ADVERTISEMENT

1,283 ಸಂತ್ರಸ್ತರಿಗೆ ಮನೆ ನಿರ್ಮಾಣ

ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2020, 12:54 IST
Last Updated 17 ಅಕ್ಟೋಬರ್ 2020, 12:54 IST
ಗೋಕಾಕ ಹೊರವಲಯದ ಬಸವೇಶ್ವರ ಸಭಾಭವನದಲ್ಲಿ ಶನಿವಾರ ನಡೆದ ನೆರೆ ಸಂತ್ರಸ್ತರ ಸಭೆಯಲ್ಲಿ ಅರಭಾವಿ ಶಾಸಕ ಹಾಗೂ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾತನಾಡಿದರು
ಗೋಕಾಕ ಹೊರವಲಯದ ಬಸವೇಶ್ವರ ಸಭಾಭವನದಲ್ಲಿ ಶನಿವಾರ ನಡೆದ ನೆರೆ ಸಂತ್ರಸ್ತರ ಸಭೆಯಲ್ಲಿ ಅರಭಾವಿ ಶಾಸಕ ಹಾಗೂ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾತನಾಡಿದರು   

ಗೋಕಾಕ: ‘ಕಳೆದ ವರ್ಷ ಪ್ರವಾಹದಿಂದ ಮನೆ ಹಾನಿಗೊಳಗಾದರೂ ಪರಿಹಾರದ ಹಣ ಮಂಜೂರಾಗದೆ ಇರುವವರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆಗಳನ್ನು ನಿರ್ಮಿಸಲು ಅನುದಾನ ಕೊಡಿಸುವೆ’ ಎಂದು ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಭರವಸೆ ನೀಡಿದರು.

ಇಲ್ಲಿನ ಹೊರವಲಯದ ಬಸವೇಶ್ವರ ಸಭಾಭವನದಲ್ಲಿ ಶನಿವಾರ ನಡೆದ ನೆರೆ ಸಂತ್ರಸ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ವಸತಿ ಸಚಿವ ವಿ. ಸೋಮಣ್ಣ ಅವರೊಂದಿಗೆ ಮಾತುಕತೆ ನಡೆಸಿ ಈ ನಿರ್ಣಯಕ್ಕೆ ಬಂದಿದ್ದೇವೆ. ಅರಭಾವಿ ಹಾಗೂ ಗೋಕಾಕ ವಿಧಾನಸಭಾ ಮತಕ್ಷೇತ್ರಗಳಲ್ಲಿ ಡೇಟಾ ಎಂಟ್ರಿ ಆಗದೆ ಉಳಿದಿರುವ ‘ಎ;, ‘ಬಿ’, ಮತ್ತು ‘ಸಿ’ ವರ್ಗದ ಒಟ್ಟು 1,283 ಸಂತ್ರಸ್ತರಿಗೆ ಪರಿಹಾರ ಧನ ಪಾವತಿಯಾಗಿಲ್ಲ. ಕೊರೊನಾದಿಂದ ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಸುಧಾರಣೆ ಆಗಬೇಕಿದ್ದು, ಈ ಸಂತ್ರಸ್ತರಿಗೆ ಸರ್ಕಾರದಿಂದ ₹ 5 ಲಕ್ಷ ಪರಿಹಾರ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ಪರ್ಯಾಯ ಮಾರ್ಗ ಕಂಡುಕೊಳ್ಳಲಾಗಿದೆ’ ಎಂದು ಹೇಳಿದರು.

ADVERTISEMENT

‘ಬಸವ ವಸತಿ ಸೇರಿದಂತೆ ಯಾವುದೇ ವಸತಿ ಯೋಜನೆಗಳು ಸದ್ಯದಲ್ಲಿ ಪ್ರಾರಂಭವಾಗುವುದಿಲ್ಲ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಸಾಮಾನ್ಯ ವರ್ಗದ ಜನರಿಗೆ ₹ 1.20 ಲಕ್ಷ, ಪರಿಶಿಷ್ಟ ಜಾತಿ, ಪಂಗಡದವರಿಗೆ ₹ 1.50 ಲಕ್ಷವನ್ನು ಮನೆ ನಿರ್ಮಾಣಕ್ಕೆ ನೀಡಲಾಗುವುದು. ಇದನ್ನು ಮಂಜೂರು ಮಾಡಿಸುವ ಜವಾಬ್ದಾರಿ ನಮ್ಮ ಮೇಲಿದ್ದು, ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ವದಂತಿಗಳಿಗೆ ಕಿವಿಗೊಡಬೇಡಿ’ ಎಂದು ಕೋರಿದರು.

‘ಕಳೆದ ವರ್ಷ ಭಾರಿ ಪ್ರಮಾಣದ ನೆರೆಯಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದೀರಿ. ಈ ವರ್ಷ ಕೊರೊನಾದಿಂದದ ಕಂಟಕ ಎದುರಾಗಿದೆ. ಸಂತ್ರಸ್ತರು ಸರ್ಕಾರದ ಯೋಜನೆಗಳಿಗಾಗಿ ಯಾವುದೇ ಕಚೇರಿಗಳಿಗೆ ಅಲೆದಾಡಬೇಡಿ. ಯಾರಿಗೂ ದುಡ್ಡು ನೀಡಿ ಮೋಸ ಹೋಗಬೇಡಿ. ನಿಮ್ಮ ಬಳಿಗೇ ಯೋಜನೆ ಹಣ ತಲುಪಿಸುವ ಕಾರ್ಯ ಮಾಡಲಾಗುವುದು. ಈ ದಿಸೆಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಂತ್ರಸ್ತರಿಗೆ ಸಾಧ್ಯವಿದ್ದಷ್ಟು ಸಹಕಾರ ನೀಡಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಗೋವಿಂದ ಕೊಪ್ಪದ, ಗೋಕಾಕ ತಹಶೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ, ತಾ.ಪಂ. ಇಒ ಬಸವರಾಜ ಹೆಗ್ಗನಾಯಕ, ಮೂಡಲಗಿ ತಹಶೀಲ್ದಾರ್‌ ದಿಲಶಾದ್ ಮಹಾತ್, ಮೂಡಲಗಿ ಬಿಇಒ ಅಜಿತ ಮನ್ನಿಕೇರಿ, ಮುಖಂಡರಾದ ರಾಜೇಂದ್ರ ಸಣ್ಣಕ್ಕಿ, ಹಣಮಂತ ತೇರದಾಳ, ಎಂ.ಕೆ. ಕುಳ್ಳೂರ, ರವಿ ಪರುಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.