ರಾಮದುರ್ಗ: ಉಚಿತ ಭಾಗ್ಯಗಳಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ವಿರೋಧ ಪಕ್ಷದವರು ಬೊಬ್ಬೆ ಹಾಕುತ್ತಿದ್ದಾರೆ. ಗ್ಯಾರಂಟಿ ಯೋಜನೆಯ ಜೊತೆಗೆ ರಾಜ್ಯದ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.
ರಾಮದುರ್ಗದ ವಿಭಾಗ ಕಚೇರಿ ಮತ್ತು ಉಪವಿಭಾಗದ ಕಚೇರಿಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಳವಡಿಸಿರುವ ಯೋಜನೆಗಳು ಅಭವೃದ್ಧಿ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.
ರೈತರು ತಮ್ಮ ಟಿಸಿಗಳು ಸುಟ್ಟರೆ ದೂರದ ಬೈಲಹೊಂಗಲಕ್ಕೆ ಹೋಗಿ ಬರಬೇಕಾಗಿತ್ತು. ರೈತರ ಸಮಸ್ಯೆ ನಿವಾರಣೆಗೆಂದು ರಾಮದುರ್ಗದಲ್ಲಿಯೇ ವಿದ್ಯುತ್ ಪರಿಕರಗಳನ್ನು ದುರಸ್ತಿ ಮಾಡುವ ವಿಭಾಗ ಮಟ್ಟದ ಕಚೇರಿ ಆರಂಭಿಸಲಾಗಿದೆ. ಇದರೊಂದಿಗೆ ವಿಭಾಗ ಮಟ್ಟದ ಡಿಎಸ್‌ಪಿ ಕಚೇರಿ ಮತ್ತು ಆರ್‌ಟಿಒ ಕಚೇರಿಗಳು ರಾಮದುರ್ಗದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ರಾಜ್ಯದಲ್ಲಿಯೇ ಅತಿ ಹೆಚ್ಚು ಅಭಿವೃದ್ಧಿ ಹೊಂದಿರುವ ಕ್ಷೇತ್ರ ರಾಮದುರ್ಗ ಕ್ಷೇತ್ರವಾಗಿದೆ. ಇಲ್ಲಿನ ಶಾಸಕರು ಜನಪರ ಯೋಜನೆಗಳ ಅನುಷ್ಠಾನದ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಸಾರ್ವಜನಿಕರು ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೆಸ್ಕಾಂ ಅಧ್ಯಕ್ಷ ಸೈಯದ್ ಅಜೀಮ್ ಪೀರ್ ಎಸ್. ಖಾದ್ರಿ ಹೇಳಿದರು.
ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಳ್ಳುವ ಸರ್ಕಾರಿ ಕಟ್ಟಡಗಳು ತೀವ್ರವಾಗಿ ಪೂರ್ಣಗೊಂಡು ಜನರ ಸೇವೆಗೆ ಅನಿಯಾಗಬೇಕು. ರಾಮದುರ್ಗ ಕ್ಷೇತ್ರದಲ್ಲಿ ಅಧಿಕಾರಿಗಳೊಂದಿಗೆ ಸಹಕಾರದಿಂದ ಇರುವ ಶಾಸಕರು ಇರುವಾಗ ಅಧಿಕಾರಿಗಳು ಜನರಿಗೆ ಉತ್ತಮ ಗುಣಮಟ್ಟದ ವಿದ್ಯುತ್ ನಿಗದಿತ ಸಮಯದಲ್ಲಿ ನೀಡಲು ಇಲಾಖೆ ಸಿದ್ದವಿದೆ ಎಂದು ಹೆಸ್ಕಾಂ ಎಂಡಿ ವೈಶಾಲಿ ಎಂ.ಎಲ್. ಹೇಳಿದರು.
ಪ್ರಾಸ್ತಾವಿಕವಾಗಿ ಮಾತು ಆರಂಭಿಸಿದ ಹೆಸ್ಕಾಂ ಮುಖ್ಯ ೆಂಜಿನಿಯರ್ ಪ್ರವೀಣಕುಮಾರ ಚಿಕಡೆ ಅವರು, ರಾಮದುರ್ಗದ ವಿಭಾಗದಲ್ಲಿ 94 ಸಾವಿರ ಗ್ರಾಹಕರು ಮತ್ತು 23 ಸಾವಿರ ರೈತರಿಗೆ ಸರಿಯಾದ ಪ್ರಮಾಣದಲ್ಲಿ ವಿದ್ಯುತ್ ನೀಡಲಾಗುತ್ತಿದೆ. 124 ಜನ ವಸತಿ ಪ್ರದೇಶಗಳಿಗೆ ನಿರಂತರ ವಿದ್ಯುತ್ ಯೋಜನೆಯಡಿ ವಿದ್ಯುತ್ ನೀಡಲಾಗುತ್ತಿದೆ. ತಾಲ್ಲೂಕಿನಲ್ಲಿ ಒಟ್ಟು 8 ಹೊಸದಾಗಿ 110 ಕೆ.ವಿ. ಸ್ಟೇಶನ್‌ಗಳು ಮಂಜೂರಾಗಿದ್ದು, ಅವು ತ್ವರಿತವಾಗಿ ಕಾರ್ಯ ಆರಂಭಿಸಲಾಗುವುದು ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಬಿ. ರಂಗನಗೌಡರ, ಪುರಸಭೆ ಅಧ್ಯಕ್ಷೆ ಲಕ್ಷ್ಮೀ ಕಡಕೋಳ, ಹೆಸ್ಕಾಂ ನಿರ್ದೇಶಕ ಎಸ್. ಜಗದೀಶ ಮಾತನಾಡಿದರು.
ಕಾರ್ಯನಿರ್ವಾಹಕ ಇಂಜಿನಿಯರ್ ರವೀಂದ್ರ ಸಣ್ಣಕ್ಕಿ ಸ್ವಾಗತಿಸಿದರು. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಪ್ರಕಾಶ ಕರಡಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.