ADVERTISEMENT

ಸಂಭ್ರಮದ ‘ಈದ್–ಉಲ್–ಫಿತ್ರ್’

​ಪ್ರಜಾವಾಣಿ ವಾರ್ತೆ
Published 5 ಜೂನ್ 2019, 15:42 IST
Last Updated 5 ಜೂನ್ 2019, 15:42 IST
ಬೆಳಗಾವಿಯಲ್ಲಿ ಈದ್–ಉಲ್–ಪಿತ್ರ್‌ ಅಂಗವಾಗಿ ಮುಸ್ಲಿಮರು ಬುಧವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು
ಬೆಳಗಾವಿಯಲ್ಲಿ ಈದ್–ಉಲ್–ಪಿತ್ರ್‌ ಅಂಗವಾಗಿ ಮುಸ್ಲಿಮರು ಬುಧವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು   

ಬೆಳಗಾವಿ: ತ್ಯಾಗ, ಪ್ರೀತಿ ಹಾಗೂ ಶಾಂತಿಯ ಸಂಕೇತವಾದ ‘ಈದ್–ಉಲ್–ಫಿತ್ರ್‌’ ಹಬ್ಬವನ್ನು ಮುಸ್ಲಿಮರು ಜಿಲ್ಲೆಯಾದ್ಯಂತ ಬುಧವಾರ ಶ್ರದ್ಧಾ ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಿದರು. ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ರಂಜಾನ್ ಮಾಸದಲ್ಲಿ ಕೈಗೊಳ್ಳುವ ಉಪವಾಸ (ರೋಜಾ) ವ್ರತಾಚರಣೆಯನ್ನು ಕೊನೆಗೊಳಿಸುವ ದಿನವಾಗಿ ಈದ್‌ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ನಗರದ ಜಿಲ್ಲಾ ನ್ಯಾಯಾಲಯದ ಬಳಿಯಿರುವ ಅಂಜುಮನ್‌– ಇ– ಇಸ್ಲಾಂ ಸಂಸ್ಥೆಯ ಈದ್ಗಾ ಮೈದಾನ, ವಡಗಾವಿ ಹಾಗೂ ತಿಲಕವಾಡಿಯ ಆರ್‌ಪಿಡಿ ಕಾಲೇಜು ಎದುರಿನ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ನ್ಯಾಯಾಲಯ ಬಳಿಯ ಈದ್ಗಾ ಮೈದಾನಕ್ಕೆ ನೆಹರೂ ನಗರ, ಅಜಂ ನಗರ, ಶಾಹುನಗರ, ಶಿವಾಜಿನಗರ, ಗಾಂಧಿನಗರ, ಆರ್‌ಟಿಒ ಕಡೆಯಿಂದ, ಚವಾಟಗಲ್ಲಿ ಮೂಲಕ ಸಾವಿರಾರು ಸಂಖ್ಯೆಯಲ್ಲಿ ಮೆರವಣಿಗೆ ಬಂದ ಅವರು, ಧರ್ಮ ಗುರುಗಳ ಸಮ್ಮುಖದದಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ADVERTISEMENT

ಕಾಂಗ್ರೆಸ್‌ ಮುಖಂಡ ಫಿರೋಜ್‌ ಸೇಠ್‌ ಶುಭಾಶಯ ವಿನಿಮಯ ಮಾಡಿಕೊಂಡರು. ಡಿಸಿಪಿ ಸೀಮಾ ಲಾಟ್ಕರ್‌, ಎಸಿಪಿ ಎನ್.ವಿ. ಭರಮನಿ ಮೊದಲಾದ ಅಧಿಕಾರಿಗಳು ಸ್ಥಳಕ್ಕೆ ಬಂದು ಶುಭ ಕೋರಿದರು.

ಹಬ್ಬದ ಅಂಗವಾಗಿ ಮನೆಗಳಲ್ಲಿ ಶೀರ್‌ ಖೋರ್ಮಾ’(ಶಾವಿಗೆ ಪಾಯಸ) ಹಾಗೂ ಮಾಂಸದಡುಗೆ ಮಾಡಿ ಸವಿದು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.