ADVERTISEMENT

ಮೂಡಲಗಿ: ಸುಣಧೋಳಿ ಜಡಿಸಿದ್ಧೇಶ್ವರ ಮಠ: ಬಿಕ್ಕಟ್ಟು ಶಮನ

ಸ್ವಾಮೀಜಿ, ಬಾಲಚಂದ್ರ ಜಾರಕಿಹೊಳಿ ಮಧ್ಯಸ್ಥಿಕೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 12:43 IST
Last Updated 4 ನವೆಂಬರ್ 2020, 12:43 IST
ಗೋಕಾಕದ ಶೂನ್ಯ ಸಂಪಾದನ ಮಠದಲ್ಲಿ ಮಂಗಳವಾರ ನಡೆದ ಸುಣಧೋಳಿ ಜಡಿಸಿದ್ದೇಶ್ವರ ಮಠದ ಭಕ್ತರ ಸಭೆಯಲ್ಲಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿದರು
ಗೋಕಾಕದ ಶೂನ್ಯ ಸಂಪಾದನ ಮಠದಲ್ಲಿ ಮಂಗಳವಾರ ನಡೆದ ಸುಣಧೋಳಿ ಜಡಿಸಿದ್ದೇಶ್ವರ ಮಠದ ಭಕ್ತರ ಸಭೆಯಲ್ಲಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿದರು   

ಗೋಕಾಕ: ಮೂಡಲಗಿ ತಾಲ್ಲೂಕಿನ ಸುಣಧೋಳಿ ಗ್ರಾಮದ ಜಡಿಸಿದ್ಧೇಶ್ವರ ಮಠದಲ್ಲಿ ಎರಡು ಗುಂಪುಗಳ ನಡುವೆ ಕೆಲವು ತಿಂಗಳುಗಳಿಂದ ತಲೆದೋರಿದ್ದ ಭಿನ್ನಾಭಿಪ್ರಾಯಗಳಿಂದ ಉಂಟಾಗಿದ್ದ ಬಿಕ್ಕಟ್ಟನ್ನು ಇಲ್ಲಿನ ಶೂನ್ಯ ಸಂಪಾದನಾ ಮಠದ ಮುರುಘರಾಜೇಂದ್ರ ಸ್ವಾಮೀಜಿ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಧ್ಯಸ್ಥಿಕೆ ವಹಿಸಿ, ವಿವಾದ ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳವಾರ ರಾತ್ರಿ ಇಲ್ಲಿನ ಶೂನ್ಯ ಸಂಪಾದನ ಮಠದಲ್ಲಿ ಭಕ್ತರ ಸಭೆ ನಡೆಯಿತು. ಮಠದ ಆಸ್ತಿ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಎಲ್ಲ ಅಧಿಕಾರವನ್ನು ಈಗಿರುವ ಜಡಿಸಿದ್ಧೇಶ್ವರ ಮಠದ ಶಿವಾನಂದ ಸ್ವಾಮೀಜಿ ಅವರಿಗೆ ನೀಡಲು ಸಭೆಯಲ್ಲಿ ಒಮ್ಮತ ವ್ಯಕ್ತವಾಯಿತು.

ಸುಣಧೋಳಿ ಗ್ರಾಮದ ಉಭಯ ಗುಂಪುಗಳ ಮಧ್ಯೆ ರಾಜಿ– ಸಂಧಾನ ನಡೆದಿದೆ. ಸ್ವಾಮೀಜಿ ಮತ್ತು ಶಾಸಕರು ರೂಪಿಸಿದ ಸಂಧಾನ ಸೂತ್ರಗಳಿಗೆ ಶಿವಾನಂದ ಸ್ವಾಮೀಜಿ ಹಾಗೂ ಭಕ್ತರು ಒಪ್ಪಿಗೆ ಸೂಚಿಸಿದ್ದಾರೆ. ಇದರೊಂದಿಗೆ ಮಾತುಕತೆ ಯಶಸ್ವಿಯಾಯಿತು.

ADVERTISEMENT

ಸಂಧಾನ ಸೂತ್ರದ ಅನ್ವಯ ಮಠದ ಸಂಪೂರ್ಣ ಉಸ್ತುವಾರಿಯನ್ನು ಶಿವಾನಂದ ಸ್ವಾಮೀಜಿ ನೋಡಿಕೊಳ್ಳಲಿದ್ದಾರೆ. ದೇವಸ್ಥಾನದ ಹೆಸರಿನಲ್ಲಿದ್ದ ಟ್ರಸ್ಟ್ ರದ್ದುಪಡಿಸಲು ತೀರ್ಮಾನಿಸಲಾಗಿದೆ. ದೇಣಿಗೆ ಮತ್ತು ಭಿಕ್ಷಾಟನೆ ರೂಪದಲ್ಲಿ ಬರುವ ಹಣವನ್ನು ಸಹ ಮಠದ ಜೀರ್ಣೋದ್ಧಾರಕ್ಕೆ ಬಳಸಿಕೊಳ್ಳಲು ಸ್ವಾಮೀಜಿ ಅವರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಮಠದ ಹೆಸರಿನಲ್ಲಿರುವ ಆಸ್ತಿ–ಪಾಸ್ತಿಗಳನ್ನು ಯಾರಿಗೂ ಪರಭಾರೆ ಮಾಡುವ ಹಕ್ಕು ನೀಡಿಲ್ಲ. ಪ್ರತಿ ವರ್ಷ ಜಾತ್ರೆ ಸಂದರ್ಭ ಸಾಮಾನ್ಯ ಸಭೆ ಕರೆದು ಜಮಾ-ಖರ್ಚಿನ ವಿವರವನ್ನು ಭಕ್ತರ ಮುಂದಿಡುವಂತೆ ಸ್ವಾಮೀಜಿಗೆ ತಿಳಿಸಲಾಗಿದೆ. ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಸ್ವಾಮೀಜಿ ಮಾರ್ಗದರ್ಶನದಲ್ಲಿ ಹೊಸದಾಗಿ 21 ಸದಸ್ಯರು ಒಳಗೊಂಡ ಶಿವಾನಂದ ಸ್ವಾಮೀಜಿ ನೇತೃತ್ವದ ಸಲಹಾ ಸಮಿತಿ ರಚಿಸಲು ನಿರ್ಧರಿಸಲಾಗಿದೆ.

‘ಸುಣಧೋಳಿ ಜಡಿಸಿದ್ಧೇಶ್ವರ ಮಠವು ಪವಾಡಗಳಿಗೆ ಹೆಸರುವಾಸಿಯಾಗಿದೆ. ಅಭಿವೃದ್ಧಿಯನ್ನೂ ಕಂಡಿದೆ. ಆದರೆ ಭಕ್ತರಲ್ಲಿಯೇ ಎರಡು ಗುಂಪುಗಳಾಗಿ ಮಠದ ಏಳಿಗೆಗೆ ಅಡ್ಡಿಯಾಗಿದೆ. ಮುಂದೆ ಎಲ್ಲರೂ ಭಿನ್ನಾಭಿ‍ಪ್ರಾಯ ಮರೆತು ಶ್ರೀಮಠದ ಪ್ರಗತಿಗೆ ಶ್ರಮಿಸಬೇಕು. ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು ಎಲ್ಲ ಜನಾಂಗದವರೂ ಒಟ್ಟಾಗಿ ಹೋಗಬೇಕು’ ಎಂದು ಬಾಲಚಂದ್ರ ತಿಳಿಸಿದರು.

ಜಡಿಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ, ಬಟಕುರ್ಕಿಯ ಬಸವಲಿಂಗ ಸ್ವಾಮೀಜಿ, ಮುಖಂಡರಾದ ಸಿ.ಎಸ್. ವಾಲಿ, ಗುರುರಾಜ ಪಾಟೀಲ, ಶಿವಲಿಂಗಪ್ಪ ಮದಭಾಂವಿ, ಕಲ್ಲಪ್ಪ ಕಮತಿ, ಚಂದ್ರು ಗಾಣಿಗೇರ, ಮಾರುತಿ ಹೊರಟ್ಟಿ, ರಾಜು ವಾಲಿ, ಆನಂದ ಗಾಣಿಗೇರ, ಈರಪಣ್ಣ ಭಾಗೋಜಿ, ಈರಯ್ಯ ಹಿರೇಮಠ, ಲಕ್ಷ್ಮಣ ಕರಾಳೆ, ಶಿವಕುಮಾರ ಅಂಗಡಿ, ಭೀಮಗೌಡ ಪಾಟೀಲ, ಶ್ರೀಶೈಲ ವಾಲಿ, ಬಸು ಪಾಟೀಲ, ಬಸು ಬಿಗೌಡರ, ಬಸಪ್ಪ ಕರಾಳೆ, ಮಹಾದೇವ ಹಾರೂಗೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.