ADVERTISEMENT

ಬೆಳಗಾವಿ: ವರದಾನ ನಗರದಲ್ಲಿ ಸ್ವಚ್ಛತೆ ಕೊರತೆ

ಖಾನಾಪುರ ತಾಲ್ಲೂಕು ಬೀಡಿಯಲ್ಲಿರುವ ಬಡಾವಣೆ

ಪ್ರಸನ್ನ ಕುಲಕರ್ಣಿ
Published 15 ಜೂನ್ 2021, 6:33 IST
Last Updated 15 ಜೂನ್ 2021, 6:33 IST
ಪ್ರವೇಶದ್ವಾರದ ಚರಂಡಿಯ ಮೇಲೆ ಗಿಡಗಳು ಬೆಳೆದಿರುವುದು.
ಪ್ರವೇಶದ್ವಾರದ ಚರಂಡಿಯ ಮೇಲೆ ಗಿಡಗಳು ಬೆಳೆದಿರುವುದು.   

ಖಾನಾಪುರ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಬೀಡಿ ಗ್ರಾಮದ ಹೊರವಲಯದಲ್ಲಿರುವ ವರದಾನ ನಗರ ಬಡಾವಣೆಯಲ್ಲಿ ಗ್ರಾಮ ಪಂಚಾಯ್ತಿಯವರು ಸ್ವಚ್ಛತೆಯತ್ತ ಗಮನಹರಿಸದಿರುವುದು ಸ್ಥಳೀಯರ ಪಾಲಿಗೆ ಅನಾನುಕೂಲತೆ ಸೃಷ್ಟಿಸಿದೆ.

ತಾಲ್ಲೂಕಿನ ದೊಡ್ಡ ಗ್ರಾಮವಾದ ಬೀಡಿ 8ಸಾವಿರ ಜನಸಂಖ್ಯೆ ಹೊಂದಿದೆ. 12ನೇ ಶತಮಾನದಲ್ಲಿ ಬಸವಣ್ಣನ ಸಮಕಾಲೀನರು ಸಂಗಮದಿಂದ ಉಳವಿಯತ್ತ ಹೊರಟಿದ್ದ ವೇಳೆ ಕೆಲಕಾಲ ಇಲ್ಲಿ ತಂಗಿದ್ದರಿಂದ ಶರಣರು ಬೀಡುಬಿಟ್ಟ ಊರು ಕಾಲಕ್ರಮೇಣ ಬೀಡಿ ಎಂಬ ಹೆಸರಿನಲ್ಲಿ ಪ್ರಸಿದ್ಧಿ ಪಡೆದಿದೆ. ಕಿತ್ತೂರು ರಾಣಿ ಚನ್ನಮ್ಮ ಆಡಳಿತದಲ್ಲಿ ಇದು ಪ್ರಸಿದ್ಧ ವ್ಯಾಪಾರಿ ತಾಣ ಮತ್ತು ಕಿತ್ತೂರು ಸಂಸ್ಥಾನದ ಪ್ರಮುಖ ತಾಲ್ಲೂಕು ಕೇಂದ್ರವಾಗಿಯೂ ಪ್ರಚಲಿತದಲ್ಲಿತ್ತು. ಆಗಿನ ಕಾಲದ ಬ್ರಿಟಿಷರ ವಿರುದ್ಧದ ಸ್ಥಳೀಯರ ಹೋರಾಟದಲ್ಲಿ ಇಲ್ಲಿದ್ದ ನಾಡಕಚೇರಿಯನ್ನು ಸಂಗೊಳ್ಳಿ ರಾಯಣ್ಣ ಹಾಗೂ ಆತನ ಸಹಚರರು ಸುಟ್ಟು ಹಾಕುವ ಮೂಲಕ ಸ್ವಾತಂತ್ರ ಹೋರಾಟಕ್ಕೆ ಕಹಳೆ ಮೊಳಗಿಸಿ ಕಿಚ್ಚು ಹತ್ತಿಸಿದ್ದರು. ಹೀಗಾಗಿ ಬೀಡಿ ಗ್ರಾಮ ಐತಿಹಾಸಿಕ ಹಿನ್ನೆಲೆಯನ್ನೂ ಹೊಂದಿದೆ.

ಗ್ರಾಮದ ಮೂಲಕ ಹಾದು ಹೋಗುವ ಬೆಳಗಾವಿ–ತಾಳಗುಪ್ಪ ರಾಜ್ಯ ಹೆದ್ದಾರಿ ಪಕ್ಕದಲ್ಲಿ ವರದಾನ ನಗರ ಸ್ಥಾಪಿತಗೊಂಡಿದೆ. ಈ ಬಡಾವಣೆಯಲ್ಲಿ 50ಕ್ಕೂ ಹೆಚ್ಚು ಮನೆಗಳಿವೆ. ನೌಕರರು, ನಿವೃತ್ತ ಸೈನಿಕರು ಮತ್ತು ಶಿಕ್ಷಕರು ವಾಸಿಸುತ್ತಿರುವ ಈ ಬಡಾವಣೆಯ ಜನಸಂಖ್ಯೆ 300. ಬಡಾವಣೆಯಲ್ಲಿ ಸಿ.ಸಿ. ರಸ್ತೆ ಮತ್ತು ಚರಂಡಿ ಇದೆ. ಬೀದಿದೀಪಗಳಿವೆ. ಸಮರ್ಪಕ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಹಲವು ವಾರಗಳಿಂದ ಇಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳದ ಕಾರಣ ಬಡಾವಣೆಯ ಚರಂಡಿಗಳಲ್ಲಿ ಹೂಳು, ತ್ಯಾಜ್ಯ ತುಂಬಿದೆ.

ADVERTISEMENT

ನಿರ್ವಹಣೆ ಕೊರತೆಯಿಂದಾಗಿ ಚರಂಡಿಯ ಸುತ್ತಮುತ್ತ ಕಳೆಗಿಡಗಳು ಬೆಳೆದಿವೆ. ಮಳೆಗಾಲದ ಆರಂಭವಾದ್ದರಿಂದ ಇಲ್ಲಿನ ಜನರಿಗೆ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದೆ. ಈ ವಿಷಯವನ್ನು ಹಲವು ಬಾರಿ ಗ್ರಾಮ ಪಂಚಾಯ್ತಿಯ ಗಮನಕ್ಕೆ ತಂದರೂ ಬಡಾವಣೆಯ ಸ್ವಚ್ಛತೆಯ ಬಗ್ಗೆ ನಿರ್ಲಕ್ಷ ವಹಿಸಲಾಗಿದೆ ಎನ್ನುವುದು ಬಡಾವಣೆಯ ನಿವಾಸಿಗಳ ಆರೋಪವಾಗಿದೆ.

‘ವರದಾನ ನಗರಕ್ಕೆ ಬೀಡಿ ಗ್ರಾಮ ಪಂಚಾಯ್ತಿ ವತಿಯಿಂದ ಎಲ್ಲ ಸೌಕರ್ಯಗಳನ್ನು ಒದಗಿಸಲಾಗಿದೆ. ಮಳೆಗಾಲ ಆರಂಭವಾಗಲಿರುವ ಕಾರಣ ಚರಂಡಿ ಹೂಳೆತ್ತಿ ಸುತ್ತಮುತ್ತ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಿದರೆ ಅನುಕೂಲವಾಗಲಿದೆ’ ಎಂದು ನಿವಾಸಿ ಸುಜಾತಾ ಕುರಗುಂದ ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.