ADVERTISEMENT

ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ ನಷ್ಟಕ್ಕೆ ಅಕ್ರಮವೇ ಕಾರಣ: ಸಚಿವರ ಎದುರು ದೂರು

ಅನಿರೀಕ್ಷಿತ ಭೇಟಿ ನೀಡಿದ ಸಚಿವರ ಎದುರು ದೂರುಗಳ ಸುರಿಮಳೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 15:47 IST
Last Updated 22 ಜೂನ್ 2025, 15:47 IST
ಎಂ.ಕೆ.ಹುಬ್ಬಳ್ಳಿ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿದ ಸಚಿವ ಶಿವಾನಂದ ಪಾಟೀಲರಿಗೆ ಕಾರ್ಖಾನೆ ನಷ್ಟದ ಬಗ್ಗೆ ರೈತ ಮುಖಂಡರು, ಆಡಳಿತ ಮಂಡಳಿ ಪದಾಧಿಕಾರಿಗಳು, ಕಾರ್ಮಿಕರು ವಿವರಣೆ ನೀಡಿದರು
ಎಂ.ಕೆ.ಹುಬ್ಬಳ್ಳಿ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿದ ಸಚಿವ ಶಿವಾನಂದ ಪಾಟೀಲರಿಗೆ ಕಾರ್ಖಾನೆ ನಷ್ಟದ ಬಗ್ಗೆ ರೈತ ಮುಖಂಡರು, ಆಡಳಿತ ಮಂಡಳಿ ಪದಾಧಿಕಾರಿಗಳು, ಕಾರ್ಮಿಕರು ವಿವರಣೆ ನೀಡಿದರು   

ಎಂ.ಕೆ.ಹುಬ್ಬಳ್ಳಿ: ಇಲ್ಲಿನ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಅನಿರೀಕ್ಷಿತ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಖಾನೆಯ ದುಸ್ಥಿತಿಯ ಬಗ್ಗೆ ರೈತ ಮುಖಂಡರು, ಕಾರ್ಮಿಕರು ಹಾಗೂ ಆಡಳಿತ ಮಂಡಳಿಯಿಂದ ಪರಸ್ಪರ ದೂರುಗಳ ಸುರಿಮಳೆಯೇ ಸುರಿಯಿತು.

ಆಡಳಿತ ಮಂಡಳಿಗಳ ಭ್ರಷ್ಟಾಚಾರದಿಂದ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ ನಷ್ಟಕ್ಕೀಡಾಗಿದೆ. ಕಬ್ಬು ಬೆಳೆಗಾರರ ಹಿತರಕ್ಷಣೆ ಬದಲಿಗೆ ಆಡಳಿತ ಮಂಡಳಿಯ ಕೆಲವರು ಲೂಟಿಗೆ ಇಳಿದ ಪರಿಣಾಮ ಕೋಟ್ಯಂತರ ರೂಪಾಯಿ ಸಾಲದ ಸುಳಿಗೆ ಸಿಲುಕಿದೆ. ಕಬ್ಬು ಬೆಳೆಗಾರರಿಗೆ ಕಬ್ಬು ಪೂರೈಕೆ ಮಾಡಿದ ಹಣ ಪಾವತಿ ಮಾಡಿಲ್ಲ ಎಂದು ರೈತ ಸಂಘದ ಮುಖಂಡರು ದೂರಿದರು.

ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಹಾಗೂ ರೈತ ಮುಖಂಡರ ತಿಕ್ಕಾಟದಿಂದ ಈ ಸಹಕಾರ ಸಕ್ಕರೆ ಕಾರ್ಖಾನೆ ನಷ್ಟಕ್ಕೆ ಬರಲು ಕಾರಣ ಎಂದು ಆಡಳಿತ ಮಂಡಳಿ ನಿರ್ದೇಶಕರು ಸಚಿವರಿಗೆ ವಿವರಣೆ ನೀಡಿದರು. ಈ ಕಾರ್ಖಾನೆಯನ್ನೇ ನಂಬಿಕೊಂಡು ನೂರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡು ಕಾರ್ಖಾನೆಯನ್ನು ನಡೆಸಲು ಮುಂದೆ ಬರಬೇಕು ಎಂದು ಕಾರ್ಮಿಕರು ಸಚಿವ ಶಿವಾನಂದ ಪಾಟೀಲ ಅವರಿಗೆ ಮನವಿ ಮಾಡಿದರು.

ADVERTISEMENT

ನಷ್ಟದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ರೈತ ಸಂಘದ ಮುಖಂಡ ಆನಂದ ಹುಚ್ಚಗೌಡರ, ‘ಈ ಹಿಂದಿನ ಆಡಳಿತ ಮಂಡಳಿ ಹಾಗೂ ಪ್ರಸ್ತುತ ಆಡಳಿತ ಮಂಡಳಿಯ ಲೋಪವೇ ಕಾರ್ಖಾನೆ ದುಸ್ಥಿತಿಗೆ ಕಾರಣ. ಆಡಳಿತ ಮಂಡಳಿಗಳು ಸಕ್ಕರೆ ಇಳುವರಿ ಕಡಿಮೆ ತೋರಿಸಿದವು. ದೊಡ್ಡ ಪ್ರಮಾಣದ ಸಕ್ಕರೆ ದಾಸ್ತಾನನ್ನು ಅಕ್ರಮವಾಗಿ ದಾಸ್ತಾನು ಮಾಡಿ, ಮಾರಾಟ ಮಾಡಿದರು. ಈ ಅಕ್ರಮವನ್ನು ಪತ್ತೆ ಮಾಡಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದೆವು. ಆಗ ಅಕ್ರಮ ಸಾಬೀತಾಗಿದೆ’ ಎಂದು ವಿವರಿಸಿದರು.

ಅಕ್ರಮಗಳ ಬಗ್ಗೆ ದಾಖಲೆಗಳೊಂದಿಗೆ ಲೋಕಾಯುಕ್ತರಿಗೆ ದೂರು ನೀಡಲಾಗಿದೆ. ಅಕ್ರಮದಲ್ಲಿ ಭಾಗಿಯಾದವರು ಪಾರಾಗಲು ನಡೆಸಿದ ದೂರವಾಣಿ ಸಂಭಾಷಣೆಯ ದಾಖಲೆಗಳನ್ನೂ ಲೋಕಾಯುಕ್ತರಿಗೆ ನೀಡಿದ್ದೇವೆ ಎಂದು ಸಚಿವರಿಗೆ ವಿವರಿಸಿದರು.

ಆಡಳಿತ ಮಂಡಳಿ ನಿರ್ದೇಶಕ ಬಸವರಾಜ ಪುಂಡಿ ಮಾತನಾಡಿ, ‘ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳ ಸಂಖ್ಯೆ ಹೆಚ್ಚಾಗಿರುವುದೂ ನಷ್ಟದ ಕಾರಣಗಳಲ್ಲಿ ಒಂದು. ಅಗತ್ಯ ಪ್ರಮಾಣದ ಕಬ್ಬು ನಮ್ಮ ಕಾರ್ಖಾನೆಗೆ ಬರುತ್ತಿಲ್ಲ. ರೈತ ಸಂಘದ ಮುಖಂಡರ ಅಸಹಕಾರ ಧೋರಣೆಯೂ ಇದೆ ಎಂದು ಹೇಳಿದರು.

ನಷ್ಟಕ್ಕೆ ಕಾರಣವೇನು ಎಂಬ ಬಗ್ಗೆ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸದ ಕಾರ್ಮಿಕರು, ಈ ಕಾರ್ಖಾನೆಯನ್ನು ಪುನರಾರಂಭ ಮಾಡಬೇಕು’ ಎಂದು ಸಚಿವರಿಗೆ ಮನವಿ ಮಾಡಿದರು.

‘ನಮ್ಮ ತಂದೆ ರುದ್ರಪ್ಪ ಮೊಕಾಶಿ ಅವರ ತಂಡ ಆಡಳಿತದ ಜವಾಬ್ದಾರಿ ವಹಿಸಿಕೊಂಡಿದ್ದಾಗ ಕಾರ್ಖಾನೆ ನಷ್ಟದಲ್ಲಿತ್ತು. ಮೂರು ವರ್ಷಗಳ ಅವಧಿಯಲ್ಲಿ ಈ ಕಾರ್ಖಾನೆಯ ಸಾಲ ತೀರಿಸಿ ಲಾಭದತ್ತ ಮುನ್ನಡೆಸಿ 15 ಕೋಟಿ ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದರು. ಆದರೆ ನಂತರ ಅಧಿಕಾರಕ್ಕೆ ಬಂದವರ ದುರಾಡಳಿತದಿಂದ ಕಾರ್ಖಾನೆ ನಷ್ಟಕ್ಕೀಡಾಗಿದೆ’ ಎಂದು ರೈತ ಮುಖಂಡ ಬಸವರಾಜ ಮೊಕಾಶಿ ವಿವರಿಸಿದರು.

ಕಾರ್ಖಾನೆಯ ಅಧ್ಯಕ್ಷರು, ನಿರ್ದೇಶಕರು, ರೈತ ಸಂಘದ ಮುಖಂಡರು, ಕಾರ್ಖಾನೆ ಅಧಿಕಾರಿಗಳು, ನೌಕರರು, ಕಾರ್ಮಿಕರು ಮತ್ತು ರೈತರು ಇದ್ದರು.

22mkh1 ಎಂ.ಕೆ.ಹುಬ್ಬಳ್ಳಿ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿದ ಸಚಿವ ಶಿವಾನಂದ ಪಾಟೀಲರಿಗೆ ಕಾರ್ಖಾನೆ ನಷ್ಟದ ಬಗ್ಗೆ ರೈತ ಮುಖಂಡರು ಆಡಳಿತ ಮಂಡಳಿ ಪದಾಧಿಕಾರಿಗಳು ಕಾರ್ಮಿಕರು ವಿವರಣೆ ನೀಡಿದರು.

₹160 ಕೋಟಿ ಸಾಲ

ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ ವಿವಿಧ ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳಿಂದ ಒಟ್ಟು ₹135 ಕೋಟಿ ಸಾಲ ಪಡೆದಿದ್ದು ಬಡ್ಡಿ ಸೇರಿ ₹160 ಕೋಟಿಗಳಷ್ಟಾಗಿದೆ. ಮತ್ತೊಂದು ಬ್ಯಾಂಕಿನಲ್ಲಿ ₹14 ಕೋಟಿ ಕಟಾವು ಮತ್ತು ಸಾಗಾಟ ಸಾಲ ಇದೆ ಎಂದು ಅಧಿಕಾರಿಗಳು ಸಚಿವರಿಗೆ ವಿವರಿಸಿದರು. ಕಬ್ಬು ಪೂರೈಕೆ ಮಾಡಿದ ರೈತರಿಗೆ ₹2.10 ಕೋಟಿ ಪಾವತಿ ಮಾಡಬೇಕಿದೆ. 7 ಲಕ್ಷ ಲೀಟರ್‌ ರೆಕ್ಟಿಫೈಡ್‌ ಸ್ಪಿರೀಟ್‌ ಮಾರಾಟ ಮಾಡಿ ರೈತರ ಬಾಕಿ ಪಾವತಿ ಮಾಡಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.