಷ್ಟ 2175 ಅಡಿ) ನೀರು ಸಂಗ್ರಹವಿದ್ದು, ಬಹುತೇಕ ಭರ್ತಿಯಾಗಿದೆ. ನದಿಗೆ ಒಳಹರಿವು 65,694 ಕ್ಯೂಸೆಕ್ ಇದ್ದು, ಹೊರಹರಿವು ಅಷ್ಟೇ ಇದೆ. ಅದರಂತೆ ಹಿರಣ್ಯಕೇಶಿ ನದಿಯ ಒಳಹರಿವು ಕೂಡಾ 56,220 ಕ್ಯೂಸೆಕ್ ಇರುವುದರಿಂದ ನದಿಯ ಒಡಲು ತುಂಬಿ ಅಕ್ಕಪಕ್ಕದ ಹೊಲಗಳಲ್ಲಿ ನೀರು ಹರಿಯಲು ಪ್ರಾರಂಭಿಸಿದೆ. ಸೋಯಾ ಬೆಳೆದ ರೈತರು ಚಿಂತೆಗೀಡಾಗಿದ್ದಾರೆ.
ಹಿರಣ್ಯಕೇಶಿ ನದಿಯ ನೀರು ಹಿಡಕಲ್ ಡ್ಯಾಂಗೆ ಸೇರದೆ ನೇರವಾಗಿ ಸಂಗಮ ಬಳಿ (ಸುಲ್ತಾನಪುರ) ಘಟಪ್ರಭಾ ನದಿ ಸೇರಿ ಧೂಪದಾಳ ಜಲಸಂಗ್ರಹಕ್ಕೆ ಸೇರುವುದು. ಇದರಿಂದ ಗೋಕಾಕ್ ಫಾಲ್ಸ್ ಮೆರುಗು ಹೆಚ್ಚುತ್ತಿದೆ.
ತಾಲ್ಲೂಕಿನ ಮಾರ್ಕಂಡೇಯ (ಶಿರೂರ ಡ್ಯಾಂ) ನದಿಯ ಒಳಹರಿವೂ ಹೆಚ್ಚಾಗಿದ್ದು, ಬುಧವಾರ ಜಲಾಶಯದಲ್ಲಿ 3.69 ಟಿಎಂಸಿ (ಗರಿಷ್ಟ 3.69 ಟಿಎಂಸಿ) ನೀರು ಸಂಗ್ರಹವಿದ್ದು, ಸದರಿ ಡ್ಯಾಂ ಬಹುತೇಕ ಭರ್ತಿಯಾಗಿದೆ. ನದಿಗೆ ಒಳಹರಿವು 5,177 ಕ್ಯೂಸೆಕ್ ಇದ್ದು, ಹೊರಹರಿವು 5,985 ಕ್ಯೂಸೆಕ್ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.