ಬೈಲಹೊಂಗಲ: ‘ರಾಜ್ಯ ಸರ್ಕಾರ ಪುರಸಭೆ ವ್ಯಾಪ್ತಿಯಲ್ಲಿನ ಅನಧಿಕೃತ ಸ್ವತ್ತುಗಳಿಗೆ ಖಾತಾ ನೀಡುವ ಸಂಬಂಧ ಕಾಯ್ದೆ ಮತ್ತು ನಿಯಮಗಳಿಗೆ ತಿದ್ದುಪಡಿ ತರುತ್ತಿದೆ. ಇದರಿಂದ ಅನಧಿಕೃತ ಸ್ವತ್ತುಗಳ (ಬಿ–ಖಾತಾ) ಮಾಲೀಕರು ತಮ್ಮ ಸ್ವತ್ತಿನ ಕಂದಾಯವನ್ನು ಪಾವತಿಸಿ ಇ–ಖಾತಾ ಪಡೆಯಬಹುದಾಗಿದೆ’ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಪಟ್ಟಣದ ಪುರಸಭೆಯಲ್ಲಿ ಇ–ಖಾತಾ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಪಟ್ಟಣದ ವ್ಯಾಪ್ತಿಯಲ್ಲಿ ನಿವೇಶನ, ಮನೆಯ ಆಸ್ತಿಗಳನ್ನು ಹೊಂದಿರುವವರು ದಾಖಲೆ ಸಮೇತ ಪುರಸಭೆ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಿದರೆ ಕೂಡಲೇ ಇ–ಖಾತಾ ಮಾಡಿಕೊಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದನ್ನು ಜನರು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.
‘ಮೂರು ತಿಂಗಳ ಕಾಲ ಖಾತೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಖಾತೆ ಮಾಡಿಸಿಕೊಳ್ಳಲು ಯಾವುದೇ ಮಧ್ಯವರ್ತಿಗಳನ್ನು ನಂಬಬೇಡಿ ನಂಬಿದಲ್ಲಿ ಮೋಸ ಹೋಗುತ್ತೀರಿ. ನೇರವಾಗಿ ಸಾರ್ವಜನಿಕರೇ ಪುರಸಭೆ ಕಚೇರಿಗೆ ತೆರಳಿ ದಾಖಲೆಗಳನ್ನು ಸಲ್ಲಿಸಿ ಇ–ಖಾತಾ ಪಡೆದುಕೊಳ್ಳಬೇಕು’ ಎಂದರು.
ಪುರಸಭೆ ಮುಖ್ಯಾಧಿಕಾರಿ ವೀರೇಶ ಹಸಬಿ ಮಾತನಾಡಿ, ‘ಸ್ವತ್ತಿನ ಮಾಲೀಕರು ಪುರಸಭೆಗೆ ಭೇಟಿ ನೀಡಿ, ಸ್ವತ್ತಿನ ಮಾಲೀಕತ್ವದ ದಾಖಲೆಗಳಾದ ನೋಂದಾಯಿತ ಪತ್ರಗಳು, ಚಾಲ್ತಿ ಸಾಲಿನವರೆಗೆ ಕಂದಾಯ ಪಾವತಿ ರಶೀದಿ, ಋಣಭಾರ ಪ್ರಮಾಣ ಪತ್ರ ಹಾಗೂ ಮಾಲೀಕರ ಪೋಟೊ, ಆಧಾರ್ ಕಾರ್ಡ್ ಸಲ್ಲಿಸಿ ಇ–ಖಾತಾ ಪಡೆಯಬಹುದಾಗಿದೆ’ ಎಂದರು.
ಪುರಸಭೆ ಅಧ್ಯಕ್ಷ ವಿಜಯ ಬೋಳನ್ನವರ, ಉಪಾಧ್ಯಕ್ಷ ಬುಡ್ದೆಸಾಬ ಶಿರಸಂಗಿ, ಸದಸ್ಯರಾದ ಬಾಬು ಕುಡಸೋಮಣ್ಣವರ, ಬಸವರಾಜ ಜನ್ಮಟ್ಟಿ, ಜಗದೀಶ ಜಂಬಗಿ, ಸುಧೀರ ವಾಲಿ, ಶಿವಾನಂದ ಕೋಲಕಾರ, ಅರ್ಜುನ ಕಲಕುಟಕರ, ಶಿವಬಸ್ಸು ಕುಡಸೋಮನ್ನವರ, ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಹಿರೇಮಠ, ಅಂಜನಾ ಬೊಂಗಾಳೆ, ಶ್ರೀದೇವಿ ದೇವಲಾಪುರ, ಅಮೀರಬಿ ಬಾಗವಾನ, ಕಚೇರಿ ವ್ಯವಸ್ಥಾಪಕ ಎಂ.ಐ. ಕುಟ್ರಿ, ಕಂದಾಯ ಅಧಿಕಾರಿ ಎಸ್.ಆರ್. ಹಳ್ಳೂರ, ಕಂದಾಯ ನಿರೀಕ್ಷಕ ಬಿ.ಕೆ. ಮಠದ, ಎಂಜಿನಿಯರ್ ಜಿ.ಬಿ. ಮಹಾಳಂಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.