ADVERTISEMENT

‘ಉದ್ಯಾನ, ವಾಣಿಜ್ಯ ಸಂಕೀರ್ಣ ನಿರ್ಮಿಸಿ’

​ಪ್ರಜಾವಾಣಿ ವಾರ್ತೆ
Published 31 ಜುಲೈ 2021, 15:41 IST
Last Updated 31 ಜುಲೈ 2021, 15:41 IST

ಬೆಳಗಾವಿ: ‘ರಾಮತೀರ್ಥ ನಗರ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಬಡಾವಣೆಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಬೇಕು’ ಎಂದು ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಾಧಿಕಾರದ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಜನರಿಗೆ ಅನುಕೂಲ ಕಲ್ಪಿಸಲು ‍ಪ್ರಾಧಿಕಾರದಿಂದ ಕ್ರಮ ವಹಿಸಬೇಕು. ಸರ್ಕಾರದ ಸಂಕಲ್ಪಕ್ಕೆ ತಕ್ಕಂತೆ ಕಾರ್ಯತತ್ಪರರಾಗಬೇಕು’ ಎಂದರು.

‘ಬುಡಾದಿಂದ ಬಡಾವಣೆ ಹಾಗೂ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ಸಾರ್ವಜನಿಕರ ಬೇಡಿಕೆ ಉತ್ತಮವಾಗಿ ಸಿಕ್ಕಿದೆ. ತ್ವರಿತವಾಗಿ ರೂಪರೇಷೆ ಸಿದ್ಧಪಡಿಸಬೇಕು. ಕೈಗೆಟಕುವ ದರದಲ್ಲಿ ನಿವೇಶನ ಹಾಗೂ ಜಾಗ ಹಂಚಿಕೆ ಮಾಡಲಾಗುತ್ತಿದ್ದು, ಇದರ ಲಾಭವನ್ನು ಜನರು ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ನಗರದಲ್ಲಿ ಪ್ರಾಧಿಕಾರದಿಂದ ಉದ್ಯಾನ ನಿರ್ಮಾಣ ಮಾಡುವ ಯೋಜನೆ ಇದೆ. ಬೆಳಗಾವಿ ಉತ್ತರ ಹಾಗೂ ದಕ್ಷಿಣ ಮತಕ್ಷೇತ್ರದ ಶಾಸಕರು ಪತ್ರ ಬರೆದಿದ್ದಾರೆ. ಪ್ರಾಧಿಕಾರದ ವ್ಯಾಪ್ತಿಯಲ್ಲಿ ಖಾಲಿ ಇರುವ ಜಾಗದಲ್ಲಿ ಉದ್ಯಾನ, ಕ್ರೀಡಾಂಗಣ ನಿರ್ಮಾಣ ಮಾಡಲು ಶೀಘ್ರದಲ್ಲೇ ಶಾಸಕರ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ಮಾಡಿ ಯೋಜನೆ ರೂಪಿಸಬೇಕು’ ಎಂದು ತಾಕೀತು ಮಾಡಿದರು.

ಬುಡಾ ಆಯುಕ್ತ ಜಿ.ಟಿ. ದಿನೇಶ್‌ಕುಮಾರ್, ಎಸ್.ಎಸ್. ಕಾಂಬಳೆ, ಎಂಜಿನಿಯರ್‌ ಮಹಾಂತೇಶ ಹಿರೇಮಠ, ಶಂಕರ ನಾಯಕ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.