ADVERTISEMENT

ಕಿತ್ತೂರು ಕೋಟೆ ಅಭಿವೃದ್ಧಿ: ಹಣ ಬಿಡುಗಡೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 11:39 IST
Last Updated 10 ಫೆಬ್ರುವರಿ 2020, 11:39 IST

ಬೆಳಗಾವಿ: ‘ಐತಿಹಾಸಿಕ ಕಿತ್ತೂರು ಕೋಟೆ ಅಭಿವೃದ್ಧಿಗಾಗಿ ಹಿಂದಿನ ಸಮ್ಮಿಶ್ರ ಸರ್ಕಾರ ಅನುಮೋದನೆ ನೀಡಿದ್ದ ₹ 146.30 ಕೋಟಿ ಕ್ರಿಯಾಯೋಜನೆಗೆ ತಕ್ಷಣ ಹಣ ಬಿಡುಗಡೆ ಮಾಡಿ, ಕಾಮಗಾರಿ ಆರಂಭಿಸಬೇಕು’ ಎಂದು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಲಕ್ಕನ್ನ ಸವಸುದ್ಧಿ ಅವರು ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಒತ್ತಾಯಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋಟೆಯ ಅಭಿವೃದ್ಧಿ, ಕೆರೆ ಅಭಿವೃದ್ಧಿ, ಸಂಗ್ರಹಾಲಯ ಅಭಿವೃದ್ಧಿ, ಉದ್ಯಾನ ಅಭಿವೃದ್ಧಿ ಸೇರಿದಂತೆ 33 ಕಾಮಗಾರಿಗಳನ್ನು ಒಳಗೊಂಡಂತೆ ಕೋಟೆ ಅಭಿವೃದ್ಧಿಗಾಗಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಹಣಕಾಸು ಇಲಾಖೆಯೂ ಒಪ್ಪಿಗೆ ನೀಡಿತ್ತು. ಹಣ ಬಿಡುಗಡೆ ಮಾಡುವುದು ಮಾತ್ರ ಬಾಕಿ ಉಳಿದಿತ್ತು. ಆಗ ಸರ್ಕಾರ ಉರುಳಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹಣ ಬಿಡುಗಡೆ ಮಾಡುವ ಕೆಲಸವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್‌ ಶೆಟ್ಟರ್‌ ಮಾಡಿಸಬೇಕಾಗಿದೆ’ ಎಂದರು.

‘ಬಜೆಟ್‌ನಲ್ಲಿ ಅನುಮೋದನೆ ಪಡೆಯುವುದಾಗಿ ಶೆಟ್ಟರ್‌ ಹೇಳಿದ್ದಾರೆ. ಹೀಗೆ ಮಾಡಬೇಕಾದರೆ ಪುನಃ ಕ್ರಿಯಾ ಯೋಜನೆ ಸಲ್ಲಿಸಬೇಕು, ಹಣಕಾಸು ಇಲಾಖೆಯ ಅನುಮೋದನೆ ಪಡೆಯಬೇಕು. ಇದಕ್ಕೆಲ್ಲ ಸಮಯ ವ್ಯರ್ಥವಾಗುತ್ತದೆ. ಇದನ್ನು ಬಿಟ್ಟು, ಈಗಾಗಲೇ ಅನುಮೋದನೆ ಸಿಕ್ಕಿರುವ ಯೋಜನೆಗೆ ಹಣ ಬಿಡುಗಡೆ ಮಾಡಲಿ’ ಎಂದು ಒತ್ತಾಯಿಸಿದರು.

ADVERTISEMENT

‘ಕಿತ್ತೂರಿನ ಇತಿಹಾಸವು ಇಡೀ ಜಿಲ್ಲೆ ಹೆಮ್ಮೆ ಪಡುವಂತಹದ್ದು, ಈ ವಿಷಯದಲ್ಲಿ ಜಿಲ್ಲೆಯ ಎಲ್ಲ ಮಠಾಧೀಶರು, ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹೇರಬೇಕು. ಕೋಟೆ ಅಭಿವೃದ್ಧಿಗೆ ಕೈ ಜೋಡಿಸಬೇಕು’ ಎಂದು ಹೇಳಿದರು.

‘ಕಿತ್ತೂರು ಕೋಟೆ ಅಭಿವೃದ್ಧಿ ಪಡಿಸಿದರೆ, ಪ್ರವಾಸೋದ್ಯಮಕ್ಕೆ ಪೋತ್ಸಾಹ ಸಿಗಲಿದೆ. ಇದರಿಂದ ರಾಜ್ಯ ಸರ್ಕಾರಕ್ಕೂ ಆದಾಯ ಬರಲಿದೆ. ಸ್ಥಳೀಯರಿಗೂ ಆರ್ಥಿಕವಾಗಿ ಸಹಾಯವಾಗಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.