ADVERTISEMENT

ಕ್ವಾರಂಟೈನ್ ಆಗುವುದಿಲ್ಲ: ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 14:16 IST
Last Updated 3 ಆಗಸ್ಟ್ 2020, 14:16 IST
ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ   

ಅಥಣಿ: ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ತೀರಾ ಸಮೀಪದಿಂದ ಭೇಟಿಯಾಗಿಲ್ಲ. ಹೀಗಾಗಿ ನಾನು ಕ್ವಾರಂಟೈನ್‌ ಆಗುವ ಅಗತ್ಯವಿಲ್ಲ’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಇಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಆದಷ್ಟು ಬೇಗ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ. ನನ್ನ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದವರು ಕ್ವಾರೆಂಟೈನ್ ಆಗಿ ಎಂದು ಅವರು ಹೇಳಿದ್ದಾರೆ. ಆದರೆ, ಇತ್ತೀಚೆಗೆ ನವದೆಹಲಿಗೆ ಹೋಗಿ ಬಂದ ವಿಚಾರವನ್ನು ಅಂತರ ಕಾಯ್ದುಕೊಂಡು ಅವರಿಗೆ ತಿಳಿಸಿದ್ದೇನೆ. ಹೀಗಾಗಿ ನಾನು ಕ್ವಾರಂಟೈನ್ ಆಗುವುದಿಲ್ಲ’ ಎಂದು ತಿಳಿಸಿದರು.

ಮುಂದಿನ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಯುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವ‌ರು, ‘ನನಗೂ ಅದಕ್ಕೂ ಸಂಬಂಧವಿಲ್ಲ. ಅಭಿಮಾನಿಗಳು ಅವರವರ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಊಹಾಪೋಹಗಳಿಗೆ ಕಿವಿಗೊಡಬಾರದು’ ಎಂದರು.

ADVERTISEMENT

‘ಸಚಿವ ಶ್ರೀಮಂತ ಪಾಟೀಲರು ತಾಲ್ಲೂಕಿನ ಶಿನಾಳದಲ್ಲಿ ಜನಿಸಿದವರು. ಅಪ್ಪಟ ಕನ್ನಡಿಗ. ನಾಡು–ನುಡಿ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಉದ್ಯಮಿಗೆ ಅರ್ಥವಾಗಲೆಂದು ಮರಾಠಿಯಲ್ಲಿ ಕೆಲವು ಮಾತುಗಳನ್ನು ಆಡಿದ್ದಾರೆ. ನೂತನ ಸಕ್ಕರೆ ಕಾರ್ಖಾನೆಯಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಕೋರಿದ್ದಾರೆ. ಇದನ್ನು ಅಪಾರ್ಥ ಕಲ್ಪಿಸಬಾರದು’ ಎಂದು ಪ್ರತಿಕ್ರಿಯಿಸಿದರು.

ಸಚಿವ ಶ್ರೀಮಂತ ಪಾಟೀಲ, ಶಾಸಕರಾದ ಮಹೇಶ ಕುಮಠಳ್ಳಿ, ಪಿ. ರಾಜೀವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.