ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮಘಟ್ಟ ಹಾಗೂ ಜಿಲ್ಲೆಯ ಜಲಾನಯನ ಪ್ರದೇಶಗಳಲ್ಲಿ ಶನಿವಾರ ಮಳೆ ಅಬ್ಬರ ತುಸು ತಗ್ಗಿದೆ. ಅಣೆಕಟ್ಟೆಗಳಿಂದ ನಿರಂತರ ನೀರು ಹರಿಸುತ್ತಿರುವ ಕಾರಣ, ಜಿಲ್ಲೆಯ 41 ಸೇತುವೆಗಳು ಇನ್ನೂ ನೀರಿನಲ್ಲಿ ಮುಳುಗಿವೆ. ಅಂದಾಜು 700ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.
ಹುಕ್ಕೇರಿ ತಾಲ್ಲೂಕಿನ ಹೆಬ್ಬಾಳ ಬಳಿ ರಾಷ್ಟ್ರೀಯ ಹೆದ್ದಾರಿ–48ರ ಮೇಲೆ ಅಪಾರ ಪ್ರಮಾಣ ನೀರು ಹರಿಯಿತು. ಇದರಿಂದ ಕೆಲ ಸಮಯ ಸಂಚಾರ ಬಂದ್ ಆಯಿತು. ಹೆದ್ದಾರಿ ಮೇಲೆಯೇ ಮಣ್ಣು–ಕಲ್ಲು ಸುರಿದು ಅದರ ಮೇಲೆ ವಾಹನಗಳು ಸಂಚರಿಸುವಂತೆ ವ್ಯವಸ್ಥೆ ಮಾಡಲಾಯಿತು.
ಹಿಡಕಲ್ ಜಲಾಶಯದಿಂದ 44 ಸಾವಿರ ಕ್ಯುಸೆಕ್, ಹಿರಣ್ಣಕೇಶಿ ನದಿಯಿಂದ 24 ಸಾವಿರ ಕ್ಯುಸೆಕ್, ಶಿರೂರು ಜಲಾಶಯದಿಂದ 8,000 ಕ್ಯುಸೆಕ್, ಬಳ್ಳಾರಿ ನಾಲಾದಿಂದ 3,000 ಕ್ಯುಸೆಕ್ ಸೇರಿ ಒಟ್ಟು 79 ಸಾವಿರ ಕ್ಯುಸೆಕ್ ನೀರು ಘಟಪ್ರಭಾ ನದಿಗೆ ಹರಿದುಬರುತ್ತಿದೆ. ಇದರಿಂದ ಗೋಕಾಕ ನಗರದ 150 ಮನೆಗಳು ಹಾಗೂ 150 ಮಳಿಗೆಗಳು ನೀರಿನಿಂದ ಆವೃತವಾಗಿವೆ.
ಹಳೆ ದನಗಳ ಪೇಟೆ, ದಾಳಂಬ್ರಿ ತೋಟ, ಮಟನ್ ಮಾರ್ಕೆಟ್, ಉಪ್ಪಾರ ಓಣಿ, ಬೋಜಗರ ಓಣಿ, ಕುಂಬಾರ ಓಣಿ ಸೇರಿದಂತೆ ಅನೇಕ ಕಡೆಗಳಲ್ಲಿ ನದಿ ನೀರು ನುಗ್ಗಿದೆ. ಇಲ್ಲಿನ ಜನರಲ್ಲಿ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಅಲ್ಲಿಂದ ಮುಂದೆ ಸಾಗುವ ಘಟಪ್ರಭೆ ನೀರು ಮೂಡಲಗಿ ತಾಲ್ಲೂಕಿನ ಸುಣದೋಳಿಯ ಜಡಿಸಿದ್ದೇಶ್ವರ ಮಠವನ್ನೂ ಸುತ್ತುವರಿದಿದೆ.
ಸಂಕೇಶ್ವರ ಪಟ್ಟಣದ ಮಠ ಗಲ್ಲಿ, ನದಿ ಗಲ್ಲಿ, ಜನತಾ ಪ್ಲಾಟ್‌ಗೆ ಹಿರಣ್ಯಕೇಶಿ ನದಿ ನೀರು ನುಗ್ಗಿದ್ದು, ಶನಿವಾರ ಮತ್ತಷ್ಟು ಮನೆಗಳು ಜಲಾವೃತವಾಗಿವೆ. ಜನ ಕಾಳಜಿ ಕೇಂದ್ರ ಸೇರಿದ್ದಾರೆ.
ಕೃಷ್ಣಾ ನದಿಯಿಂದ 2.06 ಲಕ್ಷ ಕ್ಯುಸೆಕ್, ದೂಧಗಂಗಾ ನದಿಯಿಂದ 44 ಸಾವಿರ ಕ್ಯುಸೆಕ್ ಸೇರಿ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ– ಯಡೂರ ಬ್ಯಾರೇಜ್ ಬಳಿಯಲ್ಲಿ 2.5 ಲಕ್ಷ ಕ್ಯುಸೆಕ್ ನೀರು ಕೃಷ್ಣಾ ನದಿಗೆ ಹರಿದುಬರುತ್ತಿದೆ. ನದಿ ತೀರದ ಗ್ರಾಮಸ್ಥರನ್ನು ಸ್ಥಳಾಂತರಿಸುವ ಕಾರ್ಯ ಮುಂದುವರೆದಿದೆ. ಪ್ರವಾಹ ಪೀಡಿತ 8 ಗ್ರಾಮಗಳ 339 ಕುಟುಂಬಗಳನ್ನು ರಕ್ಷಣೆ ಮಾಡಿ 9 ಕಾಳಜಿ ಕೇಂದ್ರದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. 481 ಜಾನುವಾರುಗಳನ್ನು ರಕ್ಷಿಸಿ ಗೋಶಾಲೆಗಳಲ್ಲಿ ಇರಿಸಲಾಗಿದೆ.
ವೇದಗಂಗಾ, ದೂಧಗಂಗಾ ನದಿಗಳಿಂದ ನೀರು ಉಕ್ಕೇರಿದ್ದು ನಿಪ್ಪಾಣಿ ತಾಲ್ಲೂಕಿನಲ್ಲಿ 220 ಕುಟುಂಬಗಳ 427 ಜನರನ್ನು ಸ್ಥಳಾಂತರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.