ADVERTISEMENT

ರೆಮ್‌ಡಿಸಿವರ್ ಹಂಚಿಕೆಯಲ್ಲಿ ತಾರತಮ್ಯ: ಲಕ್ಷ್ಮಿ ಹೆಬ್ಬಾಳಕರ ಆರೋಪ

​ಪ್ರಜಾವಾಣಿ ವಾರ್ತೆ
Published 8 ಮೇ 2021, 12:13 IST
Last Updated 8 ಮೇ 2021, 12:13 IST
ಲಕ್ಷ್ಮಿ ಹೆಬ್ಬಾಳಕರ
ಲಕ್ಷ್ಮಿ ಹೆಬ್ಬಾಳಕರ   

ಬೆಳಗಾವಿ: ‘ಕೋವಿಡ್ ಸೋಂಕಿತರ ಚಿಕಿತ್ಸೆಗೆ ಬಳಸಲಾಗುವ ರೆಮ್‌ಡಿಸಿವರ್ ಚುಚ್ಚುಮದ್ದು ಹಂಚಿಕೆಯಲ್ಲಿ ಜಿಲ್ಲೆಗೆ ಭಾರಿ ತಾರತಮ್ಯ ಮಾಡಲಾಗುತ್ತಿದೆ’ ಎಂದು ಕೆಪಿಸಿಸಿ ವಕ್ತಾರರೂ ಆಗಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ದೂರಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಶುಕ್ರವಾರ ರಾಜ್ಯಕ್ಕೆ 40ಸಾವಿರ ರೆಮ್‌ಡಿಸಿವಿರ್‌ ಹಂಚಿಕೆಯಾಗಿದೆ. ಆದರೆ, ಜಿಲ್ಲೆಗೆ ಕಳೆದ 3 ದಿನಕ್ಕೆ ಕೇವಲ 400 ನೀಡಲಾಗಿದೆ. ಜಿಲ್ಲೆಯಲ್ಲಿ ಈಗ ಬರುತ್ತಿರುವ ಕೋವಿಡ್ ಪಾಸಿಟಿವ್ ಪ್ರಕರಣದ ಪ್ರಮಾಣ ನೋಡಿದರೆ ದಿನಕ್ಕೆ ಕನಿಷ್ಠ 2,700 ರೆಮ್‌ಡಿಸಿವಿರ್‌ ಬೇಕಾಗುತ್ತದೆ. ಇದಕ್ಕೆ ತಕ್ಕಂತೆ ಪೂರೈಕೆ ಆಗುತ್ತಿಲ್ಲದಿರುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಜಿಲ್ಲೆಯಲ್ಲಿ ಇತ್ತೀಚೆಗೆ ನಿತ್ಯ ಸರಾಸರಿ 900 ಕೋವಿಡ್ ಪ್ರಕರಣಗಳು ದೃಢಪಡುತ್ತಿವೆ. ಇದರಲ್ಲಿ ಅರ್ಧದಷ್ಟು ಜನರಿಗೆ ರೆಮ್‌ಡಿಸಿವಿರ್‌ ಅಗತ್ಯವೆಂದು ಪರಿಗಣಿಸಿದರೂ 450 ಜನರಿಗೆ ತಲಾ 6ರಂತೆ ಬೇಕಾಗುತ್ತದೆ. ಚುಚ್ಚುಮದ್ದು ಸಿಗದೆ ಜನರು ಸಾಯುತ್ತಿದ್ದಾರೆ. ಬೆಳಗಾವಿಗೆ ಬೇರೆ ಜಿಲ್ಲೆಗಳಿಗಿಂತ ಹೆಚ್ಚು ಪೂರೈಸುವ ಬದಲಿಗೆ ಕಡಿಮೆ ಕೊಡಲಾಗುತ್ತಿದೆ. ಈ ತಾರತಮ್ಯವನ್ನು ಕೂಡಲೇ ಸರಿಪಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.