ಬೆಳಗಾವಿ: ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಪರಿವರ್ತನ ಪರಿವಾರದಿಂದ ಇಲ್ಲಿನ ಹೊರವಲಯದ ಬಿ.ಎಸ್. ಯಡಿಯೂರಪ್ಪ ಮಾರ್ಗದಲ್ಲಿರುವ ‘ಮಾಲಿನಿ ಸಿಟಿ’ ನಿವೇಶನದಲ್ಲಿ ಆಯೋಜಿಸಿರುವ 10ನೇ ಆವೃತ್ತಿಯ ಬೆಳಗಾವಿ ಅಂತರರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಭಾನುವಾರ ‘ಉಮಾಂಗ್’ ಯುವಜನೋತ್ಸವ ನಡೆಯಿತು. ಯುವಕ, ಯುವತಿಯರ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಲಾಯಿತು.
ಬೆಳಗಾವಿ, ಬೈಲಹೊಂಗಲ, ಬಾಗಲಕೋಟೆ, ಶಿರಸಿ, ವಿಜಯಪುರ, ಕಿತ್ತೂರು, ಹುಬ್ಬಳ್ಳಿ ಧಾರವಾಡ, ಗೋವ, ಕೊಲ್ಹಾಪುರದ 30 ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಭಾಷಣ, ನೃತ್ಯ, ಗಾಯನ, ಸಮೂಹ ನೃತ್ಯ, ಸಮೂಹ ಗಾಯನ ಮೊದಲಾದ ಸ್ಪರ್ಧೆಗಳಲ್ಲಿ ಪ್ರತಿಭೆ ಪ್ರದರ್ಶಿಸಿದರು. ಒಂದೆಡೆ ಆಸಕ್ತರು ಆಕರ್ಷಕ ಗಾಳಿಪಟಗಳನ್ನು ಹಾರಿಸಿ ಬಾನಿನಲ್ಲಿ ಚಿತ್ತಾರ ಮೂಡಿಸುತ್ತಿದ್ದರೆ, ಇನ್ನೊಂದೆಡೆ ಸ್ಪರ್ಧೆಗಳು ಕಾರ್ಯಕ್ರಮಕ್ಕೆ ರಂಗು ತುಂಬಿದವು. ಯುವಜನರ ಕಲರವ ಕಂಡುಬಂತು.
ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಲೆ.ಕರ್ನಲ್ ಸುನೀಲ್ ರೇವಣಕರ, ಡಾ.ಎ. ಪತಾಡೆ, ಹರ್ಷದ್ ಅಲಿ, ಚೇತನ್ ಪೈ ಹಾಗೂ ರೀನಾ ಸೌಂದಲಗೇಕರ ಭಾಗವಹಿಸಿದ್ದರು.
ಸಂಜೆ ನಡೆದ ಗಾಳಿಪಟ ಉತ್ಸವದ ಸಮಾರೋಪ ಸಮಾರಂಭದಲ್ಲಿ ಸಂಸದ ಶ್ರೀಮಂತ ಛತ್ರಪತಿ ಸಂಭಾಜಿ ರಾಜೇ ಭೋಸಲೆ ಮಾತನಾಡಿ, ‘ಇಂತಹ ಉತ್ಸವಗಳು ಮನಸ್ಸುಗಳನ್ನು ಬೆಸೆಯುತ್ತವೆ. ಯುವಜನರನ್ನು ಸಂಘಟಿಸುವಲ್ಲಿ ಅಭಯ ಪಾಟೀಲ ಅವರ ಕಾರ್ಯ ಶ್ಲಾಘನೀಯವಾಗಿದೆ’ ಎಂದರು.
ಶಾಸಕ ಅಭಯ ಪಾಟೀಲ, ಸಿಎ ಶಿವಕುಮಾರ ಪಾಟೀಲ, ಪರಿವರ್ತನ ಪರಿವಾರದ ಅಧ್ಯಕ್ಷ ಸಂತೋಷ ಪಾಟೀಲ ಭಾಗವಹಿಸಿದ್ದರು.
ಮಕ್ಕಳು ಕೃತಕ ಗೋಡೆ ಹತ್ತುವುದು ಸೇರಿದಂತೆ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಉತ್ಸವದ 3ನೇ ದಿನವಾದ ಸೋಮವಾರ (ಜ.20) ಯುವಜನೋತ್ಸವದ ಚಟುವಟಿಕೆಗಳು, ಮಕ್ಕಳಿಗಾಗಿ ಬಲೂನ್ ಉತ್ಸವ, ಮಕ್ಕಳಿಗೆ ಬಹುಮಾನ ವಿತರಣೆ, ಪ್ರತಿಭಾ ಪ್ರದರ್ಶನ ಮತ್ತು ಡಿಜೆ ಶೋ ಕಾರ್ಯಕ್ರಮಗಳು ನಡೆಯಲಿವೆ. ಮಕ್ಕಳಿಗೆ ಬಲೂನುಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.