ADVERTISEMENT

ಬೆಳಗಾವಿ | ಖಾದಿ ಗ್ರಾಮೋದ್ಯೋಗ ಸಂಘ: ₹55 ಲಕ್ಷ ಬಾಕಿ

ರಾಜ್ಯ ಸರ್ಕಾರದಿಂದ ನಿಯಮಿತವಾಗಿ ಬಿಡುಗಡೆಯಾಗದ ಮಾರುಕಟ್ಟೆ ಸಹಾಯಧನ

ಇಮಾಮ್‌ಹುಸೇನ್‌ ಗೂಡುನವರ
Published 12 ಆಗಸ್ಟ್ 2025, 2:33 IST
Last Updated 12 ಆಗಸ್ಟ್ 2025, 2:33 IST
ಬೆಳಗಾವಿ ತಾಲ್ಲೂಕಿನ ಹುದಲಿಯ ಖಾದಿ ಮತ್ತು ಗ್ರಾಮೋದ್ಯೋಗ ಸಹಕಾರಿ ಉತ್ಪಾದಕ ಸಂಘ
ಬೆಳಗಾವಿ ತಾಲ್ಲೂಕಿನ ಹುದಲಿಯ ಖಾದಿ ಮತ್ತು ಗ್ರಾಮೋದ್ಯೋಗ ಸಹಕಾರಿ ಉತ್ಪಾದಕ ಸಂಘ   

ಬೆಳಗಾವಿ: ತಾಲ್ಲೂಕಿನ ಹುದಲಿಯ ಖಾದಿ ಮತ್ತು ಗ್ರಾಮೋದ್ಯೋಗ ಸಹಕಾರಿ ಉತ್ಪಾದಕ ಸಂಘಕ್ಕೆ ರಾಜ್ಯ ಸರ್ಕಾರದಿಂದ ₹55 ಲಕ್ಷ ಮಾರುಕಟ್ಟೆ ಸಹಾಯಧನ ಬರುವುದು ಬಾಕಿ ಇದೆ. ಅಲ್ಲದೆ, ಖಾದಿ ಉತ್ಪಾದನೆ ಕೇಂದ್ರಗಳಲ್ಲಿ ನೂಲುವವರು ಹಾಗೂ ನೇಯುವವರಿಗೆ ₹18 ಲಕ್ಷ ಪ್ರೋತ್ಸಾಹಧನ ಬರಬೇಕಿದೆ.

ಹಲವು ವರ್ಷಗಳಿಂದ ಬಾಕಿ ಮೊತ್ತ ಪಾವತಿಯಾಗದ ಕಾರಣ ಸಂಘದವರು ಹಾಗೂ ಈ ವೃತ್ತಿ ನೆಚ್ಚಿಕೊಂಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

1937ರಲ್ಲಿ ಹುದಲಿಗೆ ಭೇಟಿ ನೀಡಿದ್ದ ಮಹಾತ್ಮ ಗಾಂಧೀಜಿ ಸ್ವದೇಶಿ ಉತ್ಪನ್ನ ಬಳಸುವಂತೆ ಕರೆಕೊಟ್ಟಿದ್ದರು. ಇದರಿಂದ ಪ್ರೇರಿತರಾಗಿ 11 ಜನರು ₹500 ಬಂಡವಾಳದಲ್ಲಿ 1954ರಲ್ಲಿ ಸ್ಥಾಪಿಸಿದ್ದ ಸಂಘ ಇಂದಿಗೂ ಖಾದಿ ಉತ್ಪನ್ನ ತಯಾರಿಸುತ್ತಿದೆ.

ADVERTISEMENT

ಹುದಲಿಯೊಂದಿಗೆ ಬೆಳಗಾವಿ ತಾಲ್ಲೂಕಿನ ಮಾರಿಹಾಳ, ಪಂತಬಾಳೇಕುಂದ್ರಿ, ಸುಳೇಭಾವಿ, ಕರಡಿಗುದ್ದಿ, ಹೊಸ ವಂಟಮುರಿ, ಗೋಕಾಕ ತಾಲ್ಲೂಕಿನ ಪಂಜಾನಟ್ಟಿ, ಎಂ.ಮಲ್ಲಾಪುರ, ಉರಬಿನಹಟ್ಟಿ, ಹುಕ್ಕೇರಿ ತಾಲ್ಲೂಕಿನ ಪಾಶ್ಚಾಪುರ, ಅಥಣಿ ತಾಲ್ಲೂಕಿನ ಕಟಗೇರಿ, ರಾಮದುರ್ಗ ತಾಲ್ಲೂಕಿನ ಸುರೇಬಾನ, ರಾಮದುರ್ಗದಲ್ಲಿ ಖಾದಿ ಉತ್ಪಾದನೆ ಕೇಂದ್ರಗಳಿವೆ. 

₹55 ಲಕ್ಷ ಬರಬೇಕಿದೆ: 

‘2023-24ರಲ್ಲಿ ₹65 ಲಕ್ಷ, ₹2024–25ರಲ್ಲಿ ₹80 ಲಕ್ಷ ಮೌಲ್ಯದ ಖಾದಿ ಉತ್ಪನ್ನ ತಯಾರಿಸಿದ್ದೆವು. ಅವುಗಳ ಮಾರಾಟಕ್ಕಾಗಿ ಗ್ರಾಹಕರನ್ನು ಸೆಳೆಯಲು ಶೇ 35 ರಿಯಾಯಿತಿ ಕೊಟ್ಟಿದ್ದೆವು. ಶೇ 15 ರಿಯಾಯಿತಿ ಮೊತ್ತವನ್ನು ಮಾರುಕಟ್ಟೆ ಸಹಾಯಧನ ರೂಪದಲ್ಲಿ ರಾಜ್ಯ ಸರ್ಕಾರವು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮೂಲಕ ನೀಡುತ್ತಿತ್ತು. ಹಲವು ವರ್ಷಗಳಿಂದ ಅದು ನಿಯಮಿತವಾಗಿ ಬರುತ್ತಿಲ್ಲ. 2024–25ನೇ ಸಾಲಿನ ಅಂತ್ಯದವರೆಗೆ ₹55 ಲಕ್ಷ ಬರಬೇಕಿದೆ’ ಎಂದು ಖಾದಿ ಮತ್ತು ಗ್ರಾಮೋದ್ಯೋಗ ಸಹಕಾರಿ ಉತ್ಪಾದಕ ಸಂಘದ ಕಾರ್ಯದರ್ಶಿ ರಾಘವೇಂದ್ರ ಹಮ್ಮನ್ನವರ ‘ಪ್ರಜಾವಾಣಿ’ಗೆ ತಿಳಿಸಿದರು.

ಖಾದಿ ಉತ್ಪಾದನೆ ಕೇಂದ್ರಗಳಲ್ಲಿ 700ಕ್ಕೂ ಅಧಿಕ ಕಾರ್ಮಿಕರು ನೂಲುವ, ನೇಯುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಂಘದಿಂದ ವೇತನ ಕೊಡಲಾಗುತ್ತದೆ. ಇದರೊಂದಿಗೆ ಒಂದು ಲಡಿ ನೂಲಿಗೆ ₹3 ಮತ್ತು 1 ಮೀಟರ್‌ ನೇಯ್ಗೆಗೆ ₹7 ಪ್ರೋತ್ಸಾಹಧನವನ್ನು ಸರ್ಕಾರ ನೀಡುತ್ತದೆ. ಸಕಾಲಕ್ಕೆ ಪ್ರೋತ್ಸಾಹಧನ ಕೈಗೆಟುಕದ ಕಾರಣ ಕಾರ್ಮಿಕರು ಪರದಾಡುವಂತಾಗಿದೆ.

‘ಖಾದಿ ಉತ್ಪಾದನೆಗಾಗಿ 45 ವರ್ಷಗಳಿಂದ ನೇಯುವ ಕೆಲಸದಲ್ಲಿ ತೊಡಗಿದ್ದೇನೆ. ಸಕಾಲಕ್ಕೆ ಸರ್ಕಾರದಿಂದ ಪ್ರೋತ್ಸಾಹಧನ ಸಿಕ್ಕರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಕಾರ್ಮಿಕ ಲವ ಉಪರಿ. 

ಖಾದಿ ಉತ್ಪಾದನೆಗಾಗಿ ನೂಲುವ ಕೆಲಸದಲ್ಲಿ ತೊಡಗಿದ ಮಹಿಳೆಯರು (ಸಂಗ್ರಹ ಚಿತ್ರ)
ಇತ್ತೀಚೆಗೆ ₹6 ಲಕ್ಷ ಮಾರುಕಟ್ಟೆ ಸಹಾಯಧನ ಮತ್ತು ಕಾರ್ಮಿಕರ ಪ್ರೋತ್ಸಾಹಧನ ಬಿಡುಗಡೆಯಾಗಿದೆ. ಈಗ ಬಾಕಿ ಉಳಿದಿರುವ ಮೊತ್ತ ಬಿಡುಗಡೆಗೆ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ
ಸಾವಿತ್ರಮ್ಮ ದಳವಾಯಿ, ಜಿಲ್ಲಾ ಅಭಿವೃದ್ಧಿ ಅಧಿಕಾರಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಬೆಳಗಾವಿ
ಆರ್ಥಿಕ ಸಂಕಷ್ಟದಲ್ಲಿದ್ದೇವೆ. ನಿಯಮಿತವಾಗಿ ಮಾರುಕಟ್ಟೆ ಸಹಾಯಧನ ಬಿಡುಗಡೆಯಾದರೆ ಕಾರ್ಯನಿರ್ವಹಣೆಗೆ ಅನುಕೂಲವಾಗುತ್ತದೆ
ರಾಘವೇಂದ್ರ ಹಮ್ಮನ್ನವರ, ಕಾರ್ಯದರ್ಶಿ ಖಾದಿ ಮತ್ತು ಗ್ರಾಮೋದ್ಯೋಗ ಸಹಕಾರಿ ಉತ್ಪಾದಕ ಸಂಘ ಹುದಲಿ

ಕೇಂದ್ರದಿಂದಲೂ ₹24 ಲಕ್ಷ ಬಾಕಿ  

ಖಾದಿ ಉತ್ಪನ್ನಗಳ ಮಾರಾಟಕ್ಕಾಗಿ ಗ್ರಾಹಕರಿಗೆ ನೀಡುವ ಶೇ 10ರಷ್ಟು ರಿಯಾಯಿತಿ ಮೊತ್ತವನ್ನು ಕೇಂದ್ರ ಸರ್ಕಾರವು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಮೂಲಕ ಭರಿಸುತ್ತದೆ. ಪ್ರತಿವರ್ಷ ಮಾರುಕಟ್ಟೆ ಸಹಾಯಧನ ನಿಯಮಿತವಾಗಿ ಬರುತ್ತಿದೆ. 2015–16ನೇ ಸಾಲಿನ 9 ತಿಂಗಳ ಸಹಾಯಧನವಷ್ಟೇ (₹24 ಲಕ್ಷ) ಬರುವುದು ಬಾಕಿ ಇದೆ. ‘ಬಾಕಿ ಇರುವ ಮಾರುಕಟ್ಟೆ ಸಹಾಯಧನವನ್ನು ಸಂಘಕ್ಕೆ ಬಿಡುಗಡೆಗೊಳಿಸಲು ಪ್ರಯತ್ನ ನಡೆಸಿದ್ದೇವೆ’ ಎಂದು ಆಯೋಗದ ಅಧಿಕಾರಿಗಳು ಹೇಳುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.