ADVERTISEMENT

ಅಥಣಿ | ಕಲಾವಿದರಿಗೆ ಬಾರದ ಪ್ರೋತ್ಸಾಹಧನ: ಆರೋಪ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 15:49 IST
Last Updated 27 ಸೆಪ್ಟೆಂಬರ್ 2021, 15:49 IST

ಅಥಣಿ: ‘ಕೊರೊನಾ ಕಾರಣದಿಂದಾಗಿ ಎರಡು ವರ್ಷಗಳಿಂದ ವೃತ್ತಿ ರಂಗಭೂಮಿ ನಾಟಕಗಳು ಸ್ಥಗಿತವಾದ್ದರಿಂದ ಕಲಾವಿದರ ಬದುಕು ಸಂಕಷ್ಟದಲ್ಲಿದೆ. ಸರ್ಕಾರ ಘೋಷಿಸಿದ ಪ್ರೋತ್ಸಾಹಧನವೂ ಬಹುತೇಕ ಕಲಾವಿದರಿಗೆ ಬಂದಿಲ್ಲ’ ಎಂದು ಕಲಾವಿದ ರಾಜು ತಾಳಿಕೋಟೆ ತಿಳಿಸಿದರು.

ಪಟ್ಟಣದ ವಿದ್ಯಾಪೀಠ ಶಾಲೆಯ ಅವರಣದಲ್ಲಿ ತಮ್ಮ ಒಡೆತನದ ಶ್ರೀಗುರು ಖಾಸ್ಗತೇಶ್ವರ ನಾಟ್ಯ ಸಂಘದ ಕಲಾವಿದರು ಪ್ರದರ್ಶಿಸಲಿರುವ ಪ್ರಕಾಶ್ ಕಡಪಟ್ಟಿ ವಿರಚಿತ ‘ಅಪ್ಪ ಚಿಂತ್ಯಾಗ, ಮಗಳು ಸಂತ್ಯಾಗ’ ಎಂಬ ಸಾಮಾಜಿಕ ನಾಟಕದ ಕರಪತ್ರಗಳನ್ನು ಬಿಡುಗಡೆ ಮಾಡಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಲಾಕ್‌ಡೌನ್‌ ಸಡಿಲಿಕೆ ನಂತರವೂ ನಮ್ಮ ಪರಿಸ್ಥಿತಿ ಸುಧಾರಿಸಿಲ್ಲ. ವೃತ್ತಿರಂಗವನ್ನೇ ನಂಬಿದ ಸಾವಿರಾರು ಕಲಾವಿದರು ಬದುಕು ಕಟ್ಟಿಕೊಳ್ಳಲು ಬಹಳ ಕಷ್ಟ ಪಡುತ್ತಿದ್ದಾರೆ. ಇಂದಿಗೂ ಅನೇಕ ಕಲಾವಿದರು ಅನುಭವ ಇಲ್ಲದ ಅನೇಕ ಉದ್ಯೋಗಗಳನ್ನು ಮಾಡಿ ಉಪ ಜೀವನ ನಡೆಸುತ್ತಿದ್ದಾರೆ. ವಿವಿಧ ಸಂಘ ಸಂಸ್ಥೆಗಳು, ದಾನಿಗಳು ನೀಡಿದ ದಿನಸಿ ಕಿಟ್‌ಗಳು ಸಹಕಾರಿಯಾಗಿವೆ. ಸರ್ಕಾರ ಎಲ್ಲರಿಗೂ ಪ್ರೋತ್ಸಾಹಧನ ಸಿಗುವಂತೆ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ದಲ್ಲಾಳಿಗಳ ಹಾವಳಿ ಅಧಿಕವಿದೆ. ಹಣ ಕೊಟ್ಟವರಿಗೆ ಬೆಣ್ಣೆ; ಕೊಡದಿದ್ದವರಿಗೆ ಸುಣ್ಣ ಎನ್ನುವಂತಾಗಿದೆ. ಇದರಿಂದಾಗಿ, ಸರ್ಕಾರ ಯೋಜನೆಗಳು ಉಳ್ಳವರ ಪಾಲಾಗುತ್ತಿವೆ’ ಎಂದು ದೂರಿದರು. ‘ವೃತ್ತಿರಂಗಭೂಮಿಯ ಕೆಲವು ಕಲಾವಿದರೆ ಇಂತಹ ದಲ್ಲಾಳಿಗಳಂತೆ ಆಗಿರುವುದು ವಿಷಾದದ ಸಂಗತಿ’ ಎಂದರು.

‘ನಾಡಿನ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಉಳಿಸಿ–ಬೆಳೆಸುವ ನಿಟ್ಟಿನಲ್ಲಿ ವಿಜಯಪುರ ಜಿಲ್ಲೆಯಲ್ಲಿ ವೃತ್ತಿರಂಗಭೂಮಿ ನಾಟಕ ತರಬೇತಿ ಕೇಂದ್ರವನ್ನು ಶೀಘ್ರದಲ್ಲಿಯೇ ಆರಂಭಿಸುವ ಚಿಂತನೆ ಇದೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಅನೇಕ ನಾಟಕಗಳು ನಮ್ಮ ಕಂಪನಿಯಿಂದ ಬರಲಿವೆ’ ಎಂದು ತಿಳಿಸಿದರು.

ರಂಗಭೂಮಿ ಕಲಾವಿದ ಅಮೋಘ ಖೋಬ್ರಿ ಮಾತನಾಡಿದರು. ಕಂಪನಿಯ ಸಂಚಾಲಕಿ ಪ್ರೇಮಾ ತಾಳಿಕೋಟಿ, ವ್ಯವಸ್ಥಾಪಕ ಎನ್. ಭೀಮಾಶಂಕರ, ಭಾರತ್ ಪಾಟೀಲ, ಶ್ರೀಮಂತ ದರೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.