ಅಥಣಿ: ನೆರೆಯ ಮಹಾರಾಷ್ಟ್ರದಲ್ಲಿ ವಿಪರೀತ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿ ನೀರಿನ ಹರಿವು ಹೆಚ್ಚಳವಾಗಿದೆ. ನದಿ ಪಾತ್ರದ ಗ್ರಾಮಗಳಾದ ಹುಲಗಬಾಳಿ ಗ್ರಾಮದ ಮಾಂಗವಸ್ತಿ, ನದಿ ಇಂಗಳಗಾವ, ಸಪ್ತಸಾಗರ, ತೀರ್ಥ ಮತ್ತು ಚಿಕ್ಕೂಡ ಗ್ರಾಮಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ, ಪ್ರವಾಹ ಪರಿಸ್ಥಿತಿ ಪರಿಶೀಲನೆ ನಡೆಸಿತು.
ನದಿ ಇಂಗಳಗಾವ, ಹುಲಗಬಾಳ, ಸಪ್ತಸಾಗರ, ತೀರ್ಥ ಗ್ರಾಮಗಳಲ್ಲಿ ಗ್ರಾಮಸ್ಥರ ಸಭೆಗಳನ್ನು ನಡೆಸಿದರು. ಮಳೆ ಇದೇ ರೀತಿ ಮುಂದುವರೆದು ನದಿಗೆ ಹೆಚ್ಚಿನ ನೀರು ಹರಿದುಬಂದರೆ ಜನಜಾನುವಾರುಗಳನ್ನು ಸ್ಥಳಾಂತರಿಸುವುದು ಅನಿವಾರ್ಯವಾಗಲಿದೆ. ಗ್ರಾಮಸ್ಥರು ಎಚ್ಚರಿಕೆ ವಹಿಸಬೇಕೆಂದು ಸಲಹೆ ನೀಡಿದರು.
ಕೃಷ್ಣಾ ನದಿಯಲ್ಲಿ ನೀರು ಈಗ ರಭಸವಾಗಿ ಹರಿಯುತ್ತಿದ್ದು, ಜನರು ಯಾವುದೇ ಕಾರಣಕ್ಕೂ ನದಿಗೆ ತೆರಳಬಾರದು. ಅಲ್ಲದೆ ತಮ್ಮ ದನ-ಕರುಗಳನ್ನು ನದಿಗೆ ತೆರಳದಂತೆ ನೋಡಿಕೊಳ್ಳಬೇಕು. ಮೊಸಳೆಗಳು ಬರುವ ಸಾಧ್ಯತೆ ಇರುವುದರಿಂದ ಎಚ್ಚರ ವಹಿಸಬೇಕು. ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅಳವಡಿಸಿರುವ ಪಂಪಸೆಟ್‌ಗಳನ್ನು ಹೊರತೆಗೆಯುವ ಸಾಹಸಗಳನ್ನು ಮಾಡಬಾರದು ಎಂದು ಗ್ರಾಮಸ್ಥರಿಗೆ ತಹಶೀಲ್ದಾರ್ ಸಿದರಾಯ ಬೋಸಗಿ ಸಲಹೆ ನೀಡಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ ಮಾತನಾಡಿ, ಅಗತ್ಯ ಬಿದ್ದರೆ 23 ಕಾಳಜಿ ಕೇಂದ್ರಗಳನ್ನು ಹಾಗೂ ಮೇವು ಬ್ಯಾಂಕುಗಳನ್ನು ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ನೀರಾವರಿ ಇಲಾಖೆಯ ಅಧಿಕಾರಿ ಪ್ರವೀಣ ಹುಣಸಿಕಟ್ಟಿ ಮಾತನಾಡಿ, ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ತಡೆಗಟ್ಟುವ ನಿಟ್ಟಿನಲ್ಲಿ ಆಲಮಟ್ಟಿ ಜಲಾಶಯದಿಂದ 2 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ನಡುಗಡ್ಡಿಯಾಗಿರುವ ಕೆಲವು ವಸತಿ ಪ್ರದೇಶಗಳ ರಸ್ತೆಯ ಮೇಲೆ ನೀರು ಆವರಿಸಿದ್ದು, ಗ್ರಾಮಸ್ಥರು ಎಚ್ಚರಿಕೆ ವಹಿಸಬೇಕೆಂದು ಹೇಳಿದರು.
ಶಾಶ್ವತ ಪುನರ್ವಸತಿಗೆ ಆಗ್ರಹ: ಹುಲಗಬಾಳಿ ಗ್ರಾಮದ ಮಾಂಗವಸತಿ ತೋಟದಲ್ಲಿ 40ಕ್ಕೂ ಅಧಿಕ ಕುಟುಂಬಗಳು ವಾಸವಾಗಿವೆ. ಪ್ರತಿ ವರ್ಷ ಇಲ್ಲಿ ಪ್ರವಾಹ ಬರುತ್ತದೆ. ನಮಗೆ ಶಾಶ್ವತ ಪುನರ್ವಸತಿ ಕಲ್ಪಿಸಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದರು.
ತಹಶೀಲ್ದಾರ್ ಸಿದರಾಯ ಬೋಸಗಿ ಮಾತನಾಡಿ, ನಿಮಗೆ ಶಾಶ್ವತ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದ ಹಂತದಲ್ಲಿ ಈಗಾಗಲೇ ಚಿಂತನೆ ನಡೆದಿದೆ ಎಂದು ಹೇಳಿದರು.
ಸಿಪಿಐ ಸಂತೋಷ ಹಳ್ಳೂರ, ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ, ಸ್ಥಳೀಯ ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.