ADVERTISEMENT

ಕುಸಮಳಿ ಬಳಿಯ ಮಲಪ್ರಭಾ ನದಿಯ ಸೇತುವೆ ಬಳಿ ಭೂಕುಸಿತ

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 14:37 IST
Last Updated 9 ಜೂನ್ 2025, 14:37 IST
ಖಾನಾಪುರ ತಾಲ್ಲೂಕಿನ ಕುಸಮಳಿ ಬಳಿ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ತಾತ್ಕಾಲಿಕ ಸೇತುವೆಯ ಬಳಿ ನೀರಿನ ಹರಿವು ಹೆಚ್ಚಿದ ಕಾರಣ ಈ ಸೇತುವೆಯ ಬಳಿಯ ರಸ್ತೆಯ ಮೇಲೆ ಭೂಕುಸಿತ ಉಂಟಾಗಿದೆ.
ಖಾನಾಪುರ ತಾಲ್ಲೂಕಿನ ಕುಸಮಳಿ ಬಳಿ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ತಾತ್ಕಾಲಿಕ ಸೇತುವೆಯ ಬಳಿ ನೀರಿನ ಹರಿವು ಹೆಚ್ಚಿದ ಕಾರಣ ಈ ಸೇತುವೆಯ ಬಳಿಯ ರಸ್ತೆಯ ಮೇಲೆ ಭೂಕುಸಿತ ಉಂಟಾಗಿದೆ.   

ಖಾನಾಪುರ: ತಾಲ್ಲೂಕಿನ ಕುಸಮಳಿ ಬಳಿ ಮಲಪ್ರಭಾ ನದಿಗೆ ನಿರ್ಮಿಸಲಾದ ತಾತ್ಕಾಲಿಕ ಸೇತುವೆಯ ಮೇಲಿನ ರಸ್ತೆಯಲ್ಲಿ ಭಾನುವಾರ ಭೂಕುಸಿತ ಉಂಟಾದ ಹಿನ್ನೆಲೆಯಲ್ಲಿ ಭಾನುವಾರ ಸಂಜೆಯಿಂದ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ತಡೆಹಿಡಿಯಲಾಗಿದೆ.

ಪರಿಣಾಮ ಬೆಳಗಾವಿ-ಚೋರ್ಲಾ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಬೈಲೂರು ಕ್ರಾಸ್-ಬೈಲೂರು-ಹಬ್ಬನಹಟ್ಟಿ-ಜಾಂಬೋಟಿ ಮೂಲಕ ಪರ್ಯಾಯ ಮಾರ್ಗ ಬಳಸಿ ಸಾಗುವಂತೆ ಅನುವು ಮಾಡಿಕೊಡಲಾಗಿದೆ.

ಬೆಳಗಾವಿಯಿಂದ ಗೋವಾ ಕಡೆ ಸಾಗುವ ವಾಹನಗಳು ಖಾನಾಪುರ-ರಾಮನಗರ-ಅನಮೋಡ ಮಾರ್ಗವಾಗಿ ಸಾಗುವಂತೆ ಸೂಚಿಸಲಾಗಿದೆ ಎಂದು ತಾಲ್ಲೂಕು ಆಡಳಿತದ ಮೂಲಗಳು ತಿಳಿಸಿವೆ.

ADVERTISEMENT

ಕುಸಮಳಿ ಬಳಿ ಮಲಪ್ರಭಾ ನದಿಗೆ ಈ ಮೊದಲು ಇದ್ದ ಸೇತುವೆ ಶಿಥಿಲಗೊಂಡಿದ್ದ ಹಿನ್ನೆಲೆಯಲ್ಲಿ ಈಚೆಗೆ ಲೋಕೋಪಯೋಗಿ ಇಲಾಖೆ ಅದನ್ನು ತೆರವುಗೊಳಿಸಿತ್ತು. ಅದೇ ಸ್ಥಳದಲ್ಲಿ ಹೊಸ ಸೇತುವೆ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಈ ಕಾಮಗಾರಿ ಮುಕ್ತಾಯದ ಹಂತದಲ್ಲಿರುವ ಕಾರಣ ಹೊಸ ಸೇತುವೆ ಪಕ್ಕದಲ್ಲಿ ತಾತ್ಕಾಲಿಕವಾಗಿ ನದಿಗೆ ಪೈಪುಗಳನ್ನು ಅಳವಡಿಸಿ ರಸ್ತೆ ನಿರ್ಮಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.

ಕಳೆದ ನಾಲ್ಕು ತಿಂಗಳಿನಿಂದ ಇದೇ ಸೇತುವೆಯ ಮೂಲಕ ವಾಹನಗಳ ಸಂಚಾರ ಸಾಗಿದೆ. ಕಳೆದ ಮೇ.25ರಂದು ಜಾಂಬೋಟಿ ಭಾಗದಲ್ಲಿ ಮಳೆಯಾದ ಕಾರಣ ಮಲಪ್ರಭಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದು ಸೇತುವೆಯ ಪಕ್ಕದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ಈ ಮಾರ್ಗದಲ್ಲಿ ವಾಹನಗಳ ಸಂಚಾರ ಸ್ಥಗಿತಗೊಳಿಸಿ ಲಘು ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು.

ತಾಲ್ಲೂಕಿನ ಅಮಟೆ ಮತ್ತು ದೇವಾಚಿಹಟ್ಟಿ ಬಳಿಯ ಮಲಪ್ರಭಾ ನದಿಯ ಬಂದಾರ್‌ಗಳಿಗೆ ಬೇಸಿಗೆಯಲ್ಲಿ ಅಳವಡಿಸಿದ್ದ ಗೇಟ್‌ಗಳನ್ನು ಭಾನುವಾರ ಮುಂಜಾನೆ ತೆರವುಗೊಳಿಸಿದ್ದರಿಂದ ನದಿಯಲ್ಲಿ ನೀರು ರಭಸದಿಂದ ಹರಿಯಲಾರಂಭಿಸಿ ಮಧ್ಯಾಹ್ನದ ಹೊತ್ತಿಗೆ ನದಿಯ ಮೂಲಕ ಹರಿದುಬಂದ ನೀರು ಕುಸಮಳಿ ಸೇತುವೆ ತಲುಪಿದ್ದರಿಂದ ತಾತ್ಕಾಲಿಕ ರಸ್ತೆಯಲ್ಲಿ ಭೂಕುಸಿತ ಉಂಟಾಯಿತು.

ಹೀಗಾಗಿ ಭಾನುವಾರ ಸಂಜೆಯಿಂದ ಈ ಮಾರ್ಗದಲ್ಲಿ ಎಲ್ಲ ರೀತಿಯ ವಾಹನಗಳು ಸಾಗುವುದನ್ನು ತಡೆಹಿಡಿಯಲಾಗಿದೆ. ತಾತ್ಕಾಲಿಕ ರಸ್ತೆ ಪಕ್ಕದಲ್ಲಿಯೇ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಹೀಗಾಗಿ ಈ ಮಾರ್ಗದಲ್ಲಿ ವಾಹನಗಳು ಸಂಚರಿಸಿದರೆ ಅಪಾಯ ಉಂಟಾಗುವ ಸಂಭವ ಇರುವ ಕಾರಣ ಮುನ್ನೆಚ್ಚರಿಕೆ ವಹಿಸಲಾಗಿದೆ. ಸೇತುವೆ ಬಳಿ ಬ್ಯಾರಿಕೇಡ್ ಅಳವಡಿಸಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.