ADVERTISEMENT

ಜಿಲ್ಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ವೈಭವ: ತುಂಬಿದ ಇಸ್ಕಾನ್‌, ಕೃಷ್ಣ ಮಂದಿರಗಳು

ಮಕ್ಕಳಿಗೆ ಕೃಷ್ಣ– ರಾಧೆ ವೇಷ ತೊಡಿಸಿ ಪಾಲಕರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 16:22 IST
Last Updated 19 ಆಗಸ್ಟ್ 2022, 16:22 IST
ಬೆಳಗಾವಿಯ ಇಸ್ಕಾನ್‌ ದೇವಸ್ಥಾನದಲ್ಲಿ ಶುಕ್ರವಾರ ಕೃಷ್ಣಾ ಜನ್ಮಾಷ್ಟಮಿ ಅಂಗವಾಗಿ ವಿಶೇಷ ಅಲಂಕಾರ ಮಾಡಲಾಯಿತು / ಪ್ರಜಾವಾಣಿ ಚಿತ್ರ
ಬೆಳಗಾವಿಯ ಇಸ್ಕಾನ್‌ ದೇವಸ್ಥಾನದಲ್ಲಿ ಶುಕ್ರವಾರ ಕೃಷ್ಣಾ ಜನ್ಮಾಷ್ಟಮಿ ಅಂಗವಾಗಿ ವಿಶೇಷ ಅಲಂಕಾರ ಮಾಡಲಾಯಿತು / ಪ್ರಜಾವಾಣಿ ಚಿತ್ರ   

ಬೆಳಗಾವಿ:ನಗರವೂ ಸೇರಿದಂತೆಜಿಲ್ಲೆಯಎಲ್ಲೆಡೆ ಶುಕ್ರವಾರಶ್ರೀಕೃಷ್ಣಜನ್ಮಾಷ್ಠಮಿಯ ಸಡಗರಮನೆಮಾಡಿತು. ದೇವಸ್ಥಾನಗಳಲ್ಲಿ ಗುರುವಾರ ರಾತ್ರಿಯಿಂದಲೇ ಕೃಷ್ಣನ ಲೀಲೆಗಳ ಭಜನೆ, ಪ್ರವಚನಾದಿ ಕಾರ್ಯಕ್ರಮಗಳು ನೆರವೇರಿದವು. ಶುಕ್ರವಾರ ನಸುಕಿ
ನಿಂದಲೇ ಭಕ್ತರು ದೇವಸ್ಥಾನಗಳ ಮುಂದೆ ಸಾಲಿನಲ್ಲಿ ನಿಂತು ದರ್ಶನ ಪಡೆದರು.

ನಗರದ ಟಿಳಕವಾಡಿಯಲ್ಲಿರುವ ‘ಇಸ್ಕಾನ್‌’ ಮಂದಿರದಲ್ಲಿ ವೈಭವ ಕಂಡುಬಂತು. ಇಡೀ ದಿನ ಅಪಾರ ಸಂಖ್ಯೆಯ ಯುವತಿಯರು, ಮಹಿಳೆಯರು ಮಂದಿರಕ್ಕೆ ಬಂದು ಕೃಷ್ಣ– ರಾಧೆಯರ ಪೂಜೆ ನೆರವೇರಿಸಿದರು. ದಿನವಿಡೀ ಮಹಿಳಾ ಸಂಘಟನೆಗಳ ಸದಸ್ಯರು ಕೃಷ್ಣನಾಮ ಜಪ ಹಾಗೂ ಭಜನೆಗಳನ್ನು ಮಾಡಿದರು.

ಗುರುವಾರ ಪೇಟೆಯಲ್ಲಿರುವ ಕೃಷ್ಣ ಮಂದಿರ, ಶಹಾಪುರದಲ್ಲಿರುವ ಮುರಳೀಧರ ದೇವಸ್ಥಾನ ಸೇರದಂತೆ ನಗರದ ಬಹುಪಾಲು ಕಡೆ ಹಬ್ಬದ ಸಡಗರ ತುಂಬಿತು.

ADVERTISEMENT

ಇನ್ನೊಂದೆಡೆ ಬೆಣ್ಣೆಕಳ್ಳನ ಸ್ಮರಣೆಗಾಗಿ ಹಲವು ಯುವಕರ ತಂಡಗಳು ಬೆಣ್ಣೆಕುಡಿಗೆ ಒಡೆಯುವ ಸ್ಪರ್ಧೆ ನಡೆಸಿದರು. ಗವಳಿ ಗಲ್ಲಿ, ಮಂಗಳವಾರ ಪೇಟೆ, ಶುಕ್ರವಾರ ಪೇಟೆ, ಕ್ಯಾಂಪ್‌ ಪ್ರದೇಶ, ಎಂಎಲ್‌ಆರ್‌ಸಿ ಪ್ರದೇಶ, ದುರ್ಗಾಮಾತಾ ಗಲ್ಲಿ, ಶಾಹೂನಗರ, ರಿಸಾಲ್ದಾರ್‌ ಗಲ್ಲಿ, ಸದಾಶಿವನಗರ, ನೆಹರೂ ನಗರ, ಕಂಗ್ರಾಳಿ, ಕಾಕತಿ ಗ್ರಾಮಗಳೂ ಸೇರಿದಂತೆ ಹಲವು ಕಡೆ ಬೆಣ್ಣೆ ಕುಡಿಕೆ ಒಡೆಯುವ ಜಿದ್ದಾಜಿದ್ದಿನ ಆಟ ನಡೆಯಿತು.

ಇನ್ನೊಂದೆಡೆ ಬಹುಪಾಲು ಶಾಲೆ, ಅಂಗನವಾಡಿ, ನರ್ಸರಿಗಳಲ್ಲೂ ಮಕ್ಕಳಿಗೆ ಕೃಷ್ಣ– ರಾಧೆಯರ ವೇಷ ತೊಡಿಸಿ ಸಂಭ್ರಮಿಸಿದರು. ಬೆಣ್ಣೆ– ಜಿಲೇಬಿ ತಿನ್ನುವ ಸ್ಪರ್ಧೆ, ವೇಷ–ಭೂಷಣ ಸ್ಪರ್ಧೆಯಲ್ಲೂ ಚಿಣ್ಣರು ಸಂಭ್ರಮಿಸಿದರು.

ಪುಟ್ಟ ಮಕ್ಕಳಿರುವ ಪ್ರತಿಯೊಬ್ಬರ ಮನೆಗಳಲ್ಲೂ ಜನ್ಮಾಷ್ಠಮಿಯ ಸಂಭ್ರಮ ಕಂಡುಬಂತು. ತಮ್ಮ ಮುದ್ದಿನ ಮಕ್ಕಳಿಗೆ ಕೃಷ್ಣ, ರಾಧೆಯರ ವೇಷ ತೊಡಿಸಿದ ಜನ, ಸಾಮಾಜಿಕ ತಾಲತಾಣಗಳಲ್ಲಿ ಫೋಟೊ– ವಿಡಿಯೊಗಳನ್ನು ಹಾಕಿ ಖುಷಿಪಟ್ಟರು.

ಪೇಂಟಿಂಗ್‌ ಮೆರವಣಿಗೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿಯ ಭವ್ಯ ಮೆರವಣಿಗೆ ನಡೆಸಲಾಯಿತು.

ಕೋಟೆ ಕೆರೆಯಿಂದ ವಾದ್ಯ ಮೇಳಗಳೊಂದಿಗೆ ಆರಂಭವಾದ ಮೆರವಣಿಗೆ ಕುಮಾರ ಗಂಧರ್ವ ಕಲಾ ಮಂದಿರಕ್ಕೆ ಬಂದು ಸಮಾಪನಗೊಂಡಿತು. ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಮೆರವಣಿಗೆಗೆ ಚಾಲನೆ ನೀಡಿದರು. ಗಣೇಶಪುರ ಗಲ್ಲಿಯ ಕಾಳಿಕಾದೇವಿ ಭಜನಾ ಮಂಡಳದಿಂದ ಭಜನೆ ಹಾಗೂ ರಾಜಪ್ರಭು ಧೋತ್ರೆ ಹಾಗೂ ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ನಂತರ ಕುಮಾರ ಗಂಧರ್ವ ರಂಗಮಂದಿರದಲ್ಲಿ ನಡೆದ ಸಮಾರಂಭದಲ್ಲಿ ನಿವೃತ್ತ ಪ್ರಾಂಶುಪಾಲ ಬಸವರಾಜ ಹಮ್ಮಣ್ಣವರ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನಿತಾ ಪಾಟೀಲ ನಿರೂಪಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಮಂಜುಗೌಡ ಪಾಟೀಲ, ಜಿಲ್ಲಾ ಹಣಬರ ಯಾದವ ಸಂಘದ ಅಧ್ಯಕ್ಷರಾದ ಶೀತಲ ಮುಂಡೆ ಹಾಗೂ ಸದಸ್ಯರು, ಹಣಬರ ಸಮಾಜದ ಮುಖಂಡರು ಮತ್ತಿತರು ಇದ್ದರು.

ರಾಧೆ– ಕೃಷ್ಣ ವೇಷ ಸ್ಪರ್ಧೆ

ಖಾನಾಪುರ: ತಾಲ್ಲೂಕಿನ ಪಾರಿಶ್ವಾಡ ಗ್ರಾಮದ ಬಾಲಮುಕುಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ರಾಧಾ –ಕೃಷ್ಣ ವೇಷ ಸ್ಪರ್ಧೆ ಜರುಗಿತು.

ಶಾಲೆಯ ಆಡಳಿತ ಮಂಡಳಿಯ ಮುಖ್ಯಸ್ಥ ಡಾ.ಸುರೇಶ ಕುಲಕರ್ಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಾಲೆಯ ವಿವಿಧ ವಯೋಮಾನದ ಪುಟ್ಟ ಪುಟ್ಟ ಪುಟಾಣಿಗಳು ಕೃಷ್ಣ ಹಾಗೂ ರಾಧೆ ವೇಷಧಾರಿಯಾಗಿ ಗಮನ ಸೆಳೆದರು. ವೇಷಧಾರಿಗಳಿಗೆ ಬೆಣ್ಣೆಯ ಗಡಿಗೆಯನ್ನು ಒಡೆಯುವ ಸ್ಪರ್ಧೆ ಜರುಗಿತು.

ಕಾರ್ಯಕ್ರಮದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಪಾಲಕರು ಉಪಸ್ಥಿತರಿದ್ದರು.

ಶಾಂತಿನಕೇತನ ಶಾಲೆ: ಪಟ್ಟಣದ ಹೊರವಲಯದ ಶಾಂತಿನಿಕೇತನ ಪಬ್ಲಿಕ್ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಜರುಗಿದ ರಾಧಾ –ಕೃಷ್ಣರ ವೇಷಭೂಷಣ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ರಾಧಾ– ಕೃಷ್ಣರ ವೇಷ ಧರಿಸಿ ಗಮನ ಸೆಳೆದರು. ಪ್ರೌಢಶಾಲೆ ವಿದ್ಯಾರ್ಥಿಗಳು ಬೆಣ್ಣೆಯ ಗಡಿಗೆಯನ್ನು ಒಡೆದರು.

ಮುಖ್ಯಶಿಕ್ಷಕಿ ಸ್ವಾತಿಕಮಲ ಪಾಠಕ, ಪಿ.ಆರ್.ಒ ಮನೀಷಾ ಹಲಗೇಕರ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

ಮಡಿವಾಳೇಶ್ವರ

ರಾಧಾ ಕೃಷ್ಣರ ವೇಷದಲ್ಲಿ ಚಿಣ್ಣರು

ಸವದತ್ತಿ: ತಾಲ್ಲೂಕಿನ ಉಗರಗೋಳ ಗ್ರಾಮದ ಬಸವಜ್ಯೋತಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಗೋಕುಲಾಷ್ಟಮಿ ಅಂಗವಾಗಿ ಶಾಲಾ ಮಕ್ಕಳಿಂದ ಮಡಕೆ ಒಡೆಯುವ ಸ್ಪರ್ಧೆ ಹಾಗೂ ಸಾಂಸ್ಕೃತಿಕ ನೃತ್ಯ ಸ್ಪರ್ಧೆಗಳು ಜರುಗಿದವು.

ಹರೀಶ ಪೈ ಮಾತನಾಡಿ, ಧರ್ಮದ ರಕ್ಷಣೆಗೆ, ಅಧರ್ಮದ ನಾಶಕ್ಕೆ ಮರಳಿ ಅವತರಿಸುತ್ತೇನೆಂದು ಕೃಷ್ಣನು ಭಗವದ್ಗೀತೆಯಲ್ಲಿ ತಿಳಿಸಿದ್ದಾನೆ. ಅದರಂತೆ ಕಲಿಯುಗದಲ್ಲಿ ಪಾಪ ಕೃತ್ಯಗಳೇ ಹೆಚ್ಚುತ್ತಿವೆ. ಧರ್ಮದ ಪಾಲನೆಗೆ ಕೃಷ್ಣ ಮರಳಿ ಕಲ್ಕಿ ಅವತಾರದಲ್ಲಿ ಆಗಮಿಸಲಿದ್ದಾನೆಂಬ ನಂಬಿಕೆ ಇದೆ ಎಂದರು.

ಕೃಷ್ಣ ವೇಷಧಾರಿ ಮಕ್ಕಳೆಲ್ಲ ಬೆಣ್ಣೆ ತುಂಬಿದ ಮಡಕೆ ಒಡೆಯುವ ದೃಶ್ಯ ಗಮನ ಸೆಳೆಯಿತು. ಬಾಲ ರಾಧೆಯರಿಂದ ಕೃಷ್ಣ ಲೀಲೆಗಳ ಸಾಂಸ್ಕೃತಿಕ ನೃತ್ಯಗಳು ಜರುಗಿದವು.

ಈ ವೇಳೆ ಶಾಲಾ ಸಂಸ್ಥೆಯ ಅಧ್ಯಕ್ಷ ಡಿ.ಎಸ್.ಕೊಪ್ಪದ, ಮಾಜಿ ಸೈನಿಕ ಮಂಜುನಾಥ ಭೋವಿ, ಇಬ್ರಾಹಿಂ ಸುಲ್ತಾನವರ, ಮಂಜುನಾಥ ಪವಾರ, ಸಿದ್ದಪ್ಪ ಸಿದ್ದಕ್ಕನವರ, ಮಂಜುನಾಥ ಬಂಟನವರ, ಬಸಪ್ಪ ಸರಾಪದ, ಹಣಮಂತ ಕುಂಟೋಜಿ, ಯಲ್ಲಪ್ಪ ಪಡಸುಣಗಿ, ಶಂಕರಯ್ಯ ಮಠಪತಿ, ಅಪ್ಪು ಹೆಬಸೂರ ಹಾಗೂ ಶಾಲಾ ಸಿಬ್ಬಂದಿ ಇದ್ದರು.

ದೇವಳದಲ್ಲಿ ಸಂಭ್ರಮ

ಎಂ.ಕೆ.ಹುಬ್ಬಳ್ಳಿ: ಇಲ್ಲಿನ ಶ್ರೀಗುರು ಮಡಿವಾಳೇಶ್ವರ ದೇವಸ್ಥಾನದಲ್ಲಿ ಪಂಚಮುಖಿ ಜ್ಞಾನ ವಿಕಾಸ ಕೇಂದ್ರದಿಂದ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಿಸಲಾಯಿತು.

ಪಟ್ಟಣ ಪಂಚಾಯಿತಿ ವಾರ್ಡ್ ಸದಸ್ಯೆ ಲಕ್ಷ್ಮೀ ಮಲ್ಲಪ್ಪ ನಾಗನೂರ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಅಂಗನವಾಡಿ ಕಾರ್ಯಕರ್ತೆ ಶೋಭಾ ಪಾಟೀಲ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ವಿಜಯಲಕ್ಷ್ಮೀ ರಾಯನಾಳ, ಸೇವಾ ಪ್ರತಿನಿಧಿ ಶೃತಿ ಯಲಿಗಾರ, ಸಂಘದ ಸದಸ್ಯರು, ಸ್ಥಳೀಯ ನಿವಾಸಿಗಳು, ಮಕ್ಕಳು ಇದ್ದರು.

ಕೃಷ್ಣ-ರಾಧೆಯ ವೇಷಭೂಷಣ ತೊಟ್ಟಿದ್ದ ಮಕ್ಕಳ ತಂಡ ಗಮನ ಸೆಳೆಯಿತು. ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

*

ಕೃಷ್ಣನಾಗಿ ನಲಿದ ಮುಸ್ಲಿಂ ಬಾಲಕ

ಬೆಳಗಾವಿ: ಇಲ್ಲಿನ ಸದಾಶಿವ ನಗರದ ಮುಸ್ಲಿಂ ಕುಟುಂಬವೊಂದು ತಮ್ಮ ಮನೆಯ ಪುಟ್ಟ ಬಾಲಕನಿಗೆ ಶ್ರೀಕೃಷ್ಣನ ವೇಷ ತೊಡಿಸಿ ಸಂಭ್ರಮಿಸಿತು. ಪುಟಾಣಿ ಕೂಡ ತಲೆಗೆ ನವಿಲುಗರಿ ಕಟ್ಟಿಕೊಂಡು, ಕಾಲಿಗೆ ಗೆಜ್ಜೆ ಹಾಕಿ, ಕೊಳಲು ಹಿಡಿದುಕೊಂಡು ಸಂಭ್ರಮಿಸಿದ.

ಇಲ್ಲಿನ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಆಸಿಫ್‌ ಮೊಕಾಶಿ ಅವರ ನಾಲ್ಕು ವರ್ಷದ ಪುತ್ರ ಅದ್ನಾನ್‌ ಕೃಷ್ಣನ ವೇಷದಲ್ಲಿ ಖುಷಿಪಟ್ಟ ಪುಟಾಣಿ. ತಮ್ಮ ಅಜ್ಜ ದಸ್ತಗೀರ್‌ ಮೊಕಾಶಿ ಅವರೊಂದಿಗೆ ಇಡೀ ದಿನ ಕೃಷ್ಣನ ವೇಷದಲ್ಲೇ ಓಡಾಡಿದ ಬಾಲಕ ಗಮನ ಸೆಳೆದ. ಪುತ್ರನನ್ನು ಗೋಕುಲಾಷ್ಠಮಿಗೆ ಸಿದ್ಧಗೊಳಿಸಿದ ತಾಯಿ ಭಾವೈಕ್ಯದ ಸಂದೇಶ ಸಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.