ADVERTISEMENT

ಬೆಲೆ ಕಳೆದುಕೊಳ್ಳುತ್ತಿರುವ ಮಾನವ ಸಂಬಂಧ: ವಿಷಾದ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 15:35 IST
Last Updated 22 ಸೆಪ್ಟೆಂಬರ್ 2020, 15:35 IST
ತೆಲಸಂಗದ ಹಿರೇಮಠದಲ್ಲಿ ಮಂಗಳವಾರ ನಡೆದ ನಿವೃತ್ತ ಸೈನಿಕ ಶ್ರೀಕಾಂತ ಎಂ. ಖೊಬ್ರಿ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು
ತೆಲಸಂಗದ ಹಿರೇಮಠದಲ್ಲಿ ಮಂಗಳವಾರ ನಡೆದ ನಿವೃತ್ತ ಸೈನಿಕ ಶ್ರೀಕಾಂತ ಎಂ. ಖೊಬ್ರಿ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು   

ತೆಲಸಂಗ: ‘ಆಧುನಿಕತೆಯ ಭರಾಟೆಯಲ್ಲಿ ಅವಿಭಕ್ತ ಕುಟುಂಬದಿಂದ ವಿಭಕ್ತ ಕುಟುಂಬದೆಡೆಗೆ ಸಾಗಿದಂತೆ ಮಾನವ ಸಂಬಂಧಗಳು ನಿಧಾನಕ್ಕೆ ಬೆಲೆ ಕಳೆದುಕೊಳ್ಳಲಾರಂಭಿಸಿವೆ’ ಎಂದು ಅಥಣಿ ಗಚ್ಚಿನ ಮಠದ ಶಿವಬಸವ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

ಪಂ.ಪುಟ್ಟರಾಜ ಗವಾಯಿ ರಂಗ ಸಂಸ್ಥೆ ಮತ್ತು ಚಂದ್ರಶೇಖರ ಆಜಾದ್ ಗೆಳೆಯರ ಬಳಗದಿಂದ ನಿವೃತ್ತ ಸೈನಿಕ ಶ್ರೀಕಾಂತ ಎಂ.ಖೊಬ್ರಿ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ಇಲ್ಲಿನ ಹಿರೇಮಠದಲ್ಲಿ ಆಯೋಜಿಸಿದ್ದ ನಿವೃತ್ತ ಸೈನಿಕರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬದುಕು, ಸಮಾಜ, ದೇಶ, ಆರ್ಥಿಕತೆ, ವೈಜ್ಞಾನಿಕತೆ, ವೈಚಾರಿಕತೆ, ಆರೋಗ್ಯ ವ್ಯವಸ್ಥೆ, ಕ್ರೀಡೆ ಎಲ್ಲವೂ ಸ್ಮಾರ್ಟ್‌ ಆಗುತ್ತಿರುವ ಸಂಕ್ರಮಣ ಕಾಲದಲ್ಲಿ ಸಂಬಂಧಗಳು ವಿನಾಶದಂಚಿಗೆ ಹೋಗುವ ಅಪಾಯ ಎದುರಿಸುತ್ತಿವೆ. ಸುತ್ತಮುತ್ತಲಿನ ಜನರು, ಇತರ ಜೀವಿಗಳು, ಪರಿಸರದೊಂದಿಗೆ ಮನುಷ್ಯ ಹೇಗಿರಬೇಕು ಎಂಬುದನ್ನು ಈ ಕೆಲವು ತಿಂಗಳುಗಳಲ್ಲಿ ಕೊರೊನಾ ಕಲಿಸಿದೆ’ ಎಂದರು.

ADVERTISEMENT

ಹಿರೇಮಠದ ವೀರೇಶ್ವರ ದೇವರು ಮಾತನಾಡಿ, ‘ಶ್ರೀಕಾಂತ 21 ವರ್ಷ ದೇಶ ಸೇವೆ ಮಾಡಿ ನಿವೃತ್ತಿ ನಂತರದ ದಿನಗಳನ್ನು ಯುವಕರ ವ್ಯಕ್ತಿತ್ವ ವಿಕಸನಕ್ಕಾಗಿಯೇ ಕಳೆದವರು. ಏಳು ಸರ್ಕಾರಿ ನೌಕರಿಗಳು ಅವರನ್ನು ಅರಸಿ ಬಂದಿದ್ದವು. ಗ್ರಾಮದಲ್ಲೊಬ್ಬರನ್ನು ಕೆಎಎಸ್‌ ಅಧಿಕಾರಿಯನ್ನಾಗಿ ಮಾಡಬೇಕು ಮತ್ತು ಸ್ಟಡಿ ಸರ್ಕಲ್ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಾದ ಗ್ರಂಥಾಲಯ ನಿರ್ಮಿಸಬೇಕು ಎನ್ನುವ ಆಸೆ ಹೊಂದಿದ್ದರು’ ಎಂದು ನೆನೆದರು.

ಹಿರಿಯರಾದ ಐ.ಎಲ್. ಕುಮಠಳ್ಳಿ, ಡಾ.ಬಿ.ಎಸ್. ಕಾಮನ್, ಗುರುರಾಜ ಕುಂಬಾರ ಮಾತನಾಡಿದರು. ಗಂಗಪ್ಪ ಗಂಗಾಧರ, ಅಶೋಕ ಉಂಡೋಡಿ, ನಬಿಸಾಬ ಮುಜಾವರ, ಸಿದ್ರಾಯ ಕಳಸಗೊಂಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.