ADVERTISEMENT

ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆ: ಗಡಿಭಾಗದ ಮಕ್ಕಳ ದಶಕದ ಕನಸು–ನನಸು

ಹಿಂಡಲಗಾ, ಜಾಂಬೋಟಿಗೆ ಪ್ರೌಢಶಾಲೆ ಮಂಜೂರು, ಏಳು ಗ್ರಾಮಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಆರಂಭವಾಗಲಿವೆ ಪ್ರಾಥಮಿಕ ತರಗತಿ

ಇಮಾಮ್‌ಹುಸೇನ್‌ ಗೂಡುನವರ
Published 3 ನವೆಂಬರ್ 2025, 5:22 IST
Last Updated 3 ನವೆಂಬರ್ 2025, 5:22 IST
ಬೆಳಗಾವಿ ತಾಲ್ಲೂಕಿನ ಹಿಂಡಲಗಾ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮಕ್ಕಳು    (ಸಂಗ್ರಹ ಚಿತ್ರ)
ಬೆಳಗಾವಿ ತಾಲ್ಲೂಕಿನ ಹಿಂಡಲಗಾ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮಕ್ಕಳು    (ಸಂಗ್ರಹ ಚಿತ್ರ)   

ಬೆಳಗಾವಿ: ತಾಲ್ಲೂಕಿನ ಹಿಂಡಲಗಾದಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆ ಆರಂಭಿಸಬೇಕೆಂಬ ದಶಕಗಳ ಹೋರಾಟಕ್ಕೆ ಅಂತೂ ಫಲ ಸಿಕ್ಕಿದೆ. ಇದರೊಂದಿಗೆ ಖಾನಾಪುರ ತಾಲ್ಲೂಕಿನ ಜಾಂಬೋಟಿಯಲ್ಲಿ ಸರ್ಕಾರಿ ಕನ್ನಡ ಪ್ರೌಢಶಾಲೆ ಆರಂಭವಾಗಲಿದೆ.

ಜತೆಗೆ, ಬೆಳಗಾವಿ, ಖಾನಾಪುರ ತಾಲ್ಲೂಕಿನ ಏಳು ಗ್ರಾಮಗಳ ಸರ್ಕಾರಿ ಮರಾಠಿ ಮಾಧ್ಯಮ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮದ ತರಗತಿಗಳೂ ಆರಂಭವಾಗಲಿವೆ. 

ತಪ್ಪಲಿದೆ ಪರದಾಟ:

ADVERTISEMENT

ಬೆಳಗಾವಿ, ಖಾನಾಪುರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಕನ್ನಡಿಗರು ವಾಸವಿದ್ದರೂ, ಕಲಿಕೆಗಾಗಿ ಸರ್ಕಾರಿ ಕನ್ನಡ ಪ್ರಾಥಮಿಕ, ಪ್ರೌಢಶಾಲೆ ಇರಲಿಲ್ಲ.  ದೂರದ ಊರುಗಳಿಗೆ ತೆರಳಿ ಕನ್ನಡಿಗರ ಮಕ್ಕಳು ಮಾತೃಭಾಷೆಯಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಪಡೆಯುವ ಪರಿಸ್ಥಿತಿ ಇತ್ತು. ತಮ್ಮೂರಿನಲ್ಲೇ ಕನ್ನಡ ಮಾಧ್ಯಮ ಶಾಲೆ ಇಲ್ಲದ ಕಾರಣ ಕೆಲ ಕನ್ನಡಿಗರು ಅನಿವಾರ್ಯವಾಗಿ ತಮ್ಮ ಮಕ್ಕಳನ್ನು ಮರಾಠಿ ಮಾಧ್ಯಮ ಶಾಲೆಗೆ ಸೇರಿಸುತ್ತಿದ್ದರು. ಕೆಲವೆಡೆ ಬಾಲಕಿಯರು ಶಿಕ್ಷಣ ಮೊಟಕುಗೊಳಿಸುವ ಪರಿಸ್ಥಿತಿ ಇತ್ತು.

ಬೆಳಗಾವಿ ಪಶ್ಚಿಮಭಾಗದ ಹಳ್ಳಿಗಳಲ್ಲಂತೂ ಪರಿಸ್ಥಿತಿ ಇನ್ನಷ್ಟು ಕಠಿಣವಾಗಿತ್ತು. ಹಿಂಡಲಗಾ, ಸುಳಗಾ, ಬೆಕ್ಕಿನಕೆರೆ, ಕುದ್ರೇಮನಿ, ಕಲ್ಲೆಹೋಳ, ಮಣ್ಣೂರ, ಗೋಜಗೆ, ಬೆನಕನಹಳ್ಳಿ ಮತ್ತಿತರ ಗ್ರಾಮಗಳ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಪ್ರೌಢಶಿಕ್ಷಣ ಪಡೆಯಲು ಬೆಳಗಾವಿ ನಗರಕ್ಕೆ ಬರವುದು ಅನಿವಾರ್ಯವಾಗಿತ್ತು.

ಈ ಸಮಸ್ಯೆಗೆ ಪರಿಹಾರ ಒದಗಿಸಲು ಹಿಂಡಲಗಾದಲ್ಲೇ ಸರ್ಕಾರಿ ಕನ್ನಡ ಪ್ರೌಢಶಾಲೆ ಆರಂಭಿಸುವ ಕುರಿತು ‘ಪ್ರಜಾವಾಣಿ’ ಅ.18ರ ಸಂಚಿಕೆಯಲ್ಲಿ ‘ಪಶ್ಚಿಮ ಭಾಗಕ್ಕೆ ಸಿಗದ ಕನ್ನಡ ಪ್ರೌಢಶಾಲೆ’ ಶೀರ್ಷಿಕೆಯಡಿ ವರದಿ ಪ್ರಕಟಿಸಿ ಬೆಳಕು ಚೆಲ್ಲಿತ್ತು. ಜಾಂಬೋಟಿಯಲ್ಲೂ ಇದೇ ಪರಿಸ್ಥಿತಿ ಇತ್ತು. ಗಡಿಭಾಗದ ಹಳ್ಳಿಗಳಲ್ಲಿ ಕನ್ನಡ ಪ್ರೌಢಶಾಲೆ ಇಲ್ಲದ ಕಾರಣಕ್ಕೆ, ಪ್ರಾಥಮಿಕ ಶಾಲೆಗಳಲ್ಲೂ ದಾಖಲಾತಿ ಕುಸಿಯುತ್ತ ಬಂದಿತ್ತು.

ಈಗ ಹಿಂಡಲಗಾ ಮತ್ತು ಜಾಂಬೋಟಿಯಲ್ಲಿ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳಾಗಿ ಉನ್ನತೀಕರಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಪ್ರೌಢಶಿಕ್ಷಣಕ್ಕಾಗಿ ಮಕ್ಕಳು ದೂರದ ಊರುಗಳಿಗೆ ಹೋಗುವುದು ತಪ್ಪಲಿದೆ.

ಲೀಲಾವತಿ ಹಿರೇಮಠ
2025–26ನೇ ಸಾಲಿನಿಂದ ಎರಡು ಗ್ರಾಮಗಳಲ್ಲಿ ಕನ್ನಡ ಪ್ರೌಢಶಾಲೆ ಏಳು ಗ್ರಾಮಗಳಲ್ಲಿ ಕನ್ನಡ ಪ್ರಾಥಮಿಕ ವಿಭಾಗ ಆರಂಭಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ
ಲೀಲಾವತಿ ಹಿರೇಮಠ ಡಿಡಿಪಿಐ ಬೆಳಗಾವಿ

ಕನ್ನಡಿಗರ ಮಕ್ಕಳು ಕನ್ನಡ ಶಾಲೆಯಲ್ಲೇ ಕಲಿಯಲಿದ್ದಾರೆ’

‘ಬೆಂಗಳೂರಿನಲ್ಲಿ ಅ.8ರಂದು ಗಡಿ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಅವರು ಬೆಳಗಾವಿಯ 25 ಕನ್ನಡ ಹೋರಾಟಗಾರರೊಂದಿಗೆ ಸಭೆ ನಡೆಸಿದ್ದರು. ಆಗ ಗಡಿ ಗ್ರಾಮಗಳಲ್ಲಿ ಕನ್ನಡ ಪ್ರಾಥಮಿಕ ಪ್ರೌಢಶಾಲೆ ಇಲ್ಲದ್ದರಿಂದ ಮಕ್ಕಳಿಗೆ ತೊಂದರೆ ಆಗುತ್ತಿರುವ ಬಗ್ಗೆ ತಿಳಿಸಿದ್ದೆವು. ಇದಕ್ಕೆ ಸ್ಪಂದಿಸಿದ ಎಚ್‌.ಕೆ.ಪಾಟೀಲ ಮುತುವರ್ಜಿ ವಹಿಸಿ ಈ ಶಾಲೆಗಳನ್ನು  ಮಂಜೂರುಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹಳ್ಳಿಗಳಲ್ಲೂ ಕನ್ನಡ ಶಾಲೆ ಎತ್ತಲಿದ್ದು ಕನ್ನಡಿಗರ ಮಕ್ಕಳು ಕನ್ನಡ ಮಾಧ್ಯಮ ಶಾಲೆಯಲ್ಲೇ ಕಲಿಯಲಿದ್ದಾರೆ’ ಎಂದು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಅಶೋಕ ಚಂದರಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ಏಳು ಗ್ರಾಮಗಳಲ್ಲಿ ಕನ್ನಡ ಮಾಧ್ಯಮ

ಬೆಳಗಾವಿ ತಾಲ್ಲೂಕಿನ ಬಾಚಿ ಸಾವಗಾಂವ ಖಾನಾಪುರ ತಾಲ್ಲೂಕಿನ ಕಾಟಗಾಳಿ ಬೀದರಬಾವಿ ಗವಳಿವಾಡಾ ಹಣಬರವಾಡಾ ಶಿರೋಲಿವಾಡಾದಲ್ಲಿ ಸರ್ಕಾರಿ ಮರಾಠಿ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಗಳಿವೆ. ಈಗ ಅಲ್ಲಿಯೇ ಕನ್ನಡ ಮಾಧ್ಯಮ ಆರಂಭಕ್ಕೆ ಸರ್ಕಾರ ಮಂಜೂರಾತಿ ಕೊಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.