ADVERTISEMENT

ಹುತಾತ್ಮ ದಿನಾಚರಣೆಗೆ ಎಂಇಎಸ್ ಸಜ್ಜು

ನಗರ ಪೊಲೀಸ್ ಆಯುಕ್ತರಿಂದ ಅನುಮತಿ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 13:37 IST
Last Updated 15 ಜನವರಿ 2022, 13:37 IST
ಬೆಳಗಾವಿಯಲ್ಲಿ ಎಂಇಎಸ್ ‍ಪದಾಧಿಕಾರಿಗಳು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರೊಂದಿಗೆ ಚರ್ಚಿಸಿದರು
ಬೆಳಗಾವಿಯಲ್ಲಿ ಎಂಇಎಸ್ ‍ಪದಾಧಿಕಾರಿಗಳು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರೊಂದಿಗೆ ಚರ್ಚಿಸಿದರು   

ಬೆಳಗಾವಿ: ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದದ ಹೋರಾಟದಲ್ಲಿ ಮಡಿದವರಿಗೆ ಗೌರವ ಸಲ್ಲಿಸಲು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯು ಕೋವಿಡ್ ಭೀತಿ ಮತ್ತು ನಿರ್ಬಂಧಗಳ ನಡುವೆಯೂ ಜ.17ರಂದು ‘ಹುತಾತ್ಮ ದಿನಾಚರಣೆ’ ಕಾರ್ಯಕ್ರಮ ಆಯೋಜಿಸಲು ಸಿದ್ದತೆ ನಡೆಸಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ಹುತಾತ್ಮ ಚೌಕದಲ್ಲಿ ಪೂಜೆ, ಮೆರವಣಿಗೆ ಹಾಗೂ ಸಭೆ ನಡೆಸಲು ಅನುಮತಿ ಕೋರಿ ಜ.4ರಂದು ಸಲ್ಲಿಸಿದ್ದ ಅರ್ಜಿಯನ್ನು ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ತಿರಸ್ಕರಿಸಲಾಗಿದೆ.

‘ಕೋವಿಡ್ ಹಾಗೂ ಓಮೈಕ್ರಾನ್‌ ಓಮೈಕ್ರಾನ್‌ ವೈರಾಣು ಹರಡುವಿಕೆ ನಿಯಂತ್ರಿಸಲು ಮತ್ತು ಸಾರ್ವಜನಿಕ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಜಾತ್ರೆ, ಮೆರವಣಿಗೆ, ಪ್ರತಿಭಟನೆ, ಸಾರ್ವಜನಿಕ ಸಭೆ–ಸಮಾರಂಭವನ್ನು ಸರ್ಕಾರದ ಆದೇಶದ ಪ್ರಕಾರ ನಿಷೇಧಿಸಿರುವುದರಿಂದ ಅನುಮತಿ ಕೊಡಲಾಗುವುದಿಲ್ಲ’ ಎಂದು ಪೊಲೀಸ್ ಆಯುಕ್ತರು ಹಿಂಬರಹದಲ್ಲಿ ಸಮಿತಿಗೆ ತಿಳಿಸಿದ್ದಾರೆ.

ADVERTISEMENT

ಈ ಹಿನ್ನೆಲೆಯಲ್ಲಿ ಅಧ್ಯಕ್ಷ ದೀಪಕ ದಳವಿ, ಪದಾಧಿಕಾರಿಗಳಾದ ವಿಕಾಸ ಕಲಘಟಗಿ, ಮಾಲೋಜಿ ಅಷ್ಟೇಕರ, ಪ್ರಕಾಶ ಮರಗಾಲೆ ಹಾಗೂ ರಂಜಿತ ಚೌಗಲೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರನ್ನು ಭೇಟಿಯಾಗಿ ಮತ್ತೊಂದು ಮನವಿ ಸಲ್ಲಿಸಿದ್ದಾರೆ. ಕೋವಿಡ್ ಮಾರ್ಗಸೂಚಿಗಳ ಅನುಸಾರ ಕಾರ್ಯಕ್ರಮಕ್ಕೆ ಅನುಮತಿ ನೀಡುವಂತೆ ಕೋರಿದ್ದಾರೆ.

‘ನಿತ್ಯವೂ ‍ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ, ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಅದನ್ನು ಎಲ್ಲರೂ ಪಾಲಿಸಬೇಕು. ಈ ಕಾರಣದಿಂದಾಗಿಯೇ ಪೊಲೀಸರು ಅನುಮತಿ ನೀಡಿಲ್ಲ. ಕೋವಿಡ್ ಆತಂಕದ ನಡುವೆ ಕಾರ್ಯಕ್ರಮ ಆಯೋಜಿಸಬೇಡಿ’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

‘ನಗರದಲ್ಲಿ ನಡೆದ ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದಂತೆ ಕೆಲವು ಮಂದಿ ಅಮಾಯಕರನ್ನು ಬಂಧಿಸಲಾಗಿದೆ. ಅವರನ್ನು ಬಿಡುಗಡೆ ಮಾಡಬೇಕು. ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ಗೌರವಿಸಬೇಕು‘ ಎಂದು ಸಮಿತಿಯ ಮುಖಂಡರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.