ADVERTISEMENT

Mahavir Jayanti | ಬೆಳಗಾವಿಯಲ್ಲಿ ಮಹಾವೀರ ಜಯಂತಿ: ಗಮನಸೆಳೆದ ಶೋಭಾಯಾತ್ರೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 11:30 IST
Last Updated 10 ಏಪ್ರಿಲ್ 2025, 11:30 IST
<div class="paragraphs"><p>ಬೆಳಗಾವಿಯಲ್ಲಿ ಗುರುವಾರ ನಡೆದ ಶೋಭಾಯಾತ್ರೆಯಲ್ಲಿ ಮಹಿಳೆಯರು ದಾಂಡಿಯಾ ನೃತ್ಯ ಪ್ರದರ್ಶಿಸಿದರು </p><p></p><p> ಪ್ರಜಾವಾಣಿ ಚಿತ್ರ</p></div>

ಬೆಳಗಾವಿಯಲ್ಲಿ ಗುರುವಾರ ನಡೆದ ಶೋಭಾಯಾತ್ರೆಯಲ್ಲಿ ಮಹಿಳೆಯರು ದಾಂಡಿಯಾ ನೃತ್ಯ ಪ್ರದರ್ಶಿಸಿದರು

ಪ್ರಜಾವಾಣಿ ಚಿತ್ರ

ADVERTISEMENT
   

ಬೆಳಗಾವಿ: ಭಗವಾನ್‌ ಮಹಾವೀರ ಜನ್ಮಕಲ್ಯಾಣ‌ಕ ಮಹೋತ್ಸವ ಪ್ರಯುಕ್ತ, ಇಲ್ಲಿ ಗುರುವಾರ ಆಯೋಜಿಸಿದ್ದ ಶೋಭಾಯಾತ್ರೆ ಗಮನಸೆಳೆಯಿತು.

ಇಲ್ಲಿನ ಟಿಳಕ ಚೌಕ್‌ನಿಂದ ಆರಂಭಗೊಂಡ ಯಾತ್ರೆ ಶೇರಿ ಗಲ್ಲಿ, ಮಠ ಗಲ್ಲಿ, ಕಪಿಲೇಶ್ವರ ಮೇಲ್ಸೇತುವೆ, ಎಸ್‌ಪಿಎಂ ರಸ್ತೆ, ಶಹಾಪುರದ ಕೋರೆ ಗಲ್ಲಿ, ಬಸವೇಶ್ವರ ವೃತ್ತ ಮಾರ್ಗವಾಗಿ ಸಾಗಿ ಹಿಂದವಾಡಿಯ ಮಹಾವೀರ ಭವನ ತಲುಪಿತು.

ಯುವಜನರು, ಮಹಿಳೆಯರು, ಹಿರಿಯ ನಾಗರಿಕರು ಸೇರಿದಂತೆ ಎಲ್ಲ ವಯೋಮಾನದವರು ಯಾತ್ರೆಯಲ್ಲಿ ಉತ್ಸಾಹದಿಂದ ಹೆಜ್ಜೆಹಾಕಿದರು. ವಿವಿಧ ರೂಪಕಗಳು ಯಾತ್ರೆಗೆ ಮೆರುಗು ತಂದವು. ಕಲಾವಿದರು ವಿವಿಧ ಕಲಾ ಪ್ರಕಾರಗಳನ್ನು ಪ್ರದರ್ಶಿಸಿ ರಂಜಿಸಿದರು.

ಜೈನ ಯುವ ಸಂಘಟನೆಯವರು ಯಾತ್ರೆ ಮಾರ್ಗದಲ್ಲಿ ತಮ್ಮ ಬೇಡಿಕೆಯ ಫಲಕ ಅಳವಡಿಸಿ, ಅವುಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಮಹಾವೀರ ಭವನದಲ್ಲಿ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಮಹಾವೀರರ ತತ್ವಾದರ್ಶ ಪಾಲಿಸಿ

‘ಮಹಾವೀರರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ಅವುಗಳನ್ನು ಪಾಲಿಸುವುದರಿಂದ ವಿಶ್ವದಲ್ಲಿ ಶಾಂತಿ ಸ್ಥಾಪಿಸಬಹುದು’ ಎಂದು ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿದ್ದು ಅಲಗೂರ ಅಭಿಪ್ರಾಯಪಟ್ಟರು.

ಶೋಭಾಯತ್ರೆ ಉದ್ಘಾಟಿಸಿ ಮಾತನಾಡಿದ ಅವರು, ‘ಇಂದು ಹಲವು ದೇಶಗಳಲ್ಲಿ ಯುದ್ದ ನಡೆಯುತ್ತಿವೆ. ವಿಶ್ವದಲ್ಲಿ ಶಾಂತಿ ನೆಲೆಸಬೇಕಾದರೆ ಅಹಿಂಸೆ ಪ್ರತಿಪಾದಿಸಿದ ಮಹಾವೀರರ ತತ್ವಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಕರೆಕೊಟ್ಟರು.
ಜಿಲ್ಲಾಧಿಕಾರಿ ಮೊಹಮ್ಮದ ರೋಷನ್‌, ‘ವಿಶ್ವದಲ್ಲಿ ಅತ್ಯಂತ ಶಾಂತಿಪ್ರಿ ಸಮಾಜ ಎಂದರೆ ಜೈನ ಸಮಾಜ. ಯಾರಿಗೂ ತೊಂದರೆ ಕೊಡದೆ ಸಕಲರಿಗೂ ಒಳ್ಳೆಯದನ್ನು ಬಯಸುವುದೇ ಇದರ ವಿಶೇಷತೆಯಾಗಿದೆ’ ಎಂದು ಹೇಳಿದರು.

ಶಿಕ್ಷಣ ತಜ್ಞ ಮಹೇಶ ಶಿಂಘ್ವಿ, ‘ಇತ್ತೀಚಿನ ದಿನಗಳಲ್ಲಿ ಒಂದಾಗುತ್ತಿರುವ ಜೈನ ಸಮಾಜ ಈ ಒಗ್ಗಟ್ಟು ಮುಂದುವರಿಸಿಕೊಂಡು ಹೋಗಬೇಕು. ಸಾಮಾಜಿಕ ಮತ್ತು ರಾಜಕೀಯವಾಗಿ ಎಲ್ಲರೂ ಒಂದಾಗಬೇಕು’ ಎಂದರು.

ಭಾರತೀಯ ರೈಲ್ವೆ ಇಲಾಖೆ ಹಿರಿಯ ಅಧಿಕಾರಿ ಅಜಯ ಜೈನ, ‘ಬೆಳಗಾವಿಯಲ್ಲಿ ಜೈನ ಸಮಾಜದ ಎಲ್ಲ ಪಂಗಡಗಳು ಸೇರಿಕೊಂಡು, ಮಹಾವೀರರ ಜನ್ಮ ಕಲ್ಯಾಣಕ ಮಹೋತ್ಸವ ಆಚರಿಸುವುದು ಇಡೀ ದೇಶಕ್ಕೆ ಮಾದರಿಯಾಗಿದೆ’ ಎಂದು ಹೇಳಿದರು.

ಶಾಸಕ ಅಭಯ ಪಾಟೀಲ, ಮೇಯರ್‌ ಮಂಗೇಶ್‌ ಪವಾರ, ಉಪಮೇಯರ್‌ ವಾಣಿ ಜೋಶಿ, ಮಾಜಿ ಶಾಸಕ ಸಂಜಯ ಪಾಟೀಲ, ಬಿಜೆಪಿ ಮುಖಂಡ ಎಂ.ಬಿ.ಝಿರಲಿ, ಕೆಪಿಸಿಸಿ ಕಾರ್ಯದರ್ಶಿ ಸುನಿಲ ಹನುಮಣ್ಣವರ, ಮನೋಜ ಸಂಚೇತಿ, ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ, ಉದ್ಯಮಿ ಸಚಿನ ಪಾಟೀಲ , ಜಯತೀರ್ಥ ಸವದತ್ತಿ, ಸಂತೋಷ ಪೆಡನೇಕರ ಉಪಸ್ಥಿತರಿದ್ದರು. ಸಂಗೀತಾ ಕಟಾರಿಯಾ ಣಮೋಕಾರ ಮಂತ್ರ ಪಠಿಸಿದರು. ಪ್ರಿಯಂಕಾ ಜುಟ್ಟಿಂಗ ಸ್ವಾಗತ ಗೀತೆ ಹಾಡಿದರು. ರಾಜೇಂದ್ರ ಜೈನ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಕ್ರಮ ಜೈನ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.