ADVERTISEMENT

ಚಂಡಕಿ ಅಜ್ಜನ ಮೂರ್ತಿ ಅನಾವರಣ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2022, 14:05 IST
Last Updated 7 ಫೆಬ್ರುವರಿ 2022, 14:05 IST
ಅಥಣಿ ತಾಲ್ಲೂಕಿನ ನಂದೇಶ್ವರ ಗ್ರಾಮದಲ್ಲಿ ನೂತನವಾಗಿ ಪ್ರತಿಷ್ಠಾಪಿಸಿದ ಲಿಂ.ದಂಡಪ್ಪ ಚಂಡಕಿ ಅಜ್ಜನವರ ಮೂರ್ತಿಗೆ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದರು
ಅಥಣಿ ತಾಲ್ಲೂಕಿನ ನಂದೇಶ್ವರ ಗ್ರಾಮದಲ್ಲಿ ನೂತನವಾಗಿ ಪ್ರತಿಷ್ಠಾಪಿಸಿದ ಲಿಂ.ದಂಡಪ್ಪ ಚಂಡಕಿ ಅಜ್ಜನವರ ಮೂರ್ತಿಗೆ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದರು   

ಅಥಣಿ: ‘ಎರಡು ನೂರು ವರ್ಷಗಳ ಹಿಂದೆ ಆಗಿ ಹೋಗಿರುವ ಲಿಂ.ದುಂಡಪ್ಪ ಚಂಡಕಿ ಅಜ್ಜನವರು ತಮ್ಮ ಬಳಿಯಲ್ಲಿದ್ದ ಕಂಬಳಿ ಬೀಸಿಯೇ ಗ್ರಾಮಸ್ಥರಿಗೆ ಬೇಕಾದ ವಸ್ತುವನ್ನು ದೊರಕಿಸಿಕೊಡುತ್ತಿದ್ದರು ಎನ್ನುವುದು ಇತಿಹಾಸದಲ್ಲಿ ಉಳಿದಿದೆ. ಅಂಬಲಿ ಮತ್ತು ಕಂಬಳಿಯು ಮಿಕ್ಕಿದೆಲ್ಲ ಆಸ್ತಿಗಿಂತಲೂ ಜಾಸ್ತಿ ಎನ್ನುವ ಸಿದ್ಧಾಂತ ಅವರದಾಗಿತ್ತು’ ಎಂದುಮುಖಂಡ ರಮೇಶಗೌಡ ಪಾಟೀಲ ಹೇಳಿದರು.

ತಾಲ್ಲೂಕಿನ ನಂದೇಶ್ವರ ಗ್ರಾಮದಲ್ಲಿ ಲಿಂ.ದುಂಡಪ್ಪ ಚಂಡಕಿ (ಗಡಾಮ) ಅಜ್ಜನವರ ಮೂರ್ತಿ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಅಂತಹ ಸಿದ್ಧಿ ಪುರುಷನ ದೇವಸ್ಥಾನವನ್ನು ಗ್ರಾಮದಲ್ಲಿ ನಿರ್ಮಿಸಿರುವುದು ಹೆಮ್ಮೆಯ ಸಂಗತಿ’ ಎಂದರು.

ADVERTISEMENT

‘ಗ್ರಾಮದ ಪ್ರತಿ ಧಾರ್ಮಿಕ, ಅಧ್ಯಾತ್ಮಿಕ ಕಾರ್ಯಕ್ರಮಗಳು ನಿಯಮಬದ್ಧವಾಗಿ ನಡೆಯಲು ದುಂಡಪ್ಪ ಚಂಡಕಿ ಅವರ ಕಂಬಳಿ ಬೇಕಾಗುತ್ತಿತ್ತು. ಅವರ ಕಂಬಳಿ ಭಕ್ತರ ಪಾಲಿನ ಕಾಮಧೇನುವಾಗಿತ್ತು. ಕಂಬಳಿ ಬೀಸಿ ಮಳೆ–ಬೆಳೆ ತರಿಸಿದ್ದ ಶ್ರೇಯಸ್ಸು ಅವರಾಗಿದೆ. ಕಂಬಳಿಯನ್ನು ಹೆಗಲ ಮೇಲೆ ಹಾಕಿಕೊಂಡು ಅವರು ಗ್ರಾಮ ಸುತ್ತು ಹಾಕಿ ಬಂದರೆ ತೊಂದರೆಗಳು ದೂರವಾಗುತ್ತಿದ್ದವೆಂದು ಹಿರಿಯರು ಹೇಳುತ್ತಿದ್ದುದನ್ನು ಕೇಳಿದ್ದೇವೆ’ ಎಂದು ತಿಳಿಸಿದರು.

ಬಬಲಾದಿ ಮಠದ ಪರಸಪ್ಪ ಮುತ್ಯಾ, ಬನಹಟ್ಟಿಯ ಸಿದಗೌಡ ಪಾಟೀಲ, ಪ್ರಭು ಪೂಜಾರಿ, ಬಸಪ್ಪ ಚಂಡಕಿ, ಬಾಳಾಸಾಹೇಬ ಪಾಟೀಲ, ಬಸಪ್ಪ ಮುಧೋಳ, ಅದೃಶಿ ಪಾಟೀಲ, ಹಣಮಂತ ಚಂಡಕಿ, ರಾಮಣ್ಣ ಪರಟಿ, ಸತ್ಯಪ್ಪ ಬಳವಾಡ, ಗುರುಲಿಂಗ ತೇಲಿ, ಗಂಗಪ್ಪ ಶಿರಹಟ್ಟಿ, ಬಾಳಪ್ಪ ಯಲ್ಲಟ್ಟಿ, ಮಹಾಂತೇಶ ಚಂಡಕಿ, ಭೀಮಗೌಡ ಪಾಟೀಲ, ಬಸಪ್ಪ ಬಿರಡಿ, ಕಾಡಪ್ಪ ತೇಲಿ, ಕಲ್ಲಪ್ಪ ಜನವಾಡ, ಧರೆಪ್ಪ ಮಗದುಮ್ ಇದ್ದರು.

ಗ್ರಾಮದ ರೇಣುಕಾದೇವಿ ಸೇರಿದಂತೆ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಜರುಗಿತು. ಪ್ರಸಾದ ವ್ಯವಸ್ಥೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.