ಖಾನಾಪುರ: ತಾಲ್ಲೂಕಿನ 51 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಪ್ರತಿ ಸೋಮವಾರ ಕೈಗೊಳ್ಳಲಾಗುತ್ತಿರುವ ತೆರಿಗೆ ವಸೂಲಿ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಜುಲೈ ತಿಂಗಳಲ್ಲಿ ಒಟ್ಟು ₹1.64 ಕೋಟಿ ದಾಖಲೆಯ ತೆರಿಗೆ ಹಣ ಸಂಗ್ರಹಿಸಲಾಗಿದೆ ಎಂದು ತಾ.ಪಂ ಇ.ಒ ರಮೇಶ ಮೇತ್ರಿ ಮಾಹಿತಿ ನೀಡಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಪ್ರಸಕ್ತ ಸಾಲಿನಲ್ಲಿ ಪ್ರತಿಶತ ನೂರರಷ್ಟು ಗುರಿ ಸಾಧಿಸುವ ಉದ್ದೇಶದಿಂದ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ತೆರಿಗೆ ವಸೂಲಾತಿ ಅಭಿಯಾನವನ್ನು ಕೈಗೊಳ್ಳಲಾಗಿದೆ. ಗ್ರಾಪಂ ಪಿಡಿಒಗಳು, ಕಾರ್ಯದರ್ಶಿಗಳು, ಕರವಸೂಲಿಗಾರರು ಹಾಗೂ ಸಿಬ್ಬಂದಿ ಪ್ರತಿ ಸೋಮವಾರ ಇಡೀ ದಿನ ಬೆಳಗಿನಿಂದ ರಾತ್ರಿ ವೇಳೆಯವರೆಗೂ ಮನೆ-ಮನೆಗೆ ಭೇಟಿ ನೀಡಿ, ಸಾರ್ವಜನಿಕರ ಮನವೊಲಿಸಿ ತೆರಿಗೆ ಸಂಗ್ರಹಿಸುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರು ಕೂಡ ಸಹಕರಿಸುತ್ತಿದ್ದಾರೆ ಎಂದು ವಿವರಿಸಿದರು.
ತಾ.ಪಂ ಪಂಚಾಯತರಾಜ್ ಸಹಾಯಕ ನಿರ್ದೇಶಕ ವಿಜಯಕುಮಾರ ಕೋತಿನ ಮಾತನಾಡಿ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ನೀಡಲಾದ ಗುರಿಯನ್ನು ಬೆನ್ನಟ್ಟಿರುವ ತಾಲ್ಲೂಕಿನ 39 ಗ್ರಾಪಂಗಳು ನಿಗದಿತ ಗುರಿಗಿಂತ ಶೇ.25ರಷ್ಟು ಹೆಚ್ಚು ಪ್ರತಿಶತ ತೆರಿಗೆ ವಸೂಲಿ ಮಾಡಿವೆ. ಜುಲೈ ತಿಂಗಳಲ್ಲಿ ಕೈಗೊಂಡ ಅಭಿಯಾನದಲ್ಲಿ ಬೀಡಿ ಗ್ರಾಮ ಪಂಚಾಯತಿ ₹ 10,54,268 ತೆರಿಗೆ ವಸೂಲಾತಿ ಮಾಡುವ ಮೂಲಕ ತಾಲ್ಲೂಕಿಗೆ ಪ್ರಥಮ ಸ್ಥಾನದಲ್ಲಿದೆ. ನಂದಗಡ ₹10,08,530 ಹಾಗೂ ಇಟಗಿ ₹ 8,87,660 ವಸೂಲಾತಿ ಮಾಡಿ ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿವೆ. ಆಗಸ್ಟ್ ತಿಂಗಳಲ್ಲಿ ವಿಶೇಷ ಅಭಿಯಾನ ಕೈಗೊಳ್ಳಲು ಸೂಚಿಸಲಾಗಿದೆ. ಗ್ರಾಪಂ ವ್ಯಾಪ್ತಿಯ ಮೊಬೈಲ್ ಸ್ಥಾವರಗಳು, ಶಿಕ್ಷಣ ಸಂಸ್ಥೆಗಳು, ಖಾಸಗಿ ಮಳಿಗೆಯವರೂ ಸಹ ಈ ತಿಂಗಳಲ್ಲಿ ಕಡ್ಡಾಯವಾಗಿ ಬಾಕಿ ಇರುವ ತೆರಿಗೆಯನ್ನು ತುಂಬುವಂತೆ ಹಾಗೂ ತೆರಿಗೆ ತುಂಬದವರ ವಿರುದ್ಧ ಆಯಾ ಗ್ರಾಪಂಗಳಿಂದ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು. ಮಹಾಂತೇಶ ಜಾಂಗಟಿ, ಸಾತಪ್ಪ ಈರಗಾರ, ಗಣೇಶ ಅಲಾಬದಿ ಸೇರಿದಂತೆ ತಾಲ್ಲೂಕು ಪಂಚಾಯ್ತಿಯ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.