ADVERTISEMENT

ಚಿಕ್ಕೋಡಿಯಲ್ಲಿ ಕೆಎಲ್‌ಇ ಸಂಸ್ಥೆಯಿಂದ ಕಾಲೇಜು: ಕಾನೂನು ಶಿಕ್ಷಣಕ್ಕೆ ಆಸರೆ

ಸುಧಾಕರ ಎಸ್.ತಳವಾರ, ಬೆಂಗಳೂರು
Published 24 ಜೂನ್ 2021, 12:54 IST
Last Updated 24 ಜೂನ್ 2021, 12:54 IST
ಚಿಕ್ಕೋಡಿಯಲ್ಲಿರುವ ಕೆಎಲ್ಇ ಕಾನೂನು ಕಾಲೇಜು ಆವರಣ
ಚಿಕ್ಕೋಡಿಯಲ್ಲಿರುವ ಕೆಎಲ್ಇ ಕಾನೂನು ಕಾಲೇಜು ಆವರಣ   

ಚಿಕ್ಕೋಡಿ (ಬೆಳಗಾವಿ): ಕೆಎಲ್ಇ ಸಂಸ್ಥೆಯು ಎರಡು ದಶಕಗಳ ಹಿಂದೆ ಪಟ್ಟಣದಲ್ಲಿ ಆರಂಭಿಸಿರುವ ಕಾನೂನು ಕಾಲೇಜು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಇಲ್ಲಿ ಪದವಿ ಪಡೆದ ಹಲವು ವಿದ್ಯಾರ್ಥಿಗಳು ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ.

ಚಿಕ್ಕೋಡಿ ಮತ್ತು ಸುತ್ತಮುತ್ತಲಿನ ತಾಲ್ಲೂಕುಗಳ ವಿದ್ಯಾರ್ಥಿಗಳು ಕಾನೂನು ಪದವಿ ಪಡೆಯಲು ದೂರದ ಧಾರವಾಡ, ಬೆಳಗಾವಿಯಂತಹ ನಗರಗಳಿಗೆ ಹೋಗುವುದು ಅನಿವಾರ್ಯವಾಗಿತ್ತು. ಇದರಿಂದ ಅನೇಕ ಮಧ್ಯಮ ವರ್ಗದ ವಿದ್ಯಾರ್ಥಿಗಳು ಕಾನೂನು ಶಿಕ್ಷಣದಿಂದ ವಂಚಿತರಾಗಿದ್ದರು. ಇದನ್ನು ಅರಿತ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರು 1999ರಲ್ಲಿ ಇಲ್ಲಿನ ಬಸವಪ್ರಭು ಕೋರೆ ಕಾಲೇಜಿನ ಆವರಣದಲ್ಲಿ ಸಂಸ್ಥೆಯಿಂದ ಕಾನೂನು ಮಹಾವಿದ್ಯಾಲಯ ಆರಂಭಿಸಿದ್ದಾರೆ.

ದ್ವಿತೀಯ ಪಿಯು ಶಿಕ್ಷಣ ಮುಗಿಸಿ ಕಾನೂನು ಪದವಿ ಪಡೆಯಲು ಇಚ್ಛಿಸುವವರಿಗೆ ಐದು ವರ್ಷ ಹಾಗೂ ಪದವಿ ಶಿಕ್ಷಣ ಪಡೆದವರಿಗೆ ಮೂರು ವರ್ಷದ ಕಾನೂನು ಪದವಿ ಪಡೆಯಲು ಈ ಕಾಲೇಜಿನಲ್ಲಿ ಅವಕಾಶವಿದೆ.

ADVERTISEMENT

ಸ್ಥಾಪನೆ ಆದಾಗಿನಿಂದ 13 ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಮಟ್ಟದ ರ‍್ಯಾಂಕ್‌ ಪಡೆದಿದ್ದಾರೆ. 8 ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಮಟ್ಟದಲ್ಲಿ ಬ್ಲೂ ಆಗಿ ಹೊರಹೊಮ್ಮಿದ್ದಾರೆ.

ಆರಂಭದಿಂದಲೂ ಕಾಲೇಜು ಉತ್ತಮ ಫಲಿತಾಂಶ ಪಡೆಯುತ್ತಾ ಬಂದಿದೆ. ಕಾಲೇಜಿನಲ್ಲಿ ಅಧ್ಯಯನ ಮಾಡಿದ ಕೆಲವು ವಿದ್ಯಾರ್ಥಿಗಳು ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ, ಕ್ಯಾಲಿಫೋರ್ನಿಯಾ ಮೊದಲಾದ ಕಡೆಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ.

‘ಇಲ್ಲಿ ಪದವಿ ಪಡೆದ ಮುಜಾಫರ್‌ ಮಾಂಜರೆ, ಬಾಲಮುಕುಂದ ಮುತಾಲಿಕ ದೇಸಾಯಿ, ಲೋಕೇಶ ಡಿ. ಹವೇಲಿ, ಆರತಿ ಬಿ. ಕಮತೆ, ಸಾಗರ ಜಿ. ಪಾಟೀಲ, ಸುಶಾಂತ ಎಂ. ಚೌಗಲಾ, ಅಮೋಲ ಜೆ. ಹಿರೆಕುಡಿ, ಸಂದೀಪ ಎ. ನಾಯಿಕ, ಮಹಾಂತೇಶ ಭುಸಗೊಳ, ಮುರಘೇಂದ್ರ ತುಬಕೆ ಸೇರಿದಂತೆ 21 ಮಂದಿ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆರು ಮಂದಿ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಕಾನೂನು ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಕಾಲೇಜಿನ ಪ್ರಾಚಾರ್ಯ ಡಿ.ಬಿ. ಸೊಲ್ಲಾಪುರೆ ತಿಳಿಸುತ್ತಾರೆ.

5 ಬಾರಿ ರಾಷ್ಟ್ರೀಯ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಏರ್ಪಡಿಸಲಾಗಿತ್ತು, ದೆಹಲಿ, ಪುಣೆ, ಚೆನ್ನೈ, ಭುವವೇಶ್ವರ, ಹೈದರಾಬಾದ್‌ ಸೇರಿದಂತೆ ರಾಜ್ಯದ ಪ್ರಮುಖ ನಗರದ ವಿದ್ಯಾರ್ಥಿಗಳು ಭಾಗವಹಿಸಿದ್ದರು. 18 ಜನ ಹೈಕೋರ್ಟ್‌ ನ್ಯಾಯಾಧೀಶರು ಈ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ತಮ್ಮ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡಿದ್ದಾರೆ. ಕಾನೂನು ಶಿಕ್ಷಣಕ್ಕೆ ಇರುವ ಮಹತ್ವವನ್ನು ಈ ಭಾಗದಲ್ಲಿ ಪಸರಿಸಲಾಗುತ್ತಿದೆ.

ಕೋವಿಡ್ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿಂದುಳಿಯಬಾರದು ಎಂಬ ಉದ್ದೇಶದಿಂದ, ಆನ್‌ಲೈನ್‌ ವೇದಿಕೆಯಲ್ಲಿ ಪಾಠ ಭೋದಿಸಲಾಗುತ್ತಿದೆ. ಕಾಲೇಜಿನ ಜಾಲತಾಣ (klelcchikodi.org) ಮೂಲಕ ವಿದ್ಯಾರ್ಥಿಗಳಿಗೆ ಎಲ್ಲ ಮಾಹಿತಿಯನ್ನು ಒದಗಿಸಲಾಗುತ್ತಿದೆ. ಉಪನ್ಯಾಸಕರು ಆನ್‌ಲೈನ್ ಮೂಲಕ ಹಲವು ಚಟುವಟಿಕೆಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳನ್ನು ಕ್ರಿಯಾಶೀಲರನ್ನಾಗಿ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.