ಗೋಕಾಕ (ಬೆಳಗಾವಿ ಜಿಲ್ಲೆ): ನಿಯಮ ಬಾಹಿರವಾಗಿ ಆಸ್ತಿ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಶಿಂಧಿಕುರಬೇಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಈರಪ್ಪ ಪಾಟೀಲ, ಉಪಾಧ್ಯಕ್ಷ ಭೀಮಪ್ಪ ಯಲ್ಲಪ್ಪ ಬರನಾಳಿ ಸೇರಿ ಎಲ್ಲ 28 ಸದಸ್ಯರ ಸದಸ್ಯತ್ವವನ್ನು ರದ್ದುಪಡಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಆದೇಶಿಸಿದ್ದಾರೆ.
‘ಸದಸ್ಯತ್ವ ರದ್ದು ಪಡಿಸಿದ್ದಲ್ಲದೇ, ಎಲ್ಲ ಅನರ್ಹ ಸದಸ್ಯರು ಮುಂದಿನ ಆರು ವರ್ಷಗಳ ಅವಧಿಗೆ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧ ವಿಧಿಸಲಾಗಿದೆ’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಶಿಂಧಿಕುರಬೇಟ ಗ್ರಾಮದಲ್ಲಿ ಶಾಂತಾ ನಾಗಪ್ಪ ಪೋತದಾರ ಅವರ ಹೆಸರಿನಲ್ಲಿದ್ದ ಸ.ನಂ 611ರ ಆಸ್ತಿಯನ್ನು ನಿಯಮ ಬಾಹೀರವಾಗಿ ರಾಮಚಂದ್ರ ದಾನಪ್ಪ ಪೋತದಾರ ಎಂಬುವರ ಹೆಸರಿಗೆ ನಕಲಿ ದಾಖಲೆ ಸೃಷ್ಟಿಸಿ 2022ರ ಫೆಬ್ರುವರಿ 25 ಮತ್ತು ಮಾರ್ಚ್ 25ರಂದು ನಡೆದಿದ್ದ ಸಾಮಾನ್ಯ ಸಭೆಗಳಲ್ಲಿ ವರ್ಗಾವಣೆಗೆ ಸರ್ವಸಮ್ಮತದ ಒಪ್ಪಿಗೆ ನೀಡುವ ಮೂಲಕ ಪಂಚಾಯತ್ ರಾಜ್ ಅಧಿನಿಯಮ ಉಲ್ಲಂಘನೆ ಮಾಡಲಾಗಿದೆ. ಈ ಸಂಬಂಧ ಬೆಳಗಾವಿಯ ಪ್ರಾದೇಶ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.