ಚಿಕ್ಕೋಡಿ: ಉಪ ವಿಭಾಗ ವ್ಯಾಪ್ತಿಯಲ್ಲಿ ಪ್ರತಿ ವರ್ಷವೂ ಮಳೆಗಾಲದಲ್ಲಿ ಕೃಷ್ಣಾ ಹಾಗೂ ಉಪನದಿಗಳ ತೀರದಲ್ಲಿರುವ ಜನರಿಗೆ ಪ್ರವಾಹದ ಭೀತಿಯಿಂದ ಬಳಲುವಂತಾಗಿದೆ. ಕಳೆದ 2-3 ದಶಕಗಳಿಂದಲೂ ಇಂತಹದೊಂದು ಸಂದಿಗ್ಧ ಪರಿಸ್ಥಿತಿಗೆ ಶಾಶ್ವತ ಪರಿಹಾರ ಇಲ್ಲದೇ ನದಿ ತೀರದ ಜನರ ಬದುಕು ದುಸ್ತರವಾಗಿದೆ.
2005, 2019, 2021ರಲ್ಲಿ ಮಹಾ ಮಳೆಯಿಂದ ನದಿ ತೀರದ ಜನರು ಅನುಭವಿಸಿದ ಸಂಕಟ, ನೋವು, ಯಾತನೆ ಅಪಾರ. ಪ್ರಸಕ್ತ ವರ್ಷವೂ ಕೂಡ ಅಷ್ಟೇ, ಸೋಮವಾರ ತಾಲ್ಲೂಕಿನ ಕಲ್ಲೋಳ-ಯಡೂರ ಬ್ಯಾರೇಜ್ ಬಳಿಯಲ್ಲಿ ಕೃಷ್ಣಾ ನದಿಗೆ 74,951 ಕ್ಯೂಸೆಕ್ ಇದ್ದ ಹೊರ ಹರಿವು, ಮಂಗಳವಾರ 1,13,150 ಕ್ಯೂಸೆಕ್ ಗೆ ಏರಿತು. ಬುಧವಾರ 1,81,004 ಕ್ಯೂಸೆಕ್, ಗುರುವಾರ 2,26,707 ಕ್ಯೂಸೆಕ್, ಶುಕ್ರವಾರ 2,64,223 ಕ್ಯೂಸೆಕ್ ಏರಿಕೆಯಾಗಿತ್ತು.
ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶ ವ್ಯಾಪ್ತಿಯ ಕೊಯ್ನಾ, ನವಜಾ, ಮಹಾಬಳೇಶ್ವರ, ರಾಧಾನಗರಿ ಮುಂತಾದ ಕಡೆಗಳಲ್ಲಿ ಸುರಿಯುವ ಮಳೆಯಿಂದಾಗಿ ಕೃಷ್ಣಾ, ದೂಧಗಂಗಾ, ವೇದಗಂಗಾ ಹಾಗೂ ಪಂಚಗಂಗಾ ನದಿಗಳ ನೀರಿನ ಹರಿವಿನ ಪ್ರಮಾಣ ಶರವೇಗದಲ್ಲಿ ಹೆಚ್ಚಳವಾಗುತ್ತದೆ. ಹೀಗಾಗಿ ಕ್ಷಣ ಕ್ಷಣಕ್ಕೂ ಕೃಷ್ಣಾ ನದಿಯ ನೀರಿನ ಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿ ನದಿ ತೀರದ ಜನರಲ್ಲಿ ನಡುಕು ಹುಟ್ಟಿಸುವುದು ಸಾಮಾನ್ಯವಾಗಿದೆ.
ನದಿ ತೀರ ಪ್ರದೇಶದಲ್ಲಿ ಇರುವ ತಮ್ಮ ತಮ್ಮ ಜಮೀನಿನಲ್ಲಿಯೇ ಸಹಸ್ರಾರು ಜನರು ವಾಸವಿದ್ದು, ನದಿ ನೀರಿನ ಬಳಕೆ ಮಾಡಿಕೊಂಡು ಕೃಷಿ ಮಾಡುತ್ತಾರೆ. ಜೊತೆಗೆ ಎಮ್ಮೆ, ಹಸು, ಮೇಕೆ ಸಾಕಿ ಹೈನುಗಾರಿಕೆಯನ್ನು ಮಾಡಿಕೊಂಡು ಜೀವನ ಸಾಗಿಸುವವರಿಗೆ ಪ್ರತಿ ವರ್ಷ ಬರುವ ಪ್ರವಾಹ ಇಲ್ಲಿನ ಜನರ ಜಂಘಾಬಲವನ್ನೇ ಉಡುಗಿಸಿಬಿಡುತ್ತಿದೆ.
ಮಹಾ ಮಳೆಯ ಪ್ರವಾಹ ಭೀತಿಯಿಂದ ಗಂಟು ಮೂಟೆ ಕಟ್ಟಿಕೊಂಡು, ಜನ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳಿ ಜೀವ ಉಳಿಸಿಕೊಳ್ಳಲು ಹೆಣಗಾಡುವ ಸ್ಥಿತಿಗೆ ಕೊನೆಯೇ ಇಲ್ಲದಂತಾಗಿದೆ. ಪಂಪಸೆಟ್ ತೆರವುಗೊಳಿಸುವುದು, ಜಾನುವಾರುಗಳಿಗೆ ಮೇವು ಸಂಗ್ರಹಿಸಿಟ್ಟುಕೊಳ್ಳುವುದು, ಬೆಳೆ ರಕ್ಷಣೆ ಮಾಡಿಕೊಳ್ಳುವುದಕ್ಕೆ ಹರಸಾಹಸ ಪಡುವಂತಾಗಿದೆ.
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕೃಷ್ಣಾ ನದಿಯ ರಾಜಾಪೂರೆ ಬ್ಯಾರೇಜಿನಲ್ಲಿ 2.40 ಲಕ್ಷ ಕ್ಯೂಸೆಕ್ ಹೊರ ಹರಿವು ಇದ್ದರೆ ಎಚ್ಚರಿಕೆಯ ಮಟ್ಟ ಎಂತಲೂ, ಇದೇ ಬ್ಯಾರೇಜಿನಿಂದ 2.90 ಲಕ್ಷ ಕ್ಯೂಸೆಕ್ ಹೊರ ಹರಿವು ಇದ್ದರೆ ಅಪಾಯದ ಮಟ್ಟ ಎಂತಲೂ ಕರ್ನಾಟಕ–ಮಹಾರಾಷ್ಟ್ರ ಸರ್ಕಾರಗಳು ಗುರುತಿಸಿವೆ.
ಪ್ರತಿ ವರ್ಷ ನೀರಿನ ಮಟ್ಟ ಹಂತ ಹಂತವಾಗಿ ಏರಿಕೆಯಾಗುತ್ತಿತ್ತು. ಪ್ರಸ್ತುತ ವರ್ಷ ಒಂದೇ ವಾರದಲ್ಲಿ ಎರಡೂವರೆ ಲಕ್ಷ ಕ್ಯೂಸೆಕ್ ಗೂ ಹೆಚ್ಚು ನೀರು ಕೃಷ್ಣಾ ನದಿಗೆ ಹರಿದು ಬಂದಿದ್ದರಿಂದ ನದಿ ತೀರದ ಜನರಿಗೆ ಭಯ ಕಾಡುತ್ತಿದೆ. ಹೀಗೆ ಜೂನ್, ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಕೃಷ್ಣಾ ಹಾಗೂ ಉಪ ನದಿಗಳ ನೀರಿನ ಹರಿವಿನ ಪ್ರಮಾಣದಲ್ಲಿ ಏರಿಳಿತವಾಗುತ್ತಲೇ ಇರುತ್ತದೆ.
ಇದೀಗ ಕೃಷ್ಣಾ ಹಾಗೂ ಉಪ ನದಿಗಳ ನೀರಿನ ಹರಿವಿನ ಪ್ರಮಾಣ ಇಳಿಮುಖವಾಗುತ್ತಿರುವುದರಿಂದ ಕೃಷ್ಣಾ ಹಾಗೂ ಉಪನದಿಗಳ ತೀರ ಪ್ರದೇಶದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಮತ್ತೇ ಯಾವಾಗ ನದಿ ನೀರಿನಲ್ಲಿ ಏರಿಕೆಯಾಗುತ್ತದೆ ಎಂಬ ಭಯವಂತೂ ಮಳೆಗಾಲ ಮುಗಿಯುವರೆಗೂ ಕಾಡುತ್ತಲೇ ಇರುತ್ತದೆ.
ಪ್ರತಿ ವರ್ಷ ಮಳೆಗಾಲದಲ್ಲಿ ಪ್ರವಾಹ ಭೀತಿ ಬೇಸಿಗೆಯಲ್ಲಿ ನೀರಿನಲ್ಲದೇ ಫಜೀತಿಯನ್ನು ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ ಕೃಷ್ಣಾ ಹಾಗೂ ಉಪನದಿಗಳ ತೀರದಲ್ಲಿರುವ ಜನರು ಅನುಭವಿಸುವುದು ಸಾಮಾನ್ಯವಾಗಿದೆ.– ರಮೇಶ ಪಾಟೀಲ, ನದಿ ತೀರದ ನಿವಾಸಿ ಭೋಜ
ಪ್ರವಾಹ ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದ್ದು ಶಾಶ್ವತ ಪರಿಹಾರದ ಕಾರ್ಯ ಸರ್ಕಾರದ ಮಟ್ಟದಲ್ಲಿದೆ.– ಸುಭಾಷ ಸಂಪಗಾಂವಿ, ಉಪ ವಿಭಾಗಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.