ADVERTISEMENT

ಸೌಲಭ್ಯಗಳಿಲ್ಲದೇ ಬಳಲುತ್ತಿರುವ ಹೊಸಟ್ಟಿ

ಪಟ್ಟಣದ ಪಕ್ಕದಲ್ಲೇ ಇದ್ದರೂ ಕಾಣದ ಅಭಿವೃದ್ಧಿ

ಪರಶುರಾಮ ನಂದೇಶ್ವರ
Published 23 ಜೂನ್ 2019, 19:30 IST
Last Updated 23 ಜೂನ್ 2019, 19:30 IST
ಮಹಿಳೆಯರಿಗಾಗಿ ನಿರ್ಮಿಸಿದ ಶೌಚಾಲಯ ಬಳಸುವ ಸ್ಥಿತಿಯಲ್ಲಿಲ್ಲ
ಮಹಿಳೆಯರಿಗಾಗಿ ನಿರ್ಮಿಸಿದ ಶೌಚಾಲಯ ಬಳಸುವ ಸ್ಥಿತಿಯಲ್ಲಿಲ್ಲ   

ಅಥಣಿ: ತಾಲ್ಲೂಕಿನ ಹೊಸಟ್ಟಿ ಗ್ರಾಮವು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅಭಿವೃದ್ಧಿಯಿಂದ ದೂರ ಉಳಿದಿದೆ. ಇದರಿಂದಾಗಿ ಉಂಟಾಗಿರುವ ಮೂಲಸೌಲಭ್ಯಗಳ ಕೊರತೆಯಿಂದಾಗಿ ಅಲ್ಲಿನ ಜನರು ಯಾತನೆ ಅನುಭವಿಸುತ್ತಿದ್ದಾರೆ.

ಸ್ವಚ್ಛ ಭಾರತ, ಗ್ರಾಮಗಳ ಅಭಿವೃದ್ಧಿ, ರಸ್ತೆಗಳ ಪ್ರಗತಿ, ಕುಡಿಯುವ ನೀರು ಪೂರೈಕೆಗೆ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುತ್ತಿದೆ. ಆದರೆ, ಇದರಲ್ಲಿ ಹೊಸಟ್ಟಿ ಗ್ರಾಮಕ್ಕೆ ‘ಪಾಲು’ ದೊರೆಯುತ್ತಿಲ್ಲವೇ ಎನ್ನುವ ಅನುಮಾನ ಅಲ್ಲಿನ ದುಃಸ್ಥಿತಿಯನ್ನು ನೋಡಿದರೆ ಕಾಡುತ್ತದೆ. ಪ್ರಗತಿಯ ಬದಲಿಗೆ ಕುಗ್ರಾಮವಾಗುತ್ತ ಇದು ಹೆಜ್ಜೆ ಹಾಕುತ್ತಿದೆ.

ಪಟ್ಟಣದಿಂದ ಕೇವಲ 7 ಕಿ.ಮೀ ದೂರದಲ್ಲಿರುವ ಗ್ರಾಮದಲ್ಲಿ 1,500ಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಸಂಕೋನಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಈ ಗ್ರಾಮ ಸೌಲಭ್ಯಗಳಿಲ್ಲದೇ ಬಳಲುತ್ತಿದೆ.

ADVERTISEMENT

ಬಸ್‌ ವ್ಯವಸ್ಥೆ ಇಲ್ಲ:ಅಥಣಿಯಿಂದ ಹೊಸಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣ ಹಾಳಾಗಿದೆ. ಗುಂಡಿಗಳಿಂದ ಕೂಡಿದೆ. ಮಳೆ ಬಂದಾಗಲಂತೂ ಇದು ಕೆಸರು ಗದ್ದೆಯಂತಾಗುತ್ತದೆ. ಇಲ್ಲಿ ವಾಹನಗಳಲ್ಲಿ ಸಂಚರಿಸುವುದು ಸರ್ಕಸ್ ಮಾಡಿದಂತೆಯೇ ಸರಿ. 13 ವರ್ಷಗಳಿಂದ ರಸ್ತೆ ಸುಧಾರಣೆ ಕಂಡಿಲ್ಲ. ನಿತ್ಯವು ನೂರಾರು ಮಂದಿ ಇಲ್ಲಿ ಓಡಾಡುತ್ತಾರೆ. ಶಾಲಾ–ಕಾಲೇಜುಗಳಿಗೆಂದು ಅಥಣಿಗೆ ಬರುವವರು ತೊಂದರೆ ಅನುಭವಿಸುತ್ತಿದ್ದಾಶರೆ. ರಸ್ತೆ ಅಭಿವೃದ್ಧಿಗೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಅಥಣಿಯಿಂದ 7 ಕಿ.ಮೀ. ದೂರದಲ್ಲಿದ್ದರೂ ಸಾರಿಗೆ ಬಸ್‌ ವ್ಯವಸ್ಥೆಯಾಗಿಲ್ಲ. ಕೆಲವು ದಿನಗಳ ಹಿಂದೆ ಪ್ರಯಾಣಿಕರ ಒತ್ತಾಯದ ಮೇರೆಗೆ ಒಂದು ಬಸ್‌ ಕಲ್ಪಿಸಲಾಗಿತ್ತು. ಕೆಲವೇ ದಿನಗಳಲ್ಲಿ ಅದನ್ನು ಸ್ಥಗಿತಗೊಳಿಸಲಾಯಿತು! ಇದಕ್ಕೆ ಸ್ಪಷ್ಟ ಕಾರಣ ಕೂಡ ತಿಳಿದಿಲ್ಲ. ಗ್ರಾಮದಿಂದ ನಿತ್ಯವೂ 50ಕ್ಕಿಂತ ಅಧಿಕ ವಿದ್ಯಾರ್ಥಿಗಳು ಶಾಲಾ–ಕಾಲೇಜಿಗೆ ಹೋಗಲು ಸ್ವಂತ ವಾಹನ ಅಥವಾ ಇತರ ವ್ಯವಸ್ಥೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ಶೌಚಾಲಯವಿಲ್ಲ:500ಕ್ಕಿಂತ ಹೆಚ್ಚಿನ ಮಹಿಳಾ ಜನಸಂಖ್ಯೆಯನ್ನು ಹೊಂದಿರುವ ಇಲ್ಲಿ ಸರಿಯಾದ ಶೌಚಾಲಯಗಳ ವ್ಯವಸ್ಥೆ ಇಲ್ಲ. ಹೀಗಾಗಿ, ಬಯಲೇ ಶೌಚಾಲಯವಾಗಿದೆ. ಹೆಣ್ಣು ಮಕ್ಕಳು ಕತ್ತಲಾಗುವುದನ್ನೇ ಕಾಯುವಂತಹ ದುಃಸ್ಥಿತಿ ಇದೆ. ಹಿಂದೆ ಪಂಚಾಯ್ತಿ ವತಿಯಿಂದ ಮಹಿಳೆಯರಿಗಾಗಿ ಸಾಮೂಹಿಕ ಶೌಚಾಲಯ ಕಟ್ಟಿಸಲಾಗಿತ್ತು. ಆದರೆ, ಅದು ಬಳಸುವ ಸ್ಥಿತಿಯಲ್ಲಿಲ್ಲ. 2012ರಲ್ಲಿ ನಿರ್ಮಾಣವಾದ ಈ ಶೌಚಾಲಯಕ್ಕೆ ಇದುವರೆಗೂ ನೀರಿನ ಸಂಪರ್ಕವನ್ನೇ ಕಲ್ಪಿಸಿಲ್ಲ ಎಂದು ಸ್ಥಳೀಯರು ತಿಳಿಸಿದರು. ಪುರುಷರಿಗೂ ಇಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿಲ್ಲ. ಹೀಗಾಗಿ, ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಮಾಡುವುದು ಸಾಧ್ಯವಾಗಿಲ್ಲ.

ತಾಲ್ಲೂಕು ಪಂಚಾಯ್ತಿ ಹಾಲಿ ಅಧ್ಯಕ್ಷೆ ಇದೇ ಊರಿನವರು. ಒಬ್ಬ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ, ಇಬ್ಬರು ಹಾಲಿ ಗ್ರಾಮ ಪಂಚಾಯ್ತಿ ಸದಸ್ಯರು ಇದ್ದರೂ ಇಲ್ಲಿ ಮೂಲಸೌಲಭ್ಯಗಳು ದೊರೆತಿಲ್ಲ! ಇದು ಈ ಜನಪ್ರತಿನಿಧಿಗಳ ಕಾರ್ಯವೈಖರಿಗೆ ಕನ್ನಡಿ ಹಿಡಿದಿದೆ. ಇನ್ನಾದರೂ ಅಧಿಕಾರಿಗಳು ಹಾಗೂ ಜನ್ರಪತಿನಿಧಿಗಳು ಗ್ರಾಮದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು. ಮಹಿಳೆಯರಿಗಾಗಿ ನಿರ್ಮಿಸಿದ ಶೌಚಾಲಯ ಬಳಕೆಯಾಗುವಂತೆ ಮಾಡಬೇಕು. ಪುರುಷರಿಗಾಗಿಯೂ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು ಎನ್ನುವುದು ಇಲ್ಲಿನವರ ಆಗ್ರಹವಾಗಿದೆ.

‘ನಮ್ಮ ಗ್ರಾಮದಲ್ಲಿ ಸಾರ್ವಜನಿಕರಿಗೆ ಬೇಕಾಗುವ ಮೂಲ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿಲ್ಲ. ಇದರಿಂದಾಗಿ ತಾಲ್ಲೂಕಿನ ಕುಗ್ರಾಮ ಎನಿಸಿಕೊಂಡಿದೆ. ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಆಯ್ಕೆ ಮಾಡಿ, ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು’ ಎಂದು ರೈತ ಸಂಘ ಗ್ರಾಮ ಘಟಕದ ಅಧ್ಯಕ್ಷ ಕೃಷ್ಣ ಸಲಗರ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.