ADVERTISEMENT

ಜನರಿಗೆ ಮೋಸ ಮಾಡಿದ ಶ್ರೀಮಂತ ಪಾಟೀಲ: ಕಾಗೆ ಟೀಕೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 14:16 IST
Last Updated 21 ನವೆಂಬರ್ 2019, 14:16 IST

ಕಾಗವಾಡ (ಬೆಳಗಾವಿ): ‘ಇಲ್ಲಿ ಹೋದ ವರ್ಷ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಶ್ರೀಮಂತ ಪಾಟೀಲ 14 ತಿಂಗಳುಗಳಿಂದಲೂ ಕ್ಷೇತ್ರದಲ್ಲಿ ಕಾಣಿಸಿಕೊಂಡಿಲ್ಲ. ಜನರ ಸಂಕಷ್ಟಗಳಿಗೆ ಸ್ಪಂದಿಸಿಲ್ಲ. ಇದು ನನಗೆ ಈ ಚುನಾವಣೆಯಲ್ಲಿ ಶ್ರೀರಕ್ಷೆಯಾಗಿ ನೆರವಿಗೆ ಬರಲಿದೆ’ ಎಂದು ಕಾಗವಾಡ ಕಾಂಗ್ರೆಸ್‌ ಅಭ್ಯರ್ಥಿ ಭರಮಗೌಡ (ರಾಜು) ಕಾಗೆ ಹೇಳಿದರು.

ಉಗಾರಖುರ್ದ್ ಪಟ್ಟಣದಲ್ಲಿ ಮಾತನಾಡಿದ ಅವರು, ‘ನನಗೆ ಜನರಿಂದ ಅಪಾರ ಬೆಂಬಲ ವ್ಯಕ್ತವಾಗುತ್ತಿದೆ. ಹೀಗಾಗಿ, ಅವರಲ್ಲಿ ಮತ ಭಿಕ್ಷೆ ಬೇಡುವುದಿಲ್ಲ. ನಾಲ್ಕು ಬಾರಿ ಶಾಸಕನಾಗಿ ಜನಪರ ಕೆಲಸ ಮಾಡಿದ್ದೇನೆ. ಜನರು ಬದಲಾವಣೆ ಬಯಸಿ ಹೋದ ಬಾರಿ ಬೇರೆಯವರನ್ನು ಗೆಲ್ಲಿಸಿದ್ದರು. ಆದರೆ ಅವರೊಂದಿಗೆ ಇದ್ದ ಶೇ 90ರಷ್ಟು ಮಂದಿ ಈ ಬಾರಿ ನನ್ನನ್ನು ಬೆಂಬಲಿಸುತ್ತಿದ್ದಾರೆ’ ಎಂದರು.

‘ಮಾಜಿ ಸಂಸದ ಪ್ರಕಾಶ ಹುಕ್ಕೇರಿ ನನ್ನ ನೆಂಟರು. ಅನಾರೋಗ್ಯದಿಂದಾಗಿ ಅವರು ಪ್ರಚಾರಕ್ಕೆ ಬಂದಿಲ್ಲ. ಮುಂದೆ ಬರುತ್ತಾರೆ. ಕ್ಷೇತ್ರದಲ್ಲಿ 50 ಹಳ್ಳಿಗಳಿವೆ. ಎಲ್ಲ ಕಡೆಗೂ ಹೋಗಿದ್ದೇನೆ. ನಿರೀಕ್ಷೆಗೂ ಮೀರಿ ಸ್ವಾಗತ ನೀಡುತ್ತಿದ್ದಾರೆ. ಕಾಂಗ್ರೆಸ್‌ನ ಎಲ್ಲ ನಾಯಕರೂ ಬೆಂಬಲ ಕೊಡುತ್ತಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ನನ್ನದು ಸಕ್ಕರೆ ಕಾರ್ಖಾನೆ ಇಲ್ಲ. ಕಿರಾಣಿ ಅಂಗಡಿ ಇಲ್ಲ. ಮದ್ಯದ ಅಂಗಡಿ ಇಲ್ಲ. 20 ವರ್ಷಗಳಿಂದಲೂ ಜನರೊಂದಿಗೇ ಇದ್ದೇನೆ. ಹೀಗಾಗಿ, ಯಾಕೆ ಮತ ಹಾಕುವುದಿಲ್ಲ ಎಂದು ಜನರನ್ನು ಕೇಳುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.