ADVERTISEMENT

ಲ್ಯಾಪ್‌ಟಾಪ್‌ಗಳ ಖರೀದಿಯಲ್ಲಿ ಹಣ ಉಳಿತಾಯ: ಸವದಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 13:35 IST
Last Updated 8 ಮಾರ್ಚ್ 2020, 13:35 IST
ಅಥಣಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಲ್ಯಾಪ್‌ಟಾಪ್‌ಗಳನ್ನು ವಿತರಿಸಿದರು
ಅಥಣಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಲ್ಯಾಪ್‌ಟಾಪ್‌ಗಳನ್ನು ವಿತರಿಸಿದರು   

ಅಥಣಿ: ‘ವಿದ್ಯಾರ್ಥಿಗಳಿಗೆ ವಿತರಿಸುತ್ತಿರುವ ಲ್ಯಾಪ್‌ಟಾಪ್‌ಗಳ ಖರೀದಿಯಲ್ಲಿ ನಮ್ಮ ಸರ್ಕಾರ ಬಹಳಷ್ಟು ಹಣ ಉಳಿಸಿದೆ’ ಎಂದು ಉ‍ಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.

ಇಲ್ಲಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್‌ಗಳನ್ನು ವಿತರಿಸಿ ಅವರು ಮಾತನಾಡಿದರು.

‘ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರವಿದ್ದಾಗ ಲ್ಯಾಪ್‌ಟಾಪ್‌ ಒಂದಕ್ಕೆ ₹23ಸಾವಿರದಿಂದ ₹24ಸಾವಿರ ನೀಡಲಾಗಿತ್ತು. ನಮ್ಮ ಸರ್ಕಾರ ಅದೇ ಕಂಪನಿಯ ಹಾಗೂ ಅಷ್ಟೇ ಸಾಮರ್ಥ್ಯದ ಲ್ಯಾಪ್‌ಟಾಪನ್ನು ₹ 14ಸಾವಿರಕ್ಕೆ ಖರೀದಿಸಿದೆ. ಇದರಿಂದ ಬಹಳ ಹಣ ಉಳಿದಿದೆ. ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ನೀಡಲಾದ ಈ ಸೌಲಭ್ಯವನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.

ADVERTISEMENT

‘ಸರ್ಕಾರಿ ಶಾಲೆಯಲ್ಲಿ ಕಲಿತವರಲ್ಲಿ ಸಾಮಾನ್ಯ ಜ್ಞಾನ ಇರುತ್ತದೆ. ಹೀಗಾಗಿ ಅವರು ಎಂತಹ ಕಷ್ಟವನ್ನೂ ಎದುರಿಸುತ್ತಾರೆ. ಖಾಸಗಿ ಶಾಲೆಯಲ್ಲಿ ಓದಿನತ್ತ ಮಾತ್ರವೇ ಗಮನಹರಿಸುತ್ತಾರೆ. ಇನ್ನಿತರ ಚಟುವಟಿಕೆಗಳ ಬಗ್ಗೆ ಆದ್ಯತೆ ಕೊಡುವುದಿಲ್ಲ. ಹೀಗಾಗಿ, ಅವರು ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಕಳೆದುಕೊಳ್ಳುತ್ತಾರೆ’ ಎಂದು ವಿಶ್ಲೇಷಿಸಿದರು.

‘ಸರ್ಕಾರಿ ಶಾಲೆಯಲ್ಲಿ ಕಲಿತವರು ದೊಡ್ಡ ಕೆಲಸದಲ್ಲಿರುತ್ತಾರೆ. ಖಾಸಗಿ ಅಥವಾ ಇಂಗ್ಲಿಷ್‌ ಮಾಧ್ಯಮದಲ್ಲಿ ಓದಿದವರು ಸರ್ಕಾರಿ ಶಾಲೆಯಲ್ಲಿ ಓದಿದವರ ಕೈಕೆಳಗೆ ಕೆಲಸ ಮಾಡುತ್ತಾರೆ. ಸರ್ಕಾರಿ ಶಾಲೆಯಲ್ಲಿ ಕಲಿತ ನಾನು ರಾಜ್ಯದ ಉಪ ಮುಖ್ಯಮಂತ್ರಿಯಾಗಿದ್ದೇನೆ’ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕವಿತಾ ನಾಯಿಕ, ಇಒ ರವಿ ಬಂಗಾರೆಪ್ಪನವರ, ಡಿವೈಎಸ್ಪಿ ಎಸ್.ಗೀರಿಶ, ಸಿಪಿಐ ಶಂಕರಗೌಡ ಬಸನಗೌಡರ, ಪ್ರಾಂಶುಪಾಲ ಡಿ.ವೈ. ಕಾಂಬಳೆ ಇದ್ದರು.

ಯಶವಂತ ಎಂ. ಸ್ವಾಗತಿಸಿದರು. ಡಾ.ರಾಮಣ್ಣ ದೊಡ್ಡನಿಂಗಪ್ಪಗೋಳ ನಿರೂಪಿಸಿದರು. ಪ್ರಭಾಕರ ಖ್ಯಾಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.