ADVERTISEMENT

ಜಲಜೀವನ: ಸಮರ್ಪಕ ಅನುಷ್ಠಾನಗೊಳಿಸಿ- ಸಚಿವ ಗೋವಿಂದ ಕಾರಜೋಳ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 13:09 IST
Last Updated 8 ಜುಲೈ 2021, 13:09 IST
ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಭೂ ಅಭಿವೃದ್ಧಿ ಯೋಜನೆಯಲ್ಲಿ ಐವರು ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಗುರುವಾರ ವಿತರಿಸಲಾಯಿತು
ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಭೂ ಅಭಿವೃದ್ಧಿ ಯೋಜನೆಯಲ್ಲಿ ಐವರು ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಗುರುವಾರ ವಿತರಿಸಲಾಯಿತು   

ಬೆಳಗಾವಿ: ‘ಎಲ್ಲರಿಗೂ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷೆಯೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ರೂಪಿಸಿರುವ ಜಲಜೀವನ ಅಭಿಯಾನದಲ್ಲಿ ರಾಜ್ಯಕ್ಕೆ ₹ 5ಸಾವಿರ ಕೋಟಿ ಅನುದಾನ ದೊರೆತಿದೆ. ಇದನ್ನು ಬಳಸಿಕೊಂಡು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಾಕೀತು ಮಾಡಿದರು.

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಗುರುವಾರ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಮುರಗೋಡಕ್ಕೆ ಕುಡಿಯುವ ನೀರು ಸಮರ್ಪಕವಾಗಿ ಪೂರೈಸಲು ನಿರಂತರ ವಿದ್ಯುತ್ ಒದಗಿಸಲು ಅಗತ್ಯವಿರುವ ಎಕ್ಸ್‌ಪ್ರೆಸ್‌ ಫೀಡರ್ ಲೈನ್ ನಿರ್ಮಿಸಿಕೊಡಬೇಕು’ ಎಂದು ಸೂಚಿಸಿದರು.

ADVERTISEMENT

ವ್ಯವಸ್ಥೆ ಮಾಡಿಕೊಳ್ಳಿ: ‘ಸಂಭವನೀಯ ಕೋವಿಡ್ 3ನೇ ಅಲೆ ಎದುರಾದರೆ ಆಸ್ಪತ್ರೆಗಳಲ್ಲಿ ತಾಯಿ ಮತ್ತು ಮಕ್ಕಳನ್ನು ಒಟ್ಟಿಗೆ ಇರಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು. ಮುಂದಿನ ಅಲೆಯ ಬಗ್ಗೆ ಬೇರೆ ಬೇರೆ ಅಭಿಪ್ರಾಯಗಳಿವೆ. ಆದರೆ, ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ರೋಗಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಹಾಸಿಗೆಗಳು ಮತ್ತು ಆಮ್ಲಜನಕ ಲಭ್ಯವಿರುವಂತೆ ನಿಗಾ ವಹಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಗೊಬ್ಬರ ಮಾರಾಟಕ್ಕೆ ಸಹಕಾರಿ ಸಂಸ್ಥೆಗಳಿಗೆ ಮುಕ್ತವಾಗಿ ಪರವಾನಗಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಸದ್ಯಕ್ಕೆ 85ಸಾವಿರ ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನಿದೆ. ಸಮರ್ಪಕ ಪೂರೈಕೆಗೆ ಅನುಕೂಲ ಆಗುವಂತೆ ರೈತರ ನೇತೃತ್ವದ ಪಿಕೆಪಿಎಸ್‌ಗಳಿಗೆ ಪರವಾನಗಿ ಕೊಡಬೇಕು. ಸಹಕಾರಿ ಸಂಘಗಳಿಗೆ ಗೊಬ್ಬರ ಮಾರಾಟಕ್ಕೆ ಪರವಾನಗಿ ನೀಡುವಾಗ ಯಾವುದೇ ಷರತ್ತುಗಳನ್ನು ವಿಧಿಸಬಾರದು’ ಎಂದು ತಾಕೀತು ಮಾಡಿದರು.

ಕೊರತೆ ಇಲ್ಲ: ‘550 ಪಿಕೆಪಿಎಸ್‌ಗಳಿಗೆ ಈಗಾಗಲೇ ಪರವಾನಗಿ ಕೊಡಲಾಗಿದೆ. ಉತ್ತಮ ಮಳೆಯಾಗಿದ್ದು, ಬಿತ್ತನೆ ಬೀಜ-ಗೊಬ್ಬರ ಸೇರಿದಂತೆ ಯಾವುದೇ ಕೊರತೆ ಇಲ್ಲ. ಇದುವರೆಗೆ ಶೇ 80ರಷ್ಟು ಬಿತ್ತನೆಯಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಮಾಹಿತಿ ನೀಡಿದರು.

‘ರಾಜ್ಯದಲ್ಲಿ 4,835 ಎಕರೆ ಜಮೀನನ್ನು ₹ 500 ಕೋಟಿಯಲ್ಲಿ ಖರೀದಿಸಿ ಭೂರಹಿತ ಪರಿಶಿಷ್ಟ ಜಾತಿ/ ಪಂಗಡದ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಕುಟುಂಬಗಳು ಆರ್ಥಿಕ ಪ್ರಗತಿ ಸಾಧಿಸಬೇಕು’ ಎಂದು ಸಲಹೆ ನೀಡಿದರು.

ಸಮೀಕ್ಷೆ ಸಮರ್ಪಕವಾಗಿರಲಿ: ‘ಕೋವಿಡ್ 3ನೇ ಅಲೆ ಹಿನ್ನೆಲೆಯಲ್ಲಿ ಮಕ್ಕಳ ಚಿಕಿತ್ಸೆಗೆ 420 ಆಮ್ಲಜನಕ ಸೌಲಭ್ಯ ಹೊಂದಿರುವ ಹಾಸಿಗೆಗಳ ವ್ಯವಸ್ಥೆಯಾಗಿದೆ. ತಾಲ್ಲೂಕು ಆಸ್ಪತ್ರೆಗಳ ಸಿಬ್ಬಂದಿಗೆ ವೆಂಟಿಲೇಟರ್ ಬಳಕೆ ಸೇರಿದಂತೆ ಅಗತ್ಯ ತರಬೇತಿ ನೀಡಲಾಗುತ್ತಿದೆ’ ಎಂದು ಡಿಎಚ್‌ಒ ಡಾ‌.ಎಸ್.ವಿ. ಮುನ್ಯಾಳ ತಿಳಿಸಿದರು.

ಕೈಮಗ್ಗ, ಜವಳಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ ಪಾಟೀಲ, ‘ಅತಿವೃಷ್ಟಿ ಸಂದರ್ಭದಲ್ಲಿ ಬೆಳೆ ಹಾನಿಯಾದಾಗ ಪ್ರತಿಯೊಬ್ಬ ರೈತರಿಗೂ ಸೂಕ್ತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಸಮೀಕ್ಷೆಯನ್ನು ಸಮರ್ಪಕವಾಗಿ ನಡೆಸಬೇಕು’ ಎಂದು ಸೂಚಿಸಿದರು.

ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಭೂ ಅಭಿವೃದ್ಧಿ ಯೋಜನೆಯಲ್ಲಿ 353 ಫಲಾನುಭವಿಗಳಿಗೆ ಜಮೀನು ಮಂಜೂರಾಗಿದ್ದು, ಈ ಪೈಕಿ ಸಾಂಕೇತಿಕವಾಗಿ ಐವರಿಗೆ ಹಕ್ಕುಪತ್ರಗಳನ್ನು ವಿತರಿಸಲಾಯಿತು.

ವಿಧಾನಪರಿಷತ್‌ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಡಿ.ಎಂ. ಐಹೊಳೆ ಮಾತನಾಡಿದರು. ಸಂಸದೆ ಮಂಗಲಾ ಸುರೇಶ ಅಂಗಡಿ, ವಿಧಾನಪರಿಷತ್ ಸದಸ್ಯ ವಿವೇಕರಾವ ಪಾಟೀಲ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್, ಎಸ್ಪಿ ಲಕ್ಷ್ಮಣ ನಿಂಬರಗಿ ಇದ್ದರು.

ಜಿ.ಪಂ. ಸಿಇಒ ಎಚ್‌.ವಿ. ದರ್ಶನ್ ನಿರ್ವಹಿಸಿದರು.

***

ಅಭಿಯಾನ ನಡೆಸಿ

ಸಾಮಾಜಿಕ ಭದ್ರತಾ ಯೋಜನೆಯಲ್ಲಿ ವಿಧವೆಯರು, ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಸೌಲಭ್ಯ ಕಲ್ಪಿಸಲು ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಬೇಕು.

–ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.