ADVERTISEMENT

ಮತಾಂತರ ನಿಷೇಧ ಕಾಯ್ದೆಗೆ ಭಾರತೀಯ ಕ್ರೈಸ್ತ ಒಕ್ಕೂಟದ ವಿರೋಧ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2021, 12:44 IST
Last Updated 17 ಡಿಸೆಂಬರ್ 2021, 12:44 IST
ಭಾರತೀಯ ಕ್ರೈಸ್ತ ಒಕ್ಕೂಟದ ಸಭೆ
ಭಾರತೀಯ ಕ್ರೈಸ್ತ ಒಕ್ಕೂಟದ ಸಭೆ    

ಬೆಳಗಾವಿ: ಮತಾಂತರ ನಿಷೇಧ ಕಾಯ್ದೆ ವಿರೋಧಿಸಿ ಮತ್ತು ಕ್ರೈಸ್ತರ ಮೇಲಿನ ದೌರ್ಜನ್ಯ ಖಂಡಿಸಿ ಭಾರತೀಯ ಕ್ರೈಸ್ತ ಒಕ್ಕೂಟದವರು ಸುವರ್ಣ ವಿಧಾನಸೌಧ ಬಳಿ ಶುಕ್ರವಾರ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಿದರು.

‘ಈ ಕಾಯ್ದೆ ಜಾರಿಗೆ ತಂದರೆ ಸಂವಿಧಾನ ನೀಡಿರುವ ವಾಕ್‌ ಸ್ವಾತಂತ್ರ್ಯ ಮೊಟಕುಗೊಳಿಸಿದಂತಾಗುತ್ತದೆ. ಧರ್ಮ ಪ್ರಚಾರದ ಹಕ್ಕಿಗೆ ಚ್ಯುತಿಯಾಗುತ್ತದೆ. ವ್ಯಕ್ತಿಗತ ಆಯ್ಕೆ ಹಾಗೂ ಇಚ್ಛೆಗಳ ಹಕ್ಕಿಗೆ ವಿರುದ್ಧವಾಗಿದೆ’ ಎಂದು ದೂರಿದರು.

‘ಕಾಯ್ದೆಯಿಂದ ಗಲಭೆಕೋರರು ಹಾಗೂ ಅನೈತಿಕ ಪೊಲೀಸ್‌ಗಿರಿಗೆ ಅಸ್ತ್ರ ಕೊಟ್ಟಂತಾಗುತ್ತದೆ. ಸಂಘಟನೆಗಳವರು ತಮಗೆ ಆಗದ ಕ್ರೈಸ್ತ ಧರ್ಮ ಗುರುಗಳು ಮತ್ತು ಕ್ರೈಸ್ತ ನಾಯಕರ ಮೇಲೆ ಈ ಕಾನೂನು ದುರ್ಬಳಕೆ ಮಾಡಿಕೊಳ್ಳಬಹುದು ಎಂದು ಆತಂಕವಿದೆ’ ಎಂದರು. ‘ಕಾಯ್ದೆ ತಂದವರ ಮೇಲೆ ದೇವರೇ ಕ್ರಮ ಕೈಗೊಳ್ಳುತ್ತಾನೆ’ ಎಂದು ಹೇಳಿದರು.

ADVERTISEMENT

ನಮ್ಮ ಪರಿಸ್ಥಿತಿ ಏನಾಗಬೇಕು?:

ಧರ್ಮಪ್ರಾಂತ್ಯದ ಬಿಷಪ್ ಡೆರಿಕ್ ಫರ್ನಾಂಡೀಸ್, ‘ಕಾಯ್ದೆ ಇಲ್ಲದೆಯೇ ಕ್ರೈಸ್ತರ ಆಗಾಗ ದಾಳಿ ನಡೆಯುತ್ತಿದೆ. ಹೀಗಿರುವಾಗ ಕಾಯ್ದೆಯನ್ನು ದುಷ್ಕರ್ಮಿಗಳಿಗೆ ಕೊಟ್ಟರೆ ನಮ್ಮ ಪರಿಸ್ಥಿತಿ ಏನಾಗಬೇಕು?’ ಎಂದು ಕೇಳಿದರು.

‘ಸರ್ಕಾರದ ಅಂಕಿ–ಅಂಶಗಳ ಪ್ರಕಾರ ಕ್ರೈಸ್ತರ ಸಂಖ್ಯೆ ಏರಿಕೆಯಾಗಿಲ್ಲ. ಬಲವಂತದ ಹಾಗೂ ಆಮಿಷದ ಮತಾಂತರಕ್ಕೆ ಪುರಾವೆಗಳಿಲ್ಲ. ಆದರೂ 39 ಕ್ರೈಸ್ತರ ಆರಾಧನಾ ಸ್ಥಳಗಳ ಮೇಲೆ ದಾಳಿ ನಡೆದಿದೆ. ಧರ್ಮಗುರುಗಳ ಗೌರವಕ್ಕೆ ಧಕ್ಕೆ ತಂದು, ಹಿಂಸೆ ಕೊಡಲಾಗುತ್ತಿದೆ. ಸರ್ಕಾರವು ಅದನ್ನು ತಡೆಯುವ ಬದಲಿಗೆ, ಮತ್ತಷ್ಟು ತೊಂದರೆ ಕೊಡುತ್ತಿರುವುದು ಸರಿಯಲ್ಲ’ ಎಂದರು.

‘ನಮ್ಮನ್ನು ದ್ವೇಷಿಸುತ್ತಲೇ ಇರಿ; ನಾವು ನಿಮ್ಮನ್ನು ಪ್ರೀತಿಸುತ್ತಲೇ ಇರುತ್ತೇವೆ’ ಎಂದು ಹೇಳಿದರು.

ದೇವರೇ ನೋಡಿಕೊಳ್ಳುತ್ತಾನೆ

ಮೆಥೋಡಿಸ್ಟ್‌ ಸೆಂಟ್ರಲ್ ಚರ್ಚ್‌ ಜಿಲ್ಲಾ ಸೂಪರಿಂಟೆಂಡೆಂಟ್ ರೆ.ನಂದಕುಮಾರ್, ‘ಸದನದಲ್ಲಿ ದೇವರೇ ನಮ್ಮ ಪರವಾಗಿ ಕೆಲಸ ಮಾಡುತ್ತಾನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಕಾಯ್ದೆ ತರಲು ಕುತಂತ್ರ ಮಾಡಲಾಗುತ್ತಿದೆ. ನಮ್ಮನ್ನು ಗುರಿಯಾಗಿಸಿ ಹಿಂಸೆ‌ ಕೊಡಲಾಗುತ್ತಿದೆ. ಇದು ಖಂಡನೀಯ. ನಾವು ಶಾಂತಿ ಪ್ರಿಯರೆ. ಆದರೆ, ಸಮಸ್ಯೆಯಾದಾಗ ಇರುವೆಯೂ ಕಚ್ಚುತ್ತದೆ ಎನ್ನುವುದನ್ನು ಮರೆಯಬಾರದು. ಒಂದು ‌ಧರ್ಮ ಇನ್ನೊಂದು ಧರ್ಮವನ್ನು ತುಳಿಯುವುದು, ಬಾಳುವ ಹಕ್ಕ ಕಸಿದುಕೊಳ್ಳುವುದು ಸರಿಯಲ್ಲ. ಎಷ್ಟೆಂದು ನಾವು ದ್ವೇಷ ಸಹಿಸಿಕೊಳ್ಳಬೇಕು?’ ಎಂದು ಆಕ್ರೋಶದಿಂದ ಕೇಳಿದರು.

ಅವರಿಗೆ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್‌ ಬೆಂಬಲ ಸೂಚಿಸಿದರು.

ಸರ್ಕಾರದ ಪರವಾಗಿ ಸಚಿವ ಶಿವರಾಮ ಹೆಬ್ಬಾರ್‌ ಮನವಿ ಸ್ವೀಕರಿಸಿದರು. ‘ಬೇಡಿಕೆ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು’ ಎಂದು ತಿಳಿಸಿದರು.

ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ, ಭಾರತೀಯ ಕ್ರೈಸ್ತ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಪ್ರಶಾಂತ ಜತ್ತನ್ನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.