ಹುಕ್ಕೇರಿ ಪಟ್ಟಣದ ಗಣೇಶ ನಗರದ ಬಡಾವನೆಯಲ್ಲಿ ಪಾದಚಾರಿಗಳು ಮತ್ತು ಬೈಕ್ ಸವಾರರು ತಿರುಗಾಡಲು ಆಗದ ರಸ್ತೆಯ ದುಸ್ಥಿತಿ
ಹುಕ್ಕೇರಿ: ಬೇಗ ಪ್ರಾರಂಭಗೊಂಡ ಮುಂಗಾರು ಮಳೆ ಒಂದೆಡೆ ರೈತರಿಗೆ ಖುಷಿ ತಂದಿದ್ದರೆ, ಪಟ್ಟಣದ ರಹವಾಸಿಗಳಿಗೆ ಒಂದು ರೀತಿ ಅವ್ಯವಸ್ಥೆ ಮಾಡಿದೆ ಎಂದರೆ ತಪ್ಪಾಗಲಾರದು.
ಏಕೆಂದರೆ, ಪಟ್ಟಣದ ಬಹುತೇಕ ರಸ್ತೆಗಳು ಒಳ ಚರಂಡಿ ಯೋಜನೆ (ಅಂಡರ್ ಗ್ರೌಂಡ್ ಡ್ರೈನೇಜ್ ಯುಜಿಡಿ) ಅಡಿ ಕೈಗೊಂಡ ಕಾಮಗಾರಿಯಿಂದ ರಸ್ತೆಗಳು ಅಧೋಗತಿಗೆ ತಲುಪಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳು ಸರ್ಕಸ್ ಮಾಡುತ್ತ ಸಂಚರಿಸುವಂತಾಗಿದೆ.
ಪಟ್ಟಣದ ಹಳ್ಳದಕೇರಿ, ಬಸವ ನಗರ, ಗಣೇಶ ನಗರ, ಜಯನಗರ ಸೇರಿದಂತೆ ಜನನಿಬಿಡ ರಸ್ತೆಗಳಲ್ಲಿ ಒಂದು ಸುತ್ತು ಹಾಕಿಬಂದರೆ ಸಾಕು ತಗ್ಗು ಗುಂಡಿಗಳದ್ದೇ ಕಾರಬಾರು. ಮಳೆಯ ಆರಂಭದಲ್ಲೆ ಈ ಪರಿಸ್ಥಿತಿಯಾದರೆ, ಮುಂದೆ ಏನು ಎಂಬುದು ರಹವಾಸಿಗಳ ಪ್ರಶ್ನೆಯಾಗಿದೆ.
ಶಾಸಕರಿಗೂ ಕ್ಯಾರೇ ಎನ್ನದ ಗುತ್ತಿಗೆದಾರ?: ಈ ಕುರಿತು ರಹವಾಸಿಗಳು ಪುರಸಭೆಯಲ್ಲಿ ಮತ್ತು ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಶಾಸಕ ನಿಖಿಲ್ ಕತ್ತಿ ಅವರ ಗಮನ ಸೆಳೆದಾಗ, ಪೈಪ್ ಲೈನ್ ಹಾಕಲು ಅಗೆದ ರಸ್ತೆಯನ್ನು ಸಮತೋಲಾಲವಾಗಿ ಮಾಡಿ, ಜನರಿಗೆ ಅನುಕೂಲ ಮಾಡಿ ಕೊಡಿ ಎಂದು ಎಚ್ಚರಿಕೆ ನೀಡಿದ್ದರು. ಆದರೆ, ಶಾಸಕರ ಮುಂದೆ ಒಪ್ಪಿಕೊಂಡ ಗುತ್ತಿಗೆದಾರ, ಅಪ್ಪಿತಪ್ಪಿಯೂ ಕಾಮಗಾರಿ ಕಡೆ ಹಾಯ್ದಿಲ್ಲ. ಮಳೆ ನಿರಂತರ ಸುರಿಯುತ್ತಿರುವುದರಿಂದ ಜನರು ತಿರುಗಾಡಲಿಕ್ಕೆ ಆಗುತ್ತಿಲ್ಲ. ಕೆಲವೊಮ್ಮೆ ತಿರುಗಾಡಿದವರು ಬಿದ್ದ ಘಟನೆಗಳು ನಡೆದಿವೆ.
ಸಂಪರ್ಕ ರಸ್ತೆ: ಬೈಪಾಸ್ ಸಂಪರ್ಕಿಸುವ ಪಟ್ಟಣದ ಏಕೈಕ ರಸ್ತೆಯಾದ ಬೆಲ್ಲದ ಬಾಗೇವಾಡಿ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಸಂಚಾರಕ್ಕೆ ಅತೀವ ತೊಂದರೆಯಾಗುತ್ತಿದೆ. ವಾಹನ ಚಾಲಕರು ಮತ್ತು ಬೈಕ್ ಸವಾರರು ಸಂಚಾರಕ್ಕೆ ಹರಸಾಹಸ ಪಡಬೇಕಾಗುತ್ತಿದೆ. ಈ ರಸ್ತೆಯಲ್ಲಿ ಬಿದ್ದು ಏಟು ತಿಂದವರಿಗೆ ಲೆಕ್ಕವೇ ಇಲ್ಲ.
ಪುರಸಭೆ ನಿರ್ಲಕ್ಷ್ಯ: ಮಳೆಗಾಲದ ನಿರ್ವಹಣೆಗೆ ಪುರಸಭೆ ಮೊದಲೇ ತಯಾರಿ ಮಾಡಿಕೊಳ್ಳಬೇಕಾಗಿತ್ತು. ಸಂಚಾರಕ್ಕೆ ತೊಡಕಾದ ರಸ್ತೆಗಳ ದುರಸ್ತಿ ಮಾಡಬೇಕು. ಅದು ನಿರ್ಲಕ್ಷ್ಯ ವಹಿಸಿದ್ದರಿಂದ ವಾಹನ ಸವಾರರಿಗೆ ಪರದಾಡುವ ಪರಿಸ್ಥಿತಿ ಬಂದಿದೆ ಎಂದು ಬಸವ ನಗರ ನಿವಾಸಿ ಅನಿಲ ಗುಡಸಿ ಮತ್ತು ರಮೇಶ್ ಹುಂಜಿ ದೂರಿದ್ದಾರೆ.
ರೋಗಕ್ಕೆ ಆಹ್ವಾನ!: ಒಂದೆಡೆ ರಸ್ತೆ ಕೆಟ್ಟಿವೆ. ಮತ್ತೊಂದೆಡೆ ವಿವಿಧ ಮಾರ್ಗಗಳ ರಸ್ತೆಗಳಲ್ಲಿ ನಿಲ್ಲುತ್ತಿರುವ ಮಳೆನೀರು ಹರಿದುಹೋಗುತ್ತಿಲ್ಲ. ಇದರಿಂದ ಸಂಚಾರಕ್ಕೆ ತೊಂದರೆಯಾಗುವ ಜತೆಗೆ ಆ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಅನಾರೋಗ್ಯಕರ ವಾತಾವರಣ ಸೃಷ್ಟಿಯಾಗುತ್ತಿದೆ ಎಂಬ ಆರೋಪ ಜನರಿಂದ ಕೇಳಿ ಬರುತ್ತಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.