ADVERTISEMENT

ಅನ್ನಪೂರ್ಣಗೆ ಅತ್ಯುನ್ನತ ಪದಕಕ್ಕೆ ಶಿಫಾರಸು: ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 16:28 IST
Last Updated 14 ಏಪ್ರಿಲ್ 2025, 16:28 IST
ಲಕ್ಷ್ಮೀ ಹೆಬ್ಬಾಳಕರ
ಲಕ್ಷ್ಮೀ ಹೆಬ್ಬಾಳಕರ   

ಬೆಳಗಾವಿ: ‘ಬಾಲಕಿ ಮೇಲೆ ಅತ್ಯಾಚಾರ ಯತ್ನ ನಡೆಸಿ ಕೊಲೆ ಮಾಡಿದ ಆರೋಪಿ ರಿತೇಶಕುಮಾರ್‌ನನ್ನು ಎನ್‌ಕೌಂಟರ್‌ ಮಾಡಿದ ಪಿಎಸ್‌ಐ ಅನ್ನಪೂರ್ಣ ಅವರಿಗೆ ಅತ್ಯುನ್ನತ ಪದಕ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಶಿಫಾರಸು ಮಾಡುತ್ತೇನೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಹಿಂದಿನಿಂದಲೂ ಪ್ರತಿಪಾದಿಸುತ್ತ ಬಂದಿದ್ದೇನೆ. ಇಂಥ ಪ್ರಕರಣಗಳಲ್ಲಿ ಆರೋಪಿಗಳಿಗೆ ಗಲ್ಲುಶಿಕ್ಷೆ ಆಗಬೇಕು. ದೌರ್ಜನ್ಯಕ್ಕೆ ಒಳಗಾದವರಿಗೆ ತ್ವರಿತವಾಗಿ ನ್ಯಾಯ ಸಿಗಬೇಕು’ ಎಂದರು.

‘ಹುಬ್ಬಳ್ಳಿ ಪ್ರಕರಣದಲ್ಲಿ ತೆಗೆದುಕೊಂಡ ಕ್ರಮಕ್ಕಾಗಿ ಅನ್ನಪೂರ್ಣ ಅವರನ್ನು ಅಭಿನಂದಿಸುತ್ತೇನೆ. ಅವರ ನಡೆ ಬೇರೆ ಅಧಿಕಾರಿಗಳಿಗೆ ದಾರಿದೀಪವಾಗಬೇಕು’ ಎಂದು ಹೇಳಿದರು.

ADVERTISEMENT

‘ನಮ್ಮ ಇಲಾಖೆಯಿಂದ ಸರ್ಕಾರಿ ನೌಕರರಿಗೆ ‘ರಾಣಿ ಚನ್ನಮ್ಮ’ ಪ್ರಶಸ್ತಿ ನೀಡುವುದಿಲ್ಲ. ಒಂದುವೇಳೆ ಸರ್ಕಾರಿ ನೌಕರರಿಗೂ ಪ್ರಶಸ್ತಿ ನೀಡಿದರೆ, ಅನ್ನಪೂರ್ಣ ಮೊದಲಿಗರಾಗಿರುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವೀರಶೈವ ಲಿಂಗಾಯತರ ಗಣತಿ ಮತ್ತೊಮ್ಮೆ ಆಗಲಿ’

ಜಾತಿ ಗಣತಿಗೆ ಎಂದಿಗೂ ನನ್ನ ವಿರೋಧವಿಲ್ಲ. ಆದರೆ ಈಗ ವೀರಶೈವ ಮತ್ತು ಲಿಂಗಾಯತರನ್ನು ಪ್ರತ್ಯೇಕವಾಗಿ ಗಣತಿ ಮಾಡಲಾಗಿದೆ. ಕಳೆದ 20 ವರ್ಷಗಳಲ್ಲಿ ಎಲ್ಲ ಜಾತಿಗಳಲ್ಲಿ ಜನರು ಹೆಚ್ಚಾಗಿದ್ದಾರೆ. ಆದರೆ ವೀರಶೈವ ಮತ್ತು ಲಿಂಗಾಯತರ ಜನಸಂಖ್ಯೆ ಒಡೆದು ಹೋಗಿದ್ದರಿಂದ ನಮ್ಮ ಅಂಕಿ–ಅಂಶ ಕಡಿಮೆ ಕಾಣಿಸುತ್ತಿದೆ. ಹಾಗಾಗಿ ಇನ್ನೊಮ್ಮೆ ವೀರಶೈವ–ಲಿಂಗಾಯತ ಸೇರಿಸಿ ಒಟ್ಟಾಗಿ ಜಾತಿ ಗಣತಿ ಮಾಡಬೇಕು’ ಎಂದು ಲಕ್ಷ್ಮೀ ಹೆಬ್ಬಾಳಕರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.