ADVERTISEMENT

ಬೆಳಗಾವಿ-ಕಿತ್ತೂರು-ಧಾರವಾಡ ರೈಲು ಮಾರ್ಗ ಶೀಘ್ರ

ಗ್ರಾಮಸ್ಥರ ವಿವಿಧ ಬೇಡಿಕೆಗಳ ಮನವಿ ಸ್ವೀಕರಿಸಿದ ಸಂಸದ ಜಗದೀಶ ಶೆಟ್ಟರ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2024, 15:30 IST
Last Updated 13 ಆಗಸ್ಟ್ 2024, 15:30 IST
ಹಿರೇಬಾಗೇವಾಡಿಯ ಬಸವ ವೃತ್ತದ ಬಳಿ ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಹೆದ್ದಾರಿಗೆ ಅಂಡರ್‌ಪಾಸ್ ರಸ್ತೆ ನಿರ್ಮಿಸಬೇಕೆಂದು ಗ್ರಾಮಸ್ಥರು ಮತ್ತು ಶಿಕ್ಷಕರು ಸಂಸದ ಸಂಸದ ಜಗದೀಶ ಶೆಟ್ಟರ್ ಅವರಿಗೆ ಮನವಿ ಮಾಡಿದರು
ಹಿರೇಬಾಗೇವಾಡಿಯ ಬಸವ ವೃತ್ತದ ಬಳಿ ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಹೆದ್ದಾರಿಗೆ ಅಂಡರ್‌ಪಾಸ್ ರಸ್ತೆ ನಿರ್ಮಿಸಬೇಕೆಂದು ಗ್ರಾಮಸ್ಥರು ಮತ್ತು ಶಿಕ್ಷಕರು ಸಂಸದ ಸಂಸದ ಜಗದೀಶ ಶೆಟ್ಟರ್ ಅವರಿಗೆ ಮನವಿ ಮಾಡಿದರು   

ಹಿರೇಬಾಗೇವಾಡಿ: ಬೆಳಗಾವಿ-ಕಿತ್ತೂರು-ಧಾರವಾಡ ರೈಲು ಮಾರ್ಗದ ಕಾಮಗಾರಿಯನ್ನು ಶೀಘ್ರ  ಪೂರ್ಣಗೊಳಿಸಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.

ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿ ಇಲ್ಲಿನ ಪಡಿಬಸವೇಶ್ವರ ದೇವಸ್ಥಾನದಲ್ಲಿ ಗ್ರಾಮಸ್ಥರ ವಿವಿಧ ಬೇಡಿಕೆಗಳ ಮನವಿ ಸ್ವೀಕರಿಸಿ ಮಾತನಾಡಿದರು.

ಹಿರೇಬಾಗೇವಾಡಿ ಮಾರ್ಗವಾಗಿ ಧಾರವಾಡಕ್ಕೆ ಹೊಸ ರೈಲು ಮಾರ್ಗ ನಿರ್ಮಾಣ ಕಾರ್ಯದಲ್ಲಿ ಯಾವುದೇ ಅಡೆತಡೆಗಳಿಲ್ಲ. ರೈತರು ಜಮೀನು ನೀಡಲು ಮುಂದಾಗಿದ್ದು, ಅದರಿಂದ ಯಾವುದೇ ರೈತರಿಗೆ ಸಮಸ್ಯೆಗಳಾಗದಂತೆ ಕ್ರಮ ಕೈಗೊಳ್ಳಲಾಗುವುದು. ಭಕ್ತರ ಬೇಡಿಕೆಗನುಸಾರವಾಗಿ ಸವದತ್ತಿಯ ಯಲ್ಲಮ್ಮನ ಗುಡ್ಡದ ವರೆಗೆ ಹೊಸ ರೈಲು ಮಾರ್ಗದ ಬಗ್ಗೆ ಇತ್ತೀಚಿಗೆ ಕೇಂದ್ರ ರೈಲ್ವೆ ಸಚಿವರೊಂದಿಗೆ ಮಾತನಾಡಿದ್ದು, ಸಂಬಂಧಿತ ಅಧಿಕಾರಿಗಳೊಡನೆ ಸರ್ವೇ ಕೂಡ ಮಾಡಲು ಚರ್ಚಿಸಲಾಗಿದೆ ಎಂದರು.

ADVERTISEMENT

ಇಲ್ಲಿಯ ಬಸವ ವೃತ್ತದ ಬಳಿಯ ಹೆದ್ದಾರಿಗೆ ಕೆಳ ಸೇತುವೆ ನಿರ್ಮಾಣ ಮಾಡಬೇಕೆಂದು ಇಲ್ಲಿನ ಜಿವಿವಿ ಸಂಘದ ಶಾಲಾ ಶಿಕ್ಷಕರು ಮತ್ತು ಗ್ರಾಮಸ್ಥರು ಸಂಸದರಿಗೆ ಮನವಿ ಮಾಡಿಕೊಂಡರು.

ಸ್ಥಳದಲ್ಲಿದ್ದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆ ಮಾತನಾಡಿದ ಸಂಸದರು, ಶೀಘ್ರವೇ ಸಾರ್ವಜನಿಕರ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮಾಜಿ ಶಾಸಕ ಸಂಜಯ ಪಾಟೀಲ, ಗ್ರಾ.ಪಂ ಅಧ್ಯಕ್ಷೆ ಸ್ಮಿತಾ ಪಾಟೀಲ, ಕಲಾವತಿ ಧರೆಣ್ಣವರ ಬಿಜೆಪಿ ಮುಖಂಡರಾದ ಧನಂಜಯ ಜಾಧವ, ಚೇತನ ಅಂಗಡಿ, ಗ್ರಾಪಂ ಸದಸ್ಯ ಸಿದ್ದಪ್ಪ ಹುಕ್ಕೇರಿ, ಈರಪ್ಪ ಅರಳೀಕಟ್ಟಿ, ಮಂಜುನಾಥ ಧರೆಣ್ಣವರ, ಬಸಪ್ಪ ವಾಲಿ, ರಾಜು ಅರಳೀಕಟ್ಟಿ, ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.