
ಬೆಳಗಾವಿ: ಕಳೆದ ಹಲವು ವರ್ಷಗಳ ಹಿಂದೆ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಯುವಕನಿಗೆ ಇಲ್ಲಿನ ಅರಿಹಂತ ಆಸ್ಪತ್ರೆಯಲ್ಲಿ ಯಶಸ್ವಿ ಕಸಿ ಮಾಡಲಾಗಿದೆ. ಆಸ್ಪತ್ರೆಯ ನುರಿತ ವೈದ್ಯರ ತಂಡವು ಯುವಕನಿಗೆ ಮರುಜನ್ಮ ನೀಡಿದೆ.
ಖಾನಾಪುರ ತಾಲ್ಲೂಕಿನ ಗೋಲ್ಯಾಳಿ ಗ್ರಾಮದ 26 ವರ್ಷದ ರಾಮದಾಸ ಕುಲಂ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತ, ಡಯಾಲಿಸಿಸ್‌ಗೆ ಒಳಗಾಗುತ್ತಿದ್ದರು. ಮಗನ ನೋವನ್ನು ನೋಡಲಾರದೇ ಅವರ ತಾಯಿ ಗುಣವಂತಿ ಕುಲಂ ಅವರು ತಮ್ಮ ಒಂದು ಕಿಡ್ನಿ ದಾನ ಮಾಡಿದರು.
ಅರಿಹಂತ ಆಸ್ಪತ್ರೆಗೆ ಆಗಮಿಸಿದಾಗ ನೆಫ್ರಾಲಜಿ ತಜ್ಞ ಡಾ.ವಿಜಯಕುಮಾರ ಪಾಟೀಲ ಅವರು ಮೂತ್ರಪಿಂಡ ಕಸಿ ಮಾಡಿದರೆ ಒಳ್ಳೆಯದು ಎಂದು ನಿರ್ಧಾರಕ್ಕೆ ಬಂದರು. ಡಿ.29ರಂದು ಶಸ್ತ್ರಚಿಕಿತ್ಸೆ ನೆರವೇರಿಸಿ ಕಿಡ್ನಿ ಕಸಿ ಮಾಡುವಲ್ಲಿ ಯಶಸ್ವಿಯಾದರು. ಈಗ ಯುವಕ ಸಂಪೂರ್ಣ ಚೇತರಿಸಿಕೊಂಡಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಯುರಾಲಾಜಿಸ್ಟ್ ಡಾ.ಅಮಿತ ಮುಂಗರವಾಡಿ, ಡಾ.ಶಿವಗೌಡ ಪಾಟೀಲ ಅವರು ನೆರವೇರಿಸಿದ ಶಸ್ತ್ರಚಿಕಿತ್ಸೆಗೆ ನೆಫ್ರಾಲಜಿಸ್ಟ್ ಡಾ.ವಿಜಯಕುಮಾರ ಪಾಟೀಲ, ಅರಿವಳಿಕೆ ತಜ್ಞ ಡಾ.ಎಂ.ಬಿ.ಪ್ರಶಾಂತ, ಡಾ.ಅವಿನಾಶ ಲೋಂಡೆ, ಡಾ.ಅಂಬರೀಷ ನೇರ್ಲಿಕರ ಅವರು ಸಹಕಾರ ನೀಡಿದರು.
‘ಗುಣವಂತಿ ಅವರು ತಾಯಿಯ ಮಮತೆ ಎತ್ತಿ ಹಿಡಿದರು. ತಮ್ಮ ಮಗನ ಯೋಗಕ್ಷೇಮಕ್ಕಾಗಿ ಅರ್ಪನಾ ಮನೋಭಾವದ ತಾಯಿಯು ಕೂಡ ಶಸ್ತ್ರಚಿಕಿತ್ಸೆಗೆ ಒಳಗಾದರು. ಅವರ ನಡೆ ಅಭಿನಂದನೀಯ’ ಎಂದು ಸಂಸ್ಥೆಯ ಅಧ್ಯಕ್ಷ ರಾವಸಾಹೇಬ ಪಾಟೀಲ, ನಿರ್ದೇಶಕ ಅಭಿನಂದನ ಪಾಟೀಲ ಮತ್ತು ಉತ್ತಮ ಪಾಟೀಲ ತಿಳಿಸಿದ್ದಾರೆ.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ಡಿ. ದೀಕ್ಷಿತ ಅವರು, ಅರಿಹಂತ ಆಸ್ಪತ್ರೆಯು ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ಒದಗಿಸುವ, ಆರೋಗ್ಯ ಸೇವೆಗಳ ಪ್ರಗತಿಗೆ ಕೊಡುಗೆ ನೀಡುವ ತನ್ನ ಬದ್ಧತೆಯನ್ನು ಎತ್ತಿಹಿಡಿದಿದೆ. ಅಂಗಾಂಗ ಕಸಿಯ ಮೂಲಕ ಜೀವವನ್ನು ಉಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.