ADVERTISEMENT

ತೈಲವರ್ಣ ಚಿತ್ರಗಳಿಗೆ ಜೀವ- 50 ವರ್ಷಗಳ ಸಾರ್ಥಕ ಕಲಾ ಸಾಧನೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 8:36 IST
Last Updated 25 ಸೆಪ್ಟೆಂಬರ್ 2021, 8:36 IST
ಗುಂಡೋಪಂತ ಪತ್ತಾರ ಅವರ ಕುಂಚದಲ್ಲಿ ರೂಪಗೊಂಡಿರುವ ಅರಭಾವಿ ಮಠದ ಹೊರನೋಟದ ಚಿತ್ರ 
ಗುಂಡೋಪಂತ ಪತ್ತಾರ ಅವರ ಕುಂಚದಲ್ಲಿ ರೂಪಗೊಂಡಿರುವ ಅರಭಾವಿ ಮಠದ ಹೊರನೋಟದ ಚಿತ್ರ    

ಮೂಡಲಗಿ: ತಾಲ್ಲೂಕಿನ ಅರಭಾವಿಯ ದುರದುಂಡೇಶ್ವರ ಮಠದ ಪ್ರಾಂಗಣದ ಗೋಡೆಗಳೆಲ್ಲ ಕಲಾವಿದ ಜಿ.ಎ. ಪತ್ತಾರ ಅವರ ತೈಲವರ್ಣ ಕಲಾಕೃತಿಗಳಿಂದ ಕಣ್ಮನ ಸೆಳೆಯುತ್ತಿವೆ. ಚಿತ್ರಗಳನ್ನು ನೋಡುತ್ತಾ ಸಾಗುತ್ತಿದ್ದಂತೆ ಮಠದ ಚರಿತ್ರೆ, ಪವಾಡ ಕಥೆಗಳು, ಕ್ಷೇತ್ರದ ಮಹಿಮೆಯು ಭಕ್ತರ ಮನ ಮುಟ್ಟುವಂತಿವೆ.

ಅರಭಾವಿ ಮಠದ ದುರದುಂಡೇಶ್ವರ ಪುಣ್ಯಾರಣ್ಯ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕರಾಗಿದ್ದ ಗುಂಡೋಪಂತ ಅಪ್ಪಣ್ಣ ಪತ್ತಾರ ಅವರು ರಚಿಸಿರುವ ಚಿತ್ರಗಳನ್ನು ಹಾಕಲಾಗಿದೆ. ನಿವೃತ್ತರಾಗಿದ್ದರೂ ನಿರಂತರವಾಗಿ ಚಿತ್ರಕಲೆ, ಶಿಲ್ಪಕಲೆ, ಸಾಹಿತ್ಯ, ನಟನೆಯ ಮೂಲಕ ಕಲೆಯನ್ನೇ ತಮ್ಮ ಉಸಿರಾಗಿಸಿಕೊಂಡಿರುವ ಕಲಾ ತಪಸ್ವಿ ಎನಿಸಿಕೊಂಡಿದ್ದಾರೆ.

ಡ್ರಾಯಿಂಗ್ ಮತ್ತು ಪೇಂಟಿಂಗ್‌ದಲ್ಲಿ ಡಿಪ್ಲೊಮಾ ಮಾಡಿರುವ ಗುಂಡೋಪಂತ ಅವರು 4 ದಶಕಗಳ ಕಾಲ ಚಿತ್ರಕಲಾ ಶಿಕ್ಷಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಚಿತ್ರಕಲೆಯಲ್ಲಿ ಪ್ರೇರಣೆ ನೀಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಅನೇಕರು ಶ್ರೇಷ್ಠ ಚಿತ್ರ ಕಲಾವಿದರಾಗಿದ್ದಾರೆ.

ADVERTISEMENT

ಪತ್ತಾರ ಅವರು ರಚಿಸಿರುವ ಹಲವು ಶೈಕ್ಷಣಿಕ ಸರಣಿ ಚಿತ್ರಗಳು ಗೋಕಾಕ ಮತ್ತು ಮೂಡಲಗಿ ಶೈಕ್ಷಣಿಕ ವಲಯದ ಸರ್ಕಾರಿ ಶಾಲಾ ಕಟ್ಟಡಗಳ ಗೋಡೆಗಳನ್ನು ಅಲಂಕರಿಸಿವೆ. ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ಮೆಚ್ಚುಗೆಯನ್ನೂ ಗಳಿಸಿವೆ.

ಚಿತ್ರಕಲೆಯ ವಿವಿಧ ಆಯಾಮಗಳಲ್ಲಿ ಪರಿಣತಿ ಹೊಂದಿದ್ದಾರೆ. ಅವರು ರಚಿಸಿರುವ ನೂರಾರು ತೈಲವರ್ಣಗಳ ಚಿತ್ರಗಳು ಜೀವಕಳೆ ತುಂಬಿಕೊಂಡಿವೆ. ಕ್ಯಾನ್ವಸ್ ಮೇಲಿನ ಪೇಟಿಂಗ್‌ಗಳು ನಾಡಿನ ಹಲವಾರು ಮಠಗಳ ಪ್ರಾಂಗಣ ಗೋಡೆಗಳನ್ನು ಅಲಂಕರಿಸಿವೆ.

ನವಲಗುಂದದ ನಾಗಲಿಂಗೇಶ್ವರರ ಜೀವನ ಚರಿತ್ರೆ, ಜಮಖಂಡಿ ತಾಲ್ಲೂಕಿನ ಹಿಪ್ಪರಗಿಯ ಸಂಗಮೇಶ್ವರರ ಚರಿತ್ರೆ, ನಿಡಸೋಸಿಯ ಪಂಚಮಶಿವಲಿಂಗೇಶ್ವರರ ಚರಿತ್ರೆ, ಹಾನಗಲ್‌ ಕುಮಾರಸ್ವಾಮಿ ಹಾಗೂ ಸದಾಶಿವಯ್ಯ ಸ್ವಾಮಿ ಚರಿತ್ರೆ ಸೇರಿದಂತೆ ಮಠ, ದೇವಸ್ಥಾನ ಮತ್ತು ಜೈನಬಸ್ತಿಗಳಲ್ಲಿ ಚಿತ್ರಸಿರುವ ಕಥಾಚಿತ್ರಗಳು ಭಕ್ತರ ಮನಸೂರೆಗೊಳ್ಳುತ್ತಿವೆ.

ದೇವದಾಸಿ ಪದ್ಧತಿ ನಿರ್ಮೂಲನೆ, ಸಾಕ್ಷರತೆ, ಏಡ್ಸ್‌, ಮೂಢನಂಬಿಕೆ ಕುರಿತಾಗಿ ಸರ್ಕಾರೇತರ ಸಂಘ– ಸಂಸ್ಥೆಗಳೊಂದಿಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಾಕಷ್ಟು ಗೋಡೆ ಚಿತ್ರಗಳಿಗೆ ಗುಂಡೋಪಂತ ಅವರು ರೂಪಕೊಟ್ಟು ಕಲೆಯ ಮೂಲಕ ಸಾಮಾಜಿಕ ಕಳಕಳಿ ತೋರಿದ್ದಾರೆ.

‘ನನ್ನ ಕಲೆ ಗುರುತಿಸಿ ಬದುಕು ನೀಡಿದ ಅರಭಾವಿ ಮಠದ ಶಿವಾನಂದ ಸ್ವಾಮೀಜಿ ಹಾಗೂ ಈಗಿನ ಪೀಠಾಧಿಪತಿ ಸಿದ್ದಲಿಂಗ ಸ್ವಾಮೀಜಿ ಕೃಪೆಯಿಂದಾಗಿ ಕಲಾ ಪ್ರಪಂಚವು ಗುರುತಿಸುವಂತಾಗಿದೆ‘ ಎಂದು 71 ವರ್ಷದ ಗುಂಡೋಪಂತ ಹೇಳಿದರು.

‘ಅಕಾಡೆಮಿ, ಪರಿಷತ್‌ಗಳು ಪ್ರಶಸ್ತಿಗಾಗಿ ಗುರುತಿಸದಿದ್ದರೂ ಜನರ ಮೆಚ್ಚುಗೆಯೆ ನಿತ್ಯ ಪ್ರಶಸ್ತಿಗಳಾಗಿವೆ’ ಎನ್ನುತ್ತಾರೆ. ಸಂಪರ್ಕಕ್ಕೆ ಮೊ.ಸಂಖ್ಯೆ: 9535790855.

***

ಉತ್ತಮವಾಗಿವೆ

ಗುಂಡೋಪಂತ ಪತ್ತಾರ ಅವರು ಅಪ್ರತಿಮ ಚಿತ್ರ ಕಲಾವಿದರು. ದುರದುಂಡೇಶ್ವರ ಮಹಿಮೆಯನ್ನು ಕಣ್ಣು ಕಟ್ಟುವಂತೆ ಚಿತ್ರಗಳನ್ನು ಉತ್ತಮವಾಗಿ ಚಿತ್ರಿಸಿದ್ದಾರೆ.

- ಶಿವಯೋಗಿ ಸಿದ್ದಲಿಂಗ ಸ್ವಾಮೀಜಿ , ದುರದುಂಡೇಶ್ವರ ಮಠ, ಅರಭಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.