
ಹಾರೂಗೇರಿ: ಜಿಲ್ಲಾಮಟ್ಟದ 17ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಾರೂಗೇರಿ ಪಟ್ಟಣ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಪಟ್ಟಣದ ತುಂಬೆಲ್ಲ ಕನ್ನಡ ಬಾವುಟಗಳು ರಾರಾಜಿಸುತ್ತಿವೆ. ಇಲ್ಲಿನ ಜೈನ ಸಮುದಾಯ ಭವನದಲ್ಲಿ ಜ.10, 11ರಂದು ವಿವಿಧ ಕಾರ್ಯಕ್ರಮ ಜರುಗಲಿವೆ.
ಹಿರಿಯ ಸಾಹಿತಿ ವಿ.ಎಸ್.ಮಾಳಿ ಅವರನ್ನು ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ಬೆಳಿಗ್ಗೆ 9ಕ್ಕೆ ಜಂಬಗಿ ಆಸ್ಪತ್ರೆಯಿಂದ ಹೊರಡುವ ಮೆರವಣಿಗೆ, ಬಿ.ಆರ್.ಅಂಬೇಡ್ಕರ್ ವೃತ್ತ, ವಿಶ್ವಕರ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಚನ್ನವೃಷಭೇಂದ್ರ ವೃತ್ತ ಮಾರ್ಗವಾಗಿ ಸಾಗಿ, ಸಮ್ಮೇಳನದ ವೇದಿಕೆ ತಲುಪಲಿದೆ.
10.30ಕ್ಕೆ ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಸಮ್ಮೇಳನ ಉದ್ಘಾಟಿಸುವರು. ಹುಕ್ಕೇರಿಯ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಅಥಣಿಯ ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಶಾಸಕ ದುರ್ಯೋಧನ ಐಹೊಳೆ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಮಳಿಗೆಗಳನ್ನು ಸಂಸದ ಜಗದೀಶ ಶೆಟ್ಟರ್, ಚಿತ್ರಕಲಾ ಪ್ರದರ್ಶನವನ್ನು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಉದ್ಘಾಟಿಸುವರು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದೆ ವಿಶ್ವೇಶ್ವರ ಹೆಗಡೆ ಕಾಗೇರಿ ಗ್ರಂಥಗಳನ್ನು ಲೋಕಾರ್ಪಣೆ ಮಾಡುವರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಆಶಯನುಡಿ ವ್ಯಕ್ತಪಡಿಸುವರು. ಶಾಸಕ ಮಹೇಂದ್ರ ತಮ್ಮಣ್ಣವರ ಅಧ್ಯಕ್ಷತೆ ವಹಿಸುವರು. ಪರಿಷತ್ ರಾಯಬಾಗ ತಾಲ್ಲೂಕು ಘಟಕದ ಅಧ್ಯಕ್ಷ ಈರನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡುವರು.
ಎರಡು ದಿನ ವಿವಿಧ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.
ಸಮ್ಮೇಳನದ ಅಧ್ಯಕ್ಷರಿಗೆ ಆಹ್ವಾನ: ಸರ್ವಾಧ್ಯಕ್ಷ ವಿ.ಎಸ್.ಮಾಳಿ ಅವರಿಗೆ ಸಮ್ಮೇಳನಕ್ಕೆ ಅಧಿಕೃತವಾಗಿ ಆಹ್ವಾನ ನೀಡಲಾಯಿತು. ಮಹಿಳಾ ಕದಳಿ ವೇದಿಕೆಯ ಸದಸ್ಯೆಯರು ಆರತಿ ಮಾಡಿದರು.
ಶಾಸಕ ದುರ್ಯೋಧನ ಐಹೊಳೆ ಮಾತನಾಡಿ, ‘ಮಾಳಿ ಅವರು ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ. ಎಲ್ಲರೂ ಸೇರಿಕೊಂಡು ಸಮ್ಮೇಳನ ಯಶಸ್ವಿಗೊಳಿಸೋಣ’ ಎಂದರು.
ವಿ.ಎಸ್.ಮಾಳಿ, ‘ಜನರ ಒತ್ತಾಸೆ ಮೇರೆಗೆ ನನ್ನನ್ನು ಸರ್ವಾಧ್ಯಕ್ಷನಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಎಲ್ಲ ಕನ್ನಡ ಮನಸ್ಸುಗಳಿಗೆ ಕೃತಜ್ಞತೆ ಅರ್ಪಿಸುತ್ತೇನೆ’ ಎಂದರು.
ಈರನಗೌಡ ಪಾಟೀಲ, ಬಿ.ಸಿ.ಸರಿಕರ, ಎಲ್.ಎಸ್.ಜಂಬಗಿ, ಜಿನ್ನಪ್ಪ ಅಸ್ಕಿ, ರಾಮಣ್ಣ ಗಸ್ತಿ, ಭೀಮು ಬದ್ನಿಕಾಯಿ, ಐ.ಆರ್.ಮಠಪತಿ, ಪುರಸಭೆ ಅಧ್ಯಕ್ಷ ವಸಂತ ಲಾಳಿ, ಉಪಾಧ್ಯಕ್ಷ ಬಸವರಾಜ ಅರಕೇರಿ, ಶ್ರೀಶೈಲ ಉಮರಾಣಿ, ಶ್ರೀಪತಿ ದಟವಾಡ, ಸುರೇಶ ಐಹೊಳೆ, ರವೀಂದ್ರ ಪಾಟೀಲ, ಧನಪಾಲ ಶಿರಹಟ್ಟಿ, ಪಿ.ಬಿ. ನರಗುಂದ, ಪಿ.ಬಿ.ಕಲ್ಚಮಡ್, ಎಸ್.ಎಸ್.ಕಾಂಬಳೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.