ADVERTISEMENT

ವರಿಷ್ಠರ ಎದುರು ಟಿಕೆಟ್‌ ಆಕಾಂಕ್ಷಿಗಳ ‘ಪರೇಡ್’

ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 15:42 IST
Last Updated 24 ಸೆಪ್ಟೆಂಬರ್ 2019, 15:42 IST

ಬೆಳಗಾವಿ: ಇಲ್ಲಿನ ಗೋಕಾಕ ಕ್ಷೇತ್ರದಿಂದ ಲಖನ್‌ ಜಾರಕಿಹೊಳಿ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ದೊರೆಯುವ ಸಾಧ್ಯತೆ ನಿಚ್ಚಳವಾಗಿದೆ. ಮಂಗಳವಾರ ಇಲ್ಲಿ ಪಕ್ಷದ ವರಿಷ್ಠರು ನಡೆಸಿದ ಸಭೆಯಲ್ಲಿ, ಲಖನ್‌ ಬಿಟ್ಟರೆ ಬೇರೊಬ್ಬರ ಹೆಸರು ಪ್ರಸ್ತಾಪವಾಗಲಿಲ್ಲ ಹಾಗೂ ಯಾರೂ ಆಸಕ್ತಿ ವ್ಯಕ್ತಪಡಿಸಲಿಲ್ಲ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸೇರಿದಂತೆ ಹಲವು ಮುಖಂಡರಲ್ಲಿ ಅಥಣಿ ಮತ್ತು ಕಾಗವಾಡ ಕ್ಷೇತ್ರದ ಟಿಕೆಟ್‌ಗಾಗಿ ಹಲವರು ಕೋರಿಕೆ ಇಟ್ಟಿದ್ದಾರೆ.

ಅಥಣಿಯಿಂದ ಮಾಜಿ ಶಾಸಕ ಶಹಜಹಾನ್‌ ಡೊಂಗರಗಾಂವ, ಗಜಾನನ ಮಂಗಸೂಳಿ, ಎಸ್.ಕೆ. ಬುಟಾಳಿ, ಸುರೇಶ ಪಾಟೀಲ, ಧರೆಪ್ಪ ಠಕ್ಕಣ್ಣವರ ಆಕಾಂಕ್ಷಿಗಳಾಗಿರುವುದಾಗಿ ತಿಳಿಸಿದ್ದಾರೆ. ತಮಗೇಕೆ ಟಿಕೆಟ್ ಕೊಡಬೇಕು ಎನ್ನುವುದನ್ನು ಕೆಲವು ನಿಮಿಷಗಳ ಕಾಲ ಪ್ರತ್ಯೇಕವಾಗಿ ತಿಳಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.

ADVERTISEMENT

ಕಾಗವಾಡದಿಂದ ಚಿಕ್ಕೋಡಿ ಕ್ಷೇತ್ರದ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಚಂದ್ರಕಾಂತ ಇಮ್ಮಡಿ, ದಿಗ್ವಿಜಯ ಪವಾರ ದೇಸಾಯಿ, ರವೀಂದ್ರ ಗಾಣಿಗೇರ ಕೂಡ ಟಿಕೆಟ್‌ ಕೇಳಿದ್ದಾರೆ.

ಬಳಿಕ ಎಲ್ಲ ಮುಖಂಡರೊಂದಿಗೂ ಮಾತನಾಡಿದ ಸಿದ್ದರಾಮಯ್ಯ, ‘ಈ ಉಪ ಚುನಾವಣೆ ಮಹತ್ವದ್ದಾಗಿದೆ. ಹೈಕಮಾಂಡ್‌ ಯಾರಿಗೇ ಟಿಕೆಟ್‌ ನೀಡಿದರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಬಿಜೆಪಿಯವರನ್ನು ಸೋಲಿಸಬೇಕು; ಒಂದೊಮ್ಮೆ ಅನರ್ಹ ಶಾಸಕರು ಸ್ಪರ್ಧಿಸಿದರೆ ತಕ್ಕಪಾಠ ಕಲಿಸಲು ದುಡಿಯಬೇಕು’ ಎಂದು ಸೂಚಿಸಿದ್ದಾರೆ.

ವರಿಷ್ಠರ ಸೂಚನೆಗೆ ಅಥಣಿ ಹಾಗೂ ಕಾಗವಾಡದಲ್ಲಿ ಕಾರ್ಯಕರ್ತರು, ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಹೀಗಾಗಿ, ಶಾಸಕರಾದ ಸತೀಶ ಜಾರಕಿಹೊಳಿ, ಎಂ.ಬಿ. ಪಾಟೀಲ, ಗಣೇಶ ಹುಕ್ಕೇರಿ, ಮುಖಂಡರಾದ ವಿನಯ ನಾವಲಗಟ್ಟಿ, ಲಕ್ಷ್ಮಣರಾವ್ ಚಿಂಗಳೆ, ವೀರಕುಮಾರ ಪಾಟೀಲ, ಆರ್‌.ಬಿ. ತಿಮ್ಮಾಪುರ ಮೊದಲಾದವರ ತಂಡ ಬುಧವಾರ (ಸೆ.25)ದಿಂದ ಪ್ರವಾಸ ಕೈಗೊಳ್ಳಲಿದೆ. ಎರಡು ದಿನಗಳಲ್ಲಿ ಟಿಕೆಟ್‌ ಅಂತಿಮಗೊಳ್ಳುವ ನಿರೀಕ್ಷೆ ಇದೆ ಎಂದು ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.