ಬೆಳಗಾವಿ: ‘ಪತ್ರಕರ್ತರು ಸಮಾಜದ ಅವಿಭಾಜ್ಯ ಅಂಗ. ಉತ್ತಮ ಸಮಾಜ ಕಟ್ಟುವಲ್ಲಿ ಪತ್ರಕರ್ತರ ಪಾತ್ರವೂ ಪ್ರಮುಖವಾಗಿದೆ. ಪತ್ರಕರ್ತರ ಮಕ್ಕಳು ಕೂಡ ಪತ್ರಕರ್ತರಾಗಲು ಹಿಂಜರಿಯಬಾರದು’ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.
ಬೆಳಗಾವಿ ಪತ್ರಕರ್ತರ ಸಂಘದ (ಮುದ್ರಣ) ಇಲ್ಲಿನ ಎಸ್.ಜಿ.ಬಾಳೇಕುಂದ್ರಿ ತಾಂತ್ರಿಕ ಸಂಸ್ಥೆಯ ಶಿವಕುಮಾರ ಸಂಬರಗಿಮಠ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪತ್ರಕರ್ತರ ಮಕ್ಕಳ ‘ಪ್ರತಿಭಾ ಪುರಸ್ಕಾರ’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ನಾಲ್ಕು ದಶಕಗಳಿಂದ ಪತ್ರಕರ್ತರೊಂದಿಗೆ ನನ್ನ ಒಡನಾಟವಿದೆ. ಪತ್ರಕರ್ತರನ್ನು ವಿವಿಧ ಸಂಘಟನೆಯವರು ಸನ್ಮಾನಿಸುವುದನ್ನು ನೋಡಿದ್ದೇನೆ. ಇಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿರುವ ಈ ಸಂಘವು ಪತ್ರಕರ್ತರ ಸಾಧಕ ಮಕ್ಕಳನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಖುಷಿ ತಂದಿದೆ. ಇದನ್ನು ಮುಂದುವರಿಸಿಕೊಂಡು ಹೋಗಬೇಕು. ಇದರಿಂದ ಭವಿಷ್ಯದಲ್ಲಿ ಹೆಚ್ಚಿನ ಸಾಧನೆ ಮಾಡಲು ಮಕ್ಕಳಿಗೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಂತಾಗುತ್ತದೆ’ ಎಂದರು.
‘ಈ ಹಿಂದೆ ಹಲವು ಪತ್ರಕರ್ತರು ವಿಶೇಷ ಲೇಖನ ಬರೆದು, ಲಕ್ಷಾಂತರ ರೂಪಾಯಿ ಗೌರವಧನ ಪಡೆಯುತ್ತಿದ್ದರು. ಆದರೆ, ಇಂದು ಓದುವವರು ಮತ್ತು ಲೇಖನ ಬರೆಯುವವರ ಸಂಖ್ಯೆ ಕಡಿಮೆಯಾಗಿದೆ. ಆ ಪರಂಪರೆ ಮುಂದುವರಿಸಿ’ ಎಂದೂ ಅವರು ಸಲಹೆ ನೀಡಿದರು.
ಮುಖ್ಯ ಅತಿಥಿ, ಶಾಸಕ ಆಸಿಫ್ ಸೇಠ್, ‘ವಿದ್ಯಾರ್ಥಿಗಳು ವೈಯಕ್ತಿಕವಾಗಿ ಬೆಳೆಯಬೇಕು. ಜತೆಗೆ ರಾಷ್ಟ್ರದ ಭವಿಷ್ಯದ ಕುರಿತಾಗಿಯೂ ಚಿಂತನೆ ಮಾಡಬೇಕು’ ಎಂದರು.
ಶಾಸಕ ಅಭಯ ಪಾಟೀಲ, ‘ಈ ಕಾರ್ಯಕ್ರಮ ಸಾಂಕೇತಿಕವಾಗಬಾರದು. ಪ್ರತಿವರ್ಷವೂ ಇದನ್ನು ಮುಂದುವರಿಸಿಕೊಂಡು ಹೋಗಬೇಕು. ಸಾಧಕ ವಿದ್ಯಾರ್ಥಿಗಳು ಸಮಾಜದ ಪ್ರಗತಿಗಾಗಿಯೂ ದುಡಿಯಬೇಕು. ಎಂದಿಗೂ ಸಂಸ್ಕಾರ ಮರೆಯದೆ, ಕಾಲೇಜು ಶಿಕ್ಷಣ ಪೂರ್ಣಗೊಳಿಸಬೇಕು. ಸಮಾಜಘಾತಕ ಶಕ್ತಿಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಬೇಕು’ ಎಂದು ಕರೆಕೊಟ್ಟರು.
ಎಸ್‌ಎಸ್‌ಎಲ್‌ಸಿ, ಪಿಯು ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಹಾಗೂ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಮಕ್ಕಳನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ವಿಲಾಸ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಮಂಗೇಶ ಪವಾರ, ಉಪಮೇಯರ್ ವಾಣಿ ಜೋಶಿ, ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ಮಾತನಾಡಿದರು. ರವೀಂದ್ರ ಉಪ್ಪಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಶೈಲ ಮಠದ ಸ್ವಾಗತಿಸಿದರು. ಸುನೀತಾ ದೇಸಾಯಿ ನಿರೂಪಿಸಿದರು. ಸಂತೋಷ ಈ. ಚಿನಗುಡಿ ವಂದಿಸಿದರು.
ಕನ್ನಡ ಹೋರಾಟಗಾರರು, ವಿವಿಧ ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.
ಒತ್ತಡದ ಬದುಕಿನ ಮಧ್ಯೆ ಪತ್ರಕರ್ತರು ತಮ್ಮ ಕುಟುಂಬಕ್ಕಾಗಿಯೂ ಸಮಯ ಮೀಸಲಿಡಬೇಕು. ಇಂಥ ಉಪಯುಕ್ತ ಕಾರ್ಯಕ್ರಮಗಳು ಮುಂದುವರಿಯಬೇಕು.– ಮಂಗೇಶ ಪವಾರ, ಮೇಯರ್
ವಿದ್ಯಾರ್ಥಿಗಳು ಸಾಧನೆ ಮೂಲಕ ಭವಿಷ್ಯ ಕಟ್ಟಿಕೊಳ್ಳಬೇಕು. ಇಂಥ ಕಾರ್ಯಕ್ರಮ ನಿರಂತರವಾಗಿ ಮುಂದುವರಿಯಲಿ. ಪ್ರೋತ್ಸಾಹ ನೀಡುತ್ತೇವೆ.– ವಾಣಿ ಜೋಶಿ, ಉಪಮೇಯರ್
ಇಂದಿನ ಮಕ್ಕಳೇ ದೇಶದ ಭವಿಷ್ಯ. ವಿಜ್ಞಾನಿ ಒಲಿಂಪಿಯನ್ ಹೀಗೆ... ವಿವಿಧ ರಂಗಗಳಲ್ಲಿ ಸಾಧಕರಾಗಿ ಹೊರಹೊಮ್ಮಬೇಕು.– ಭೂಷಣ ಬೊರಸೆ, ನಗರ ಪೊಲೀಸ್ ಕಮಿಷನರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.