ADVERTISEMENT

ಕೆಎಲ್‌ಇ ಆಸ್ಪತ್ರೆಯಲ್ಲಿ ಉಚಿತ ಇನ್ಸುಲಿನ್‌, ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 4:40 IST
Last Updated 27 ಸೆಪ್ಟೆಂಬರ್ 2022, 4:40 IST

ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಮಧುಮೇಹ ಕೇಂದ್ರದಿಂದ ಉಚಿತ ಇನ್ಸುಲಿನ್‌ ವಿತರಣಾ ಯೋಜನೆಯನ್ನು ಸೆ.28ರಂದು ಬೆಳಿಗ್ಗೆ 11ಕ್ಕೆ ಆರಂಭಿಸಲಿದೆ. ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಈ ಯೋಜನೆಯನ್ನು ಲೋಕಾರ್ಪಣೆ ಮಾಡುವರು.

ಮಧುಮೇಹ ಕೇಂದ್ರದಲ್ಲಿ ಈಗಾಲೇ ನೋಂದಾಯಿತ 446 ಮಧುಮೇಹ ಪೀಡಿತ ಮಕ್ಕಳು ಇನ್ಸುಲಿನ್ ಚುಚ್ಚುಮದ್ದಿನಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಉಚಿತ ಇನ್ಸುಲಿನ್‌ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ. ಸುಮಾರು 36 ಲಕ್ಷ ಮೌಲ್ಯದ ಇನ್ಸುಲಿನ್ ಅನ್ನು ಪೂರೈಸಲು ಕ್ರಮಕೈಗೊಳ್ಳಲಾಗಿದೆ. ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರ ಭಾಗದ ಮಕ್ಕಳಿಗೆ ಸಂಪೂರ್ಣವಾಗಿ ಉಚಿತ ಮೂರು ಸಲದ ಇನ್ಸುಲಿನ್ ನೀಡಲು ಯೋಜನೆ ರೂಪಿಸಲಾಗಿದೆ.

ಅಲ್ಲದೇ, ಉಚಿತ ರಕ್ತ ತಪಾಸಣೆ, 6 ತಿಂಗಳಿಗೊಮ್ಮೆ ಎಚ್‌ಬಿಎಒನ್‌ಸಿ ಉಚಿತ ತಪಾಸಣೆ ಮಾಡಲಾಗುತ್ತದೆ. ಆಸ್ಟ್ರೇಲಿಯಾದ ‘ಲೈಫ್‌ ಫಾರ್‌ ಎ ಚೈಲ್ಡ್’ ಹಾಗೂ ಕೆಎಲ್‌ಇ ಮಧುಮೇಹ ಕೇಂದ್ರದ ಆಶ್ರಯದಲ್ಲಿ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ.

ADVERTISEMENT

ಆಸ್ಪತ್ರೆಯ ಮಧುಮೇಹ ಕೇಂದ್ರವು ಕಳೆದ 21 ವರ್ಷಗಳಿಂದ ಮಧುಮೇಹ ಮಕ್ಕಳ ಆರೈಕೆ ಹಾಗೂ ಚಿಕಿತ್ಸೆಯನ್ನು ಉಚಿತವಾಗಿ ನೇರವೇರಿಸುತ್ತ ಬಂದಿದೆ. ಇದರ ಜಾಗೃತಿಗಾಗಿ ಶಿಕ್ಷಣ, ಆರೋಗ್ಯಯುತ ಜೀವನ ನಡೆಸಲು ಅವರಲ್ಲಿ ಧೈರ್ಯ ಕೂಡ ತುಂಬಲಾಗುತ್ತಿದೆ. ಮಧುಮೇಹ ಕೇಂದ್ರದ ಮುಖ್ಯಸ್ಥರಾದ ಡಾ.ಸುಜಾತಾ ಜಾಲಿ ಹಾಗೂ ಮುಖ್ಯ ಮಧುಮೇಹ ತಜ್ಞವೈದ್ಯ ಡಾ.ಎಂ.ವಿ. ಜಾಲಿ ಅವರ ತಂಡ ಈ ಕಾರ್ಯ ಮುಂದುವರಿಸಿದೆ.

ಮಧುಮೇಹ ಟೈಪ್-1ರಿಂದ ಬಳಲುತ್ತಿರುವ, ಹೆಸರು ನೋಂದಾಯಿಸಿದ ಮಕ್ಕಳಿಗೆ ಉಚಿತ ಇನ್ಸುಲಿನ್ ನೀಡಲಾಗುವುದು ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.