ADVERTISEMENT

ಗಡಿ ಆಯೋಗದ ಪ್ರಾದೇಶಿಕ ಕಚೇರಿಗೆ ಶಿಫಾರಸು

ಕರ್ನಾಟಕ ಗಡಿ ಮತ್ತು ನದಿಗಳ ಸಂರಕ್ಷಣಾ ಆಯೋಗದ ಅಧ್ಯಕ್ಷ ಶಿವರಾಜ್ ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 5:41 IST
Last Updated 14 ಮಾರ್ಚ್ 2024, 5:41 IST
ಬೆಳಗಾವಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಕರ್ನಾಟಕ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಸಭೆಯಲ್ಲಿ ಅಧ್ಯಕ್ಷ ಶಿವರಾಜ್ ಪಾಟೀಲ ಮಾತನಾಡಿದರು. ರೋಹನ್‌ ಜಗದೀಶ, ರಾಹುಲ್‌ ಶಿಂಧೆ, ಡಾ.ಭೀಮಾಶಂಕರ ಗುಳೇದ, ನಿತೇಶ್‌ ಪಾಟೀಲ ಚಿತ್ರದಲ್ಲಿದ್ದಾರೆ – ಪ್ರಜಾವಾಣಿ ಚಿತ್ರ
ಬೆಳಗಾವಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಕರ್ನಾಟಕ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಸಭೆಯಲ್ಲಿ ಅಧ್ಯಕ್ಷ ಶಿವರಾಜ್ ಪಾಟೀಲ ಮಾತನಾಡಿದರು. ರೋಹನ್‌ ಜಗದೀಶ, ರಾಹುಲ್‌ ಶಿಂಧೆ, ಡಾ.ಭೀಮಾಶಂಕರ ಗುಳೇದ, ನಿತೇಶ್‌ ಪಾಟೀಲ ಚಿತ್ರದಲ್ಲಿದ್ದಾರೆ – ಪ್ರಜಾವಾಣಿ ಚಿತ್ರ   

ಬೆಳಗಾವಿ: ‘ಗಡಿ ಮತ್ತು ನದಿಗಳ ಸಂರಕ್ಷಣೆಗೆ ಸಂಬಂಧಿಸಿ ಸ್ಥಳೀಯರ ಅಹವಾಲು ಆಲಿಸಲು ಅನುಕೂಲವಾಗುವಂತೆ ಕರ್ನಾಟಕ ಗಡಿ ಮತ್ತು ನದಿಗಳ ಸಂರಕ್ಷಣಾ ಆಯೋಗದ ಪ್ರಾದೇಶಿಕ ಕಚೇರಿಯನ್ನು ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಆರಂಭಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಕರ್ನಾಟಕ ಗಡಿ ಮತ್ತು ನದಿಗಳ ಸಂರಕ್ಷಣಾ ಆಯೋಗದ ಅಧ್ಯಕ್ಷ ಶಿವರಾಜ್ ಪಾಟೀಲ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕರ್ನಾಟಕ ಗಡಿ ಮತ್ತು ನದಿಗಳ ಸಂರಕ್ಷಣಾ ಆಯೋಗದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪ್ರಾದೇಶಿಕ ಕಚೇರಿಗೂ ಮುನ್ನ ಸೌಧದಲ್ಲಿ ಆಯೋಗದ ಸಂಪರ್ಕ ಕಚೇರಿ ತೆರೆಯಲಾಗುವುದು. ಎರಡು ಕೊಠಡಿ ನೀಡಲಾಗುವುದು. ಅದಕ್ಕೆ ಸ್ಥಳೀಯ ಸದಸ್ಯರೊಬ್ಬರನ್ನು ನಿಯೋಜಿಸಲಾಗುವುದು. ಅವರು ಸ್ಥಳೀಯರು ಮತ್ತು ಸಂಘ–ಸಂಸ್ಥೆಯವರು ಗಡಿ ಮತ್ತು ನದಿಗಳ ರಕ್ಷಣೆಗೆ ಸಂಬಂಧಿಸಿ ತಮ್ಮ ಅಹವಾಲು ಸ್ವೀಕರಿಸುತ್ತಾರೆ. ನಿಯಮಿತವಾಗಿ ಸಭೆ ನಡೆಸುತ್ತಾರೆ. ಮೂರು ತಿಂಗಳಿಗೊಮ್ಮೆ ಬೆಳಗಾವಿಯಲ್ಲೂ ಆಯೋಗದ ಸಭೆ ನಡೆಸಲು ಪ್ರಯತ್ನಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಗಡಿಗೆ ಸಂಬಂಧಿಸಿದ ಅಹವಾಲುಗಳನ್ನು ಸಲ್ಲಿಸಲು ಬೆಂಗಳೂರಿಗೆ ಆಗಮಿಸಲು ಗಡಿ ಕನ್ನಡಿಗರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಸುವರ್ಣಸೌಧದಲ್ಲೇ ಪ್ರಾದೇಶಿಕ ಕಚೇರಿ ತೆರೆಯಬೇಕು’ ಎಂದು ಕನ್ನಡ ಹೋರಾಟಗಾರರಾದ ಅಶೋಕ ಚಂದರಗಿ, ಮಹಾದೇವ ತಳವಾರ ಒತ್ತಾಯಿಸಿದರು.

‘ನಿಮ್ಮ ಬೇಡಿಕೆಯಂತೆ ಶಿಫಾರಸು ಮಾಡುತ್ತೇನೆ. ಆದರೆ, ಕಚೇರಿ ತೆರೆಯುವ ಬಗ್ಗೆ ಸರ್ಕಾರವೇ ತೀರ್ಮಾನ ಕೈಗೊಳ್ಳಲಿದೆ’ ಎಂದು ಶಿವರಾಜ್‌ ಪಾಟೀಲ ಹೇಳಿದರು.

ನಾವೂ ಸಿದ್ಧತೆ ಮಾಡಿಕೊಂಡಿದ್ದೇವೆ: ‘ಸುಪ್ರೀಂ ಕೋರ್ಟ್‌ನಲ್ಲಿರುವ ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿ ಮಹಾರಾಷ್ಟ್ರದವರು ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ಗಡಿ ಉಸ್ತುವಾರಿಗೆ ಇಬ್ಬರು ಸಚಿವರನ್ನು ನೇಮಿಸಿದ್ದಾರೆ. ಉನ್ನತಾಧಿಕಾರ ಸಮಿತಿ ರಚಿಸಿದ್ದಾರೆ. ಎಲ್ಲ ರೀತಿಯಿಂದ ಕನ್ನಡಿಗರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಕರ್ನಾಟಕ ಸರ್ಕಾರ ಮೌನ ವಹಿಸಿದೆ’ ಎಂದು ಕನ್ನಡ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.

‘ವಾದ ಮಂಡನೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ರಾಜ್ಯದ ವಕೀಲರೊಂದಿಗೆ ಸಭೆ ನಡೆಸಲಾಗುವುದು. ಕರ್ನಾಟಕದ ಒಬ್ಬ ನ್ಯಾಯಾಧೀಶರು ಇದ್ದ ಕಾರಣ, ಈ ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಸಲು ಸಾಧ್ಯವಾಗಲಿಲ್ಲ. ಲೋಕಸಭೆ ಚುನಾವಣೆ ನಂತರ, ಪ್ರಕರಣ ವಿಚಾರಣೆಗೆ ಬರಬಹುದು. ಶೀಘ್ರ ವಿಚಾರಣೆಗೆ ಪ್ರಯತ್ನಿಸಲಾಗುವುದು. ರಾಜ್ಯಗಳ ಹಿತಾಸಕ್ತಿ ರಕ್ಷಿಸಲು ಅಗತ್ಯ ನೆರವು ನೀಡಲಾಗುವುದು’ ಎಂದು ಹೇಳಿದರು.

‘ನದಿಗಳು ಮತ್ತು ಗಡಿಗಳ ಸಮಸ್ಯೆ ಎದುರಾದಾಗ, ಕಾನೂನಾತ್ಮಕವಾಗಿ ಯಾವ ರೀತಿಯಲ್ಲಿ ರಕ್ಷಣೆ ಮಾಡಬೇಕು ಎಂಬುದನ್ನು ಸಲಹೆ ರೂಪದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದರು.

ರಾಜ್ಯೋತ್ಸವಕ್ಕೆ ಹೆಚ್ಚಿನ ಅನುದಾನ: ‘ಬೆಳಗಾವಿಯಲ್ಲಿ ನ. 1ರಂದು ಜರುಗುವ ಕರ್ನಾಟಕ ರಾಜ್ಯೋತ್ಸವದಲ್ಲಿ 5 ಲಕ್ಷಕ್ಕೂ ಹೆಚ್ಚು ಜನ ಸೇರುತ್ತಾರೆ. ರಾಜ್ಯದಲ್ಲಿ ಬೆಳಗಾವಿಯಲ್ಲೇ ಅದ್ಧೂರಿಯಾಗಿ ಕನ್ನಡ ಹಬ್ಬ ನೆರವೇರುತ್ತದೆ. ಇದಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಪಾಟೀಲ ಭರವಸೆ ನೀಡಿದರು.

ಆಯೋಗದ ಸದಸ್ಯರಾದ ದಿನಕರ ದೇಸಾಯಿ, ಎಸ್.ಎಂ. ಕುಲಕರ್ಣಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ನಗರ ಪೊಲೀಸ್‌ ಉಪ ಆಯುಕ್ತ ರೋಹನ್ ಜಗದೀಶ, ಮಹಾನಗರ ಪಾಲಿಕೆ ಆಯುಕ್ತ ಪಿ.ಎನ್. ಲೋಕೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಇದ್ದರು.

‘ನಾಡವಿರೋಧಿ ಕೆಲಸಕ್ಕೂ ಹಿಂಜರಿಯುತ್ತಿಲ್ಲ’

‘ಕರ್ನಾಟಕದ ಐದು ಜಿಲ್ಲೆಗಳ 865 ಹಳ್ಳಿಗಳಲ್ಲಿ ಮಹಾರಾಷ್ಟ್ರ ಸರ್ಕಾರ ಆರೋಗ್ಯ ವಿಮೆ ಯೋಜನೆ ಜಾರಿಗೊಳಿಸುವ ಮೂಲಕ ಕರ್ನಾಟಕದ ಮೇಲೆ ತನ್ನ ಹಕ್ಕು ಸಾಧಿಸಲು ಯತ್ನಿಸುತ್ತಿದೆ. ಆದರೆ ಮರಾಠಿಗರ ಮತಗಳು ಕೈತಪ್ಪಬಾರದೆಂದು ಮಹಾರಾಷ್ಟ್ರ ಸರ್ಕಾರದ ವಿರುದ್ಧ ನಮ್ಮ ಜನಪ್ರತಿನಿಧಿಗಳು ಧ್ವನಿ ಎತ್ತುತ್ತಿಲ್ಲ. ನಾಡವಿರೋಧಿ ಕೆಲಸಕ್ಕೂ ಹಿಂಜರಿಯುತ್ತಿಲ್ಲ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಆಕ್ರೋಶ ಹೊರಹಾಕಿದರು.

ಎಂಇಎಸ್ ಶಿವಸೇನೆ ನಿಷೇಧಿಸಿ

‘ಗಡಿಯಲ್ಲಿ ಸದಾ ಕ್ಯಾತೆ ತೆಗೆಯುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶಿವಸೇನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕು. ಎರಡೂ ಸಂಘಟನೆಗಳ ಕಾರ್ಯಕರ್ತರನ್ನು ಗುಂಡಾ ಕಾಯ್ದೆಯಡಿ ಬಂಧಿಸಿ ಶಿಸ್ತು ಕ್ರಮ ಜರುಗಿಸಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಒತ್ತಾಯಿಸಿದರು.

ಕನ್ನಡ ಅನುಷ್ಠಾನಕ್ಕೆ ಪಟ್ಟು

ಗಡಿಯಲ್ಲಿ ಪರಿಣಾಮಕಾರಿಯಾಗಿ ಕನ್ನಡ ಅನುಷ್ಠಾನಗೊಳಿಸಬೇಕು. ಸರ್ಕಾರ ವಿಧಿಸಿದ ಗಡುವು ಮುಗಿಯುವುದರೊಳಗೆ ಎಲ್ಲ ವಾಣಿಜ್ಯ ಮಳಿಗೆಗಳು ಮತ್ತು ಅಂಗಡಿಗಳ ನಾಮಫಲಕದಲ್ಲಿ ಶೇ 60ರಷ್ಟು ಕನ್ನಡ ಬಳಕೆಗೆ ಕ್ರಮ ವಹಿಸಬೇಕು. ಅಂಗನವಾಡಿ ಕೇಂದ್ರಗಳು ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಭಾಷೆ ಶಿಕ್ಷಕರನ್ನು ನೇಮಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ‌ ಮೆಟಗುಡ್ಡ ಶ್ರೀನಿವಾಸ ತಾಳೂಕರ ಮತ್ತಿತರರು ಮಂಡಿಸಿದರು.

‘ಕೊಠಡಿಗಳನ್ನು ಬಿಟ್ಟುಕೊಡುತ್ತಿಲ್ಲ’

‘ಬೆಳಗಾವಿ ಜಿಲ್ಲೆಯ ಹಲವೆಡೆ ಕನ್ನಡ ಮತ್ತು ಮರಾಠಿ ಮಾಧ್ಯಮ ಸರ್ಕಾರಿ ಶಾಲೆಗಳು ಒಂದೇ ಕಡೆ ಇವೆ. ಕನ್ನಡ ಮಾಧ್ಯಮದಲ್ಲಿ ಹೆಚ್ಚು ವಿದ್ಯಾರ್ಥಿಗಳಿದ್ದರೂ ತರಗತಿ ಕೊಠಡಿಗಳು ಲಭ್ಯವಿಲ್ಲ. ಮರಾಠಿ ಮಾಧ್ಯಮದಲ್ಲಿ ಹೆಚ್ಚಿನ ಕೊಠಡಿಗಳಿದ್ದರೂ ವಿದ್ಯಾರ್ಥಿಗಳಿಲ್ಲ. ಆದರೂ ಕನ್ನಡ ಮಾಧ್ಯಮಕ್ಕೆ ಹೆಚ್ಚುವರಿ ಕೊಠಡಿಗಳನ್ನು ಬಿಟ್ಟುಕೊಡುತ್ತಿಲ್ಲ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸಂಚಾಲಕ ಮಹಾದೇವ ತಳವಾರ ಆಕ್ಷೇಪ ವ್ಯಕ್ತಪಡಿಸಿದರು. ‘ಈ ಬಗ್ಗೆ ಪರಿಶೀಲಿಸಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗುವುದು’ ಎಂದು ಶಿವರಾಜ್‌ ಪಾಟೀಲ ಭರವಸೆ ನೀಡಿದರು.

ಗಮನ ಸೆಳೆದ ಸಿದ್ದಿಗಳು!

ಕರ್ನಾಟಕ ಗಡಿ ಮತ್ತು ನದಿಗಳ ಸಂರಕ್ಷಣಾ ಆಯೋಗದ ಅಧ್ಯಕ್ಷ ಶಿವರಾಜ್ ಪಾಟೀಲ ಅವರು ಬುಧವಾರ ನಡೆಸಿದ ಸಭೆಯಲ್ಲಿ ಪಾಲ್ಗೊಂಡ ಸಿದ್ದಿ ಸಮುದಾಯದ ಮುಖಂಡರು ಎಲ್ಲರ ಗಮನ ಸೆಳೆದರು. ಸಿದ್ದಿಗಳು ಉತ್ತರ ಕನ್ನಡ ಜಿಲ್ಲೆಯಲ್ಲಿಷ್ಟೇ ಇದ್ದಾರೆ ಎಂಬ ಮಾತಿದೆ. ಆದರೆ ಖಾನಾಪುರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ 9000ಕ್ಕೂ ಹೆಚ್ಚು ಸಿದ್ದಿಗಳು ಇದ್ದೇವೆ. ಅವರ ಪ್ರತಿನಿಧಿಯಾಗಿ ಸಭೆಯಲ್ಲಿ ಪಾಲ್ಗೊಂಡಿದ್ದೇವೆ ಎಂದು ಸಿದ್ದಿಗಳು ಹೇಳಿದರು. ‘ಉದ್ಯೋಗಕ್ಕಾಗಿ ನಾವು ಗೋವಾ ಮಹಾರಾಷ್ಟ್ರಕ್ಕೆ ವಲಸೆ ಹೋಗಬೇಕಾದ ಅನಿವಾರ್ಯವಿದೆ. ಇದನ್ನು ನಿಲ್ಲಿಸಲು ಹಾಡಿಗಳಲ್ಲಿ ಉದ್ಯೋಗ ಆರೋಗ್ಯ ಶಿಕ್ಷಣ ಒದಗಿಸಲು ಕ್ರಮ ವಹಿಸಬೇಕು’ ಎಂದು ಮನವಿ ಕೂಡ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.