ಖಾನಾಪುರ: ರಾಜ್ಯದಲ್ಲಿ 1995ರ ನಂತರ ಆರಂಭಗೊಂಡ ಶಾಶ್ವತ ಅನುದಾನ ರಹಿತ ಶಾಲಾ-ಕಾಲೇಜುಗಳನ್ನು ಅನುದಾನಕ್ಕೊಳಪಡಿಸುವ ಮೂಲಕ ಈ ಶಾಲಾ-ಕಾಲೇಜುಗಳಲ್ಲಿ ಕಡಿಮೆ ಸಂಬಳದಲ್ಲಿ ದುಡಿಯುತ್ತಿರುವವರಿಗೆ ಶಾಶ್ವತ ಜೀವನಾಧಾರ ಒದಗಿಸುವಂತೆ ಕೋರಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ಹಾಗೂ ಕಾಲೇಜುಗಳ ನೌಕರರ ಸಂಘದ ಪದಾಧಿಕಾರಿಗಳು ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.
ಇತ್ತೀಚೆಗೆ ಬೆಳಗಾವಿಗೆ ಭೇಟಿ ನೀಡಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಲೀಂ ಕಿತ್ತೂರ, ‘ಕರ್ನಾಟಕ ರಾಜ್ಯದಾದ್ಯಂತ 1995ರಿಂದ ಅನುದಾನಿತ ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕಾಯಂಮಾತಿಗೆ ಅನುಮೋದನೆ ಸಿಕ್ಕಿಲ್ಲ. ಹೀಗಾಗಿ ಈ ಸಂಸ್ಥೆಗಳ ನೌಕರರು ತಮ್ಮ ಭವಿಷ್ಯದ ಬಗ್ಗೆ ಅತಂತ್ರ ಸ್ಥಿತಿ ಮತ್ತು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸಚಿವರು ಈ ವಿಷಯವಾಗಿ ಗಮನಹರಿಸಬೇಕು’ ಎಂದು ಕೋರಿದರು.
ಶಾಸಕರಾದ ವಿಠ್ಠಲ ಹಲಗೇಕರ, ವಿಶ್ವಾಸ ವೈದ್ಯ, ಸಂಘದ ಅಧ್ಯಕ್ಷ ಎಸ್.ಎಸ್ ಮಠದ, ಸಹ ಕಾರ್ಯದರ್ಶಿ ಎಂ.ಎ ಕೋರಿಶೆಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.