ADVERTISEMENT

ಮೂವರಿಗೆ ವಿಟಿಯು ಗೌರವ ಡಾಕ್ಟರೇಟ್‌

​ಪ್ರಜಾವಾಣಿ ವಾರ್ತೆ
Published 29 ಜುಲೈ 2023, 0:05 IST
Last Updated 29 ಜುಲೈ 2023, 0:05 IST
ಎಚ್.ಎನ್.ಶೆಟ್ಟಿ
ಎಚ್.ಎನ್.ಶೆಟ್ಟಿ   

ಬೆಳಗಾವಿ: ‘ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 23ನೇ ಘಟಿಕೋತ್ಸವ ಆಗಸ್ಟ್‌ 1ರಂದು ಬೆಳಿಗ್ಗೆ 11.30ಕ್ಕೆ ಜ್ಞಾನ ಸಂಗಮ ಆವರಣದ ಡಾ.ಎಪಿಜೆ ಅಬ್ದುಲ್ ಕಲಾಂ ಸಭಾಭವದಲ್ಲಿ ನಡೆಯಲಿದೆ’ ಎಂದು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ ತಿಳಿಸಿದರು.

‘ಅಧ್ಯಾತ್ಮ ಕ್ಷೇತ್ರದಲ್ಲಿ ಸಾಧನೆ–ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಶಿಕ್ಷಣ ಕ್ಷೇತ್ರದ ಸಾಧನೆ– ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಎ.ವಿ.ಎಸ್. ಮೂರ್ತಿ ಹಾಗೂ ಔದ್ಯೋಗಿಕ ಕ್ಷೇತ್ರದ ಸಾಧನೆ ಪರಿಗಣಿಸಿ ಮೈಸೂರು ಮೆಕ್ರ್ಯಾನ್‌ ಟೈಲ್ ಕಂಪನಿ ಅಧ್ಯಕ್ಷ ಎಚ್.ಎನ್.ಶೆಟ್ಟಿ ಅವರಿಗೆ ಗೌರವ ಡಾಕ್ಟರೇಟ್‌ ನೀಡಲಾಗುವುದು’ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಚೆನ್ನೈನ ಭಾರತೀಯ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ವಿ.ಕಾಮಕೋಟಿ ಘಟಿಕೋತ್ಸವ ಭಾಷಣ ಮಾಡುವರು. ರಾಜ್ಯಪಾಲ ಥಾವರಚಂದ ಗೆಹಲೋತ್‌ ಅಧ್ಯಕ್ಷತೆ ವಹಿಸುವರು. ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ ಅತಿಥಿಯಾಗಿ ಪಾಲ್ಗೊಳ್ಳುವರು ಎಂದರು.

ADVERTISEMENT

‘ಘಟಿಕೋತ್ಸವದಲ್ಲಿ ಬಿ.ಇ, ಬಿ.ಟೆಕ್ ಸೇರಿ 42,545 ಪದವಿ, ಬಿ.ಪ್ಲಾನ್- 6, ಬಿ.ಆರ್ಕ್‌ 1,003, ಪಿಎಚ್‌.ಡಿ 550, 4 ಎಂಎಸ್‌ಸಿ (ಸಂಶೋಧನೆ) ಪದವಿಗಳನ್ನು ಪ್ರದಾನ ಮಾಡಲಾಗುವುದು. ಈ ಬಾರಿ, ಬೆಂಗಳೂರು ಸರ್‌ ಎಂ.ವಿಶ್ವೇಶ್ವರಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಮದಕ್‌ಶಿರಾ ಚಿನ್ಮಯ ವಿಕಾಸ ಅವರು 13 ಚಿನ್ನದ ಪದಕ ಪಡೆದು ಮೊದಲಿಗರಾಗಿದ್ದಾರೆ’ ಎಂದರು.

ಎ.ವಿ.ಎಸ್. ಮೂರ್ತಿ
ನಿರ್ಮಲಾನಂದನಾಥ ಸ್ವಾಮೀಜಿ
ಮದಕ್‌ಶಿರಾ ಚಿನ್ಮಯ ವಿಕಾಸ

ಮಿನಿ ಘಟಿಕೋತ್ಸವಕ್ಕೂ ಸಿದ್ಧತೆ

‘ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಈ ವರ್ಷದಿಂದಲೇ ಮೇ ಅಂತ್ಯಕ್ಕೆ ಪದವಿ ಫಲಿತಾಂಶ ನೀಡಲಾಗಿದೆ. ಈ ಮೊದಲು ವಿಳಂಬದಿಂದಾಗಿ ವಿದೇಶಕ್ಕೆ ಹೋಗುವ ವಿದ್ಯಾರ್ಥಿಗಳ ಸಮಯ ವ್ಯರ್ಥವಾಗುತ್ತಿತ್ತು. ಅದನ್ನು ತಪ್ಪಿಸಿದ್ದೇವೆ’ ಎಂದು ವಿದ್ಯಾಶಂಕರ ತಿಳಿಸಿದರು. ‘ಅಗತ್ಯ ಬಿದ್ದರೆ ಇದೇ ವರ್ಷ ಇನ್ನೊಂದು ಮಿನಿ ಘಟಿಕೋತ್ಸವ ನಡೆಸಿ ಎಂಬಿಎ ಎಂಸಿಎ ಎಂಟೆಕ್‌ ಹಾಗೂ ಪಿಎಚ್‌ಡಿ ಪೂರೈಸಿದವರಿಗೆ ಪದವಿ ಪ್ರದಾನ ಮಾಡಲಾಗುವುದು. ಸದ್ಯ ಸ್ನಾತಕೋತ್ತರ ಪ್ರವೇಶಾತಿಗಳು ವಿಳಂಬವಾಗಿದ್ದರಿಂದ ಅವರ ಪದವಿ ಮುಗಿಯುವುದೂ ವಿಳಂಬವಾಗುತ್ತಿದೆ. ಇದು ಸರಿಯಾಗುವವರೆಗೆ ಪ್ರತಿ ವರ್ಷ ಮಿನಿ ಘಟಿಕೋತ್ಸವ ನಡೆಸಬೇಕೆಂಬ ಉದ್ದೇಶವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.