ADVERTISEMENT

ಮುರುಗೇಶ ನಿರಾಣಿಗೆ ಹೆಬ್ಬಾಳಕರ ಬಹಿರಂಗ ಸವಾಲು

‘ಈಗ ಸಿಗದಿದ್ದರೆ ನಮ್ಮ ಸರ್ಕಾರದಲ್ಲಿ ಮೀಸಲಾತಿ ಕೊಡಿಸ್ತೀವಿ’

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 12:12 IST
Last Updated 28 ಅಕ್ಟೋಬರ್ 2020, 12:12 IST
ಲಕ್ಷ್ಮಿ ಹೆಬ್ಬಾಳಕರ
ಲಕ್ಷ್ಮಿ ಹೆಬ್ಬಾಳಕರ   

ಬೆಳಗಾವಿ: ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರು ಬಿಜೆಪಿ ಶಾಸಕ ಮುರುಗೇಶ ನಿರಾಣಿ ಅವರಿಗೆ ಸವಾಲು ಹಾಕಿದ ಘಟನೆ ಇಲ್ಲಿನ ಸುವರ್ಣ ವಿಧಾನಸೌಧದ ಎದುರು ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿಗೆ ಆಗ್ರಹಿಸಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಬುಧವಾರ ಕೈಗೊಂಡಿದ್ದ ಉಪವಾಸ ಸತ್ಯಾಗ್ರಹ ವೇದಿಕೆಯಲ್ಲಿ ನಡೆಯಿತು.

ವೇದಿಕೆಯಲ್ಲಿದ್ದ ನಿರಾಣಿ ಅವರನ್ನು ಉದ್ದೇಶಿಸಿ ಮಾತನಾಡಿದ ಲಕ್ಷ್ಮಿ, ‘ಮುಂಬರುವ ದಿನಗಳಲ್ಲಿ ಈ ಸರ್ಕಾರ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರವರ್ಗ 2ಎ ಮೀಸಲಾತಿ ನೀಡುತ್ತಾರೆಂಬ ವಿಶ್ವಾಸವಿದೆ. ಅವರು ಕೊಡಲಿಲ್ಲವಾದರೆ ಮುಂದೆ ಕಾಂಗ್ರೆಸ್ ಸರ್ಕಾರ ಬಂದೇ ಬರುತ್ತದೆ. ಆಗ ನಾವು ಮೀಸಲಾತಿ ನೀಡಿಯೇ ತೀರುತ್ತೇವೆ. ಈ ಸರ್ಕಾರ ಮಾಡದಿದ್ದರೆ ಮುಂದಿನ ಸರ್ಕಾರದಲ್ಲಿ ನಾವು ಮಾಡಿಸ್ತೀವಿ. ಇದು ಅಣ್ಣನಿಗೆ ತಂಗಿಯ ಸವಾಲು’ ಎಂದರು ಹೇಳಿದರು.

‘ಇದು ಪ್ರತಿಷ್ಠೆಗಾಗಿ ಸವಾಲಲ್ಲ; ಸಮಾಜಕ್ಕಾಗಿ ಸವಾಲು ಹಾಕುತ್ತಿದ್ದೇನೆ. ನೀನಾದರೂ ಮಾಡಿಸು. ನಿನ್ನ ಕೈಲಿ ಆಗಲಿಲ್ಲವೆಂದರೆ ನಾನು ಮಾಡಿಸ್ತೇನೆ. ನೀನು ಮಾಡಿಸಿದ್ರೆ ಬೆಳಗಾವಿಯಿಂದ ಕುಂದಾ ತಗೊಂಡು ನಿನ್ನ ಮನೆಗೆ ಬರ್ತೀನಿ. ನಾನು ಮಾಡಿಸಿದ್ರೆ ನನಗೆ 4 ಬಂಗಾರದ ಬಳೆಗಳನ್ನು ನೀನು‌ ಮಾಡಿಸಿಕೊಡಬೇಕು’ ಎಂದು ಸವಾಲು ಹಾಕಿದಾಗ ನೆರೆದಿದ್ದವರ ಚಪ್ಪಾಳೆ ಮೂಲಕ ಬೆಂಬಲಿಸಿದರು.

ADVERTISEMENT

‘ಅನಾರೋಗ್ಯದಿಂದಾಗಿ ಅರು ದಿನಗಳಿಂದ ಕೆಎಲ್‌ಇ ಆಸ್ಪತ್ರೆಯಲ್ಲಿ ದಾಖಲಾಗಿದ್ದೆ. ಹೋರಾಟದಲ್ಲಿ ಐದು ನಿಮಿಷವಾದರೂ ಬಂದು ಹೋಗಿ ಎಂದು ಶ್ರೀಗಳು ಹೇಳಿದರು. ಹೀಗಾಗಿ ಬಂದೆ. ನನ್ನ ಅಕ್ಕ–ತಂಗಿ, ಅಣ್ಣ–ತಮ್ಮಂದಿರು ಬಿಸಿಲಿನಲ್ಲಿ ಕುಳಿತಿದ್ದಾರೆ. ನಿಮ್ಮ ಬೆವರಿನ ಹನಿಗೆ ನ್ಯಾಯ ದೊರೆತೇ ದೊರೆಯುತ್ತದೆ. ಬೇರೆ ಸಮಾಜದ ಅಧಿಕಾರವನ್ನಾಗಲೀ, ಹಕ್ಕನ್ನಾಗಲಿ ಯಾವತ್ತೂ ಆಸೆ ಪಟ್ಟಿಲ್ಲ. ಕಿತ್ತುಕೊಳ್ಳುವ ಪ್ರಯತ್ನ ಸಹ ಮಾಡಿಲ್ಲ. ನಮ್ಮ ಹಕ್ಕು ಕೇಳುತ್ತಿದ್ದೇವೆ’ ಎಂದು ಹೇಳಿದರು.

‘ಹಿಂದಿನ ಸರ್ಕಾರವಿದ್ದ ಸಂದರ್ಭದಲ್ಲಿ ಎಲ್ಲರೂ ಸೇರಿ ಪ್ರಯತ್ನ ಮಾಡಿದ್ದೆವು. ಆದರೆ ಯಶಸ್ಸು ಸಿಗಲಿಲ್ಲ. ಸಮಾಜದ ವಿಷಯ ಬಂದಾಗ ನಾನು ಕಿತ್ತೂರು ರಾಣಿ ಚನ್ನಮ್ಮನ ರೀತಿ ಆಗುತ್ತೇನೆ. ಹಿಂದೆ ಹಿನ್ನಡೆ ಆಗಿರಬಹುದು. ಮುಂಬರುವ ದಿನಗಳಲ್ಲಿ ಮೀಸಲಾತಿ ಸಿಗುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನಿರಾಣಿ, ‘ನಮ್ಮ ಸರ್ಕಾರವೇ ಬೇಡಿಕೆ ಈಡೇರಿಸುತ್ತದೆ. ಸಹೋದರಿ ಲಕ್ಷ್ಮಿ ಕುಂದಾ ತಂದುಕೊಡಲಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.