ADVERTISEMENT

‘ಅಂಗಾಂಗ ಕಸಿಗೆ ಸರ್ಕಾರದಿಂದ ಸಹಾಯಧನ’

​ಪ್ರಜಾವಾಣಿ ವಾರ್ತೆ
Published 23 ಜುಲೈ 2019, 20:31 IST
Last Updated 23 ಜುಲೈ 2019, 20:31 IST
ಬೆಳಗಾವಿಯಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಕಿಶೋರ ಪಡಕೆ ಹಾಗೂ ಡಾ.ಎಂ.ವಿ. ಜಾಲಿ ಇದ್ದಾರೆ
ಬೆಳಗಾವಿಯಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಕಿಶೋರ ಪಡಕೆ ಹಾಗೂ ಡಾ.ಎಂ.ವಿ. ಜಾಲಿ ಇದ್ದಾರೆ   

ಬೆಳಗಾವಿ: ‘ಅಂಗಾಂಗಗಳ ತೊಂದರೆಯಿಂದ ಬಳಲುತ್ತಿರುವ, ಆರ್ಥಿಕವಾಗಿ ಹಿಂದುಳಿದವರಿಗೆ (ಬಿಪಿಎಲ್ ಚೀಟಿ ಇರುವ) ರಾಜ್ಯ ಸರ್ಕಾರದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ವತಿಯಿಂದ ಅಂಗಾಂಗ ಕಸಿಗಾಗಿ ಆರ್ಥಿಕ ಸಹಾಯ ದೊರೆಯಲಿದೆ. ಮುಖ್ಯವಾಗಿ ಕಿಡ್ನಿ, ಹೃದಯ ಹಾಗೂ ಲಿವರ್‌ ಕಸಿಗೆ ಈ ನೆರವು ಲಭ್ಯವಿದೆ’ ಎಂದು ಡಾ.ಕಿಶೋರ ಪಡಕೆ ತಿಳಿಸಿದರು.

‌ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಅಂಗಾಂಗಗಳ ಕಸಿ ಕುರಿತು ಉಪನ್ಯಾಸ ನೀಡಿದರು.

‘ಅಂಗಾಂಗಗಳು ಹಾಳಾಗಿ ಅದಕ್ಕೆ ಸರಿಯಾದ ಚಿಕಿತ್ಸೆ ಲಭಿಸದೇ ಅನೇಕರು ಸಾವಿಗೀಡಾಗುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ ಆರ್ಥಿಕ ಸಮಸ್ಯೆ. ಇದನ್ನು ಮನಗಂಡ ಸರ್ಕಾರ ಯೋಜನೆ ರೂಪಿಸಿದೆ. ಹೃದಯ ಕಸಿಗೆ ₹ 10 ಲಕ್ಷ, ಔಷಧೋಪಚಾರಕ್ಕೆ ₹ 1 ಲಕ್ಷ, ಲಿವರ್‌ಗೆ ₹ 11 ಲಕ್ಷ, ಔಷಧಕ್ಕೆ ₹ 1 ಲಕ್ಷ, ಕಿಡ್ನಿಗೆ ₹ 2 ಲಕ್ಷ, ಔಷಧಕ್ಕೆ ₹ 1 ಲಕ್ಷ ದೊರೆಯುತ್ತದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಜನವರಿಯಿಂದ ಇಲ್ಲಿವರೆಗೆ ರಾಜ್ಯದಲ್ಲಿ 60 ಜನರು ಅಂಗಾಂಗಗಳನ್ನು ದಾನ ಮಾಡಿದ್ದಾರೆ. ಅದರಲ್ಲಿ 95 ಕಿಡ್ನಿ, 52 ಲಿವರ್, 11 ಹೃದಯ, 12 ಶ್ವಾಸಕೋಶ, 100 ಕಣ್ಣಿನ ಗುಡ್ಡೆ, 26 ಹೃದಯದ ವಾಲ್ವ್, 5 ಜನರಿಂದ ಚರ್ಮ, ಒಂದು ಕೈ ಪಡೆದು ಕಸಿ ಮಾಡಿ ಹಲವು ಜನರಿಗೆ ಜೀವದಾನ ನೀಡಲಾಗಿದೆ. ಅಪಘಾತದಲ್ಲಿ ಗಾಯಗೊಂಡು ಮಿದುಳು ಮೃತಗೊಂಡರೆ ಆ ವ್ಯಕ್ತಿ ಮರಳಿ ಬರಲು ಸಾಧ್ಯವಿಲ್ಲ ಎಂದು ತಿಳಿದಾಗ, ಅಂಗಾಂಗಗಳನ್ನು ಸ್ವಇಚ್ಛೆಯಿಂದ ನೀಡಿದರೆ ಇನ್ನೊಬ್ಬರ ಬಾಳು ಬೆಳಕಾಗುತ್ತದೆ’ ಎಂದು ತಿಳಿಸಿದರು.

‘ಅಪಘಾತದಲ್ಲಿ ಗಾಯಗೊಂಡವರ ಜೀವ ಉಳಿಸುವ ಕೆಲಸವನ್ನು ಮೊದಲು ಮಾಡಬೇಕು. ಅವರನ್ನು ಶೀಘ್ರವಾಗಿ ಆಸ್ಪತ್ರೆಗೆ ಸಾಗಿಸಿ ಅವರಿಗೆ ಚಿಕಿತ್ಸೆ ಕೊಡಿಸುವ ಕಾಳಜಿಯನ್ನು ಎಲ್ಲರೂ ತೋರಬೇಕು’ ಎಂದರು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ ಮಾತನಾಡಿ, ‘ಅಂಗಾಂಗ ದಾನಗಳ ಕುರಿತು ಗ್ರಾಮೀಣ ಭಾಗಗಳ ಜನರಿಗೆ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಂಘ–ಸಂಸ್ಥೆಗಳು ಕಾರ್ಯಪ್ರವೃತ್ತವಾಗಬೇಕು’ ಎಂದು ಹೇಳಿದರು.

ಮೋಹನ ಪ್ರತಿಷ್ಠಾನ ಕರ್ನಾಟಕ ಘಟಕದ ಶ್ರೀಧರ ಹಂಚಿನಮನಿ ಮಾತನಾಡಿದರು. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಡಾ.ಆರ್.ಬಿ. ನೇರ್ಲಿ, ಹೃದಯ ಶಸ್ತ್ರಚಿಕಿತ್ಸಕ ಡಾ.ರಿಚರ್ಡ್‌ ಸಾಲ್ಡಾನ, ಡಾ.ರವಿಶಂಕರ ನಾಯಕ, ಡಾ.ಮಲ್ಲಿಕಾರ್ಜುನ ಕರಿಶೆಟ್ಟಿ, ಡಾ.ಪ್ರವೀಣ ತಂಬ್ರಳ್ಳಿಮಠ, ಡಾ.ರಾಜೇಶ ಪವಾರ, ಡಾ.ರಾಜೇಶ ಶೆಣೈ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.