ADVERTISEMENT

ಕಿಣಯೇ ಡ್ಯಾಂ ಕಾಮಗಾರಿ ಶೀಘ್ರ ಪೂರ್ಣ

ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2018, 19:46 IST
Last Updated 22 ಡಿಸೆಂಬರ್ 2018, 19:46 IST
ಬೆಳಗಾವಿ ತಾಲ್ಲೂಕಿನ ಕಿಣಯೇ ಡ್ಯಾಂ ಕಾಮಗಾರಿಯನ್ನು ಶನಿವಾರ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ವೀಕ್ಷಿಸಿದರು
ಬೆಳಗಾವಿ ತಾಲ್ಲೂಕಿನ ಕಿಣಯೇ ಡ್ಯಾಂ ಕಾಮಗಾರಿಯನ್ನು ಶನಿವಾರ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ವೀಕ್ಷಿಸಿದರು   

ಬೆಳಗಾವಿ: ಗ್ರಾಮೀಣ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ, ತಾಲ್ಲೂಕಿನ ಕಿಣಯೇ ಜಲಾಶಯದ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ತಿಳಿಸಿದರು.

ಶನಿವಾರ ಕಾಮಗಾರಿ ಪರಿಶೀಲಿಸಿ, ಎಡದಂಡೆ ಮತ್ತು ಬಲದಂಡೆ ಕಾಲುವೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಕರ್ನಾಟಕ ನೀರಾವರಿ ನಿಗಮದಿಂದ ₹ 58 ಕೋಟಿ ವೆಚ್ಚದಲ್ಲಿ ಡ್ಯಾಂ ನಿರ್ಮಿಸಲಾಗುತ್ತಿದೆ. ಈಗ ಮುಕ್ತಾಯವಾಗುತ್ತಿರುವುದರಿಂದ ₹ 14 ಕೋಟಿ ವೆಚ್ಚದಲ್ಲಿ ಎಡದಂಡೆ ಮತ್ತು ಬಲದಂಡೆ ಕಾಲುವೆ ನಿರ್ಮಾಣದ ಕಾಮಗಾರಿ ಕೈಗೊಳ್ಳಲಾಗಿದೆ. ಬಲದಂಡೆ ಕಾಲುವೆ 6 ಕಿಲೋ ಮೀಟರ್ ಉದ್ದವಿರಲಿದೆ. ಇದರಿಂದ ಕಿಣಯೇ, ರಣಕುಂಡೆ, ಸಂತಿಬಸ್ತವಾಡ, ವಾಗವಾಡೆ ಗ್ರಾಮಗಳ ಸುಮಾರು 2500 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಎಡದಂಡೆ ಕಾಲುವೆಯನ್ನು 4 ಕಿಲೋಮೀಟರ್ ನಿರ್ಮಿಸಲಾಗುತ್ತಿದೆ. ಇದರಿಂದ ಕಿಣಯೇ ಮತ್ತು ಬಾದರವಾಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರ ಎಕರೆ ಭೂಮಿಗೆ ನೀರು ದೊರೆಯಲಿದೆ. ಒಂದು ಕಾಲುವೆ ವಾಗವಾಡೆ ಗ್ರಾಮದ ಕೆರೆ ಬಳಿ ಮುಕ್ತಾಯವಾಗಲಿದ್ದು, ಇನ್ನೊಂದು ಬಾದರವಾಡಿ ಗ್ರಾಮದ ಕೆರೆ ಮುಟ್ಟಲಿದೆ. ಮುಂದಿನ ದಿನಗಳಲ್ಲಿ ಇದೇ ಡ್ಯಾಂನ್ ಮೂಲಕ ಸುತ್ತಮುತ್ತಲಿನ ಗ್ರಾಮಗಳ ಕೆರೆ ತುಂಬಿಸುವ ಯೋಜನೆ ರೂಪಿಸಿ ಅದಕ್ಕೆ ಮಂಜೂರಾತಿ ಪಡೆಯಲಾಗುವುದು’ ಎಂದು ಭರವಸೆ ನೀಡಿದರು.

ಮುಖಂಡರಾದ ತಾನಾಜಿ ಡೂಕರೆ, ಯುವರಾಜ ಕದಂ, ನಾರಾಯಣ ಗುರವ,ನೀರಾವರಿ ಇಲಾಖೆ ಮುಖ್ಯ ಎಂಜಿನಿಯರ್ ಸುರೇಶ ಡೂಕರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.