ADVERTISEMENT

ದಾಂಪತ್ಯ ಎಂಬುದು ಪ್ರೀತಿ–ವಿಶ್ವಾಸಗಳ ಸಂಗಮ: ತೋಂಟದ ಸಿದ್ಧರಾಮ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 14:46 IST
Last Updated 22 ಜೂನ್ 2025, 14:46 IST
ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೋಹಿನಿ ಕರಜಗಿಮಠ ಅವರಿಗೆ ‘ಮಹಿಳಾ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು
ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೋಹಿನಿ ಕರಜಗಿಮಠ ಅವರಿಗೆ ‘ಮಹಿಳಾ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಬೆಳಗಾವಿ: ‘ದಾಂಪತ್ಯ ಎಂಬುದು ಕೇವಲ ಗಂಡು–ಹೆಣ್ಣು ಒಟ್ಟಿಗೆ ಜೀವಿಸುವುದಲ್ಲ. ಇದು ಪ್ರೀತಿ–ವಿಶ್ವಾಸಗಳ ಸಂಗಮ’ ಎಂದು ಗದುಗಿನ ತೋಂಟದಾರ್ಯ ಸಂಸ್ಥಾನಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ಶಿವಬಸವ ನಗರದ ನಾಗನೂರು ರುದ್ರಾಕ್ಷಿಮಠದಲ್ಲಿ ವಾಗ್ಮಿ ಪದ್ಮಾವತಿ ಅಂಗಡಿ ಅವರ 64ನೇ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ‘ಮಹಿಳಾ ರತ್ನ’ ಹಾಗೂ ‘ಆದರ್ಶ ದಂಪತಿ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

‘ದಂಪತಿ ಮಧ್ಯೆ ಪರಸ್ಪರ ಸಹಕಾರ, ಅನ್ಯೋನ್ಯತೆ ಇದ್ದರೆ, ದಾಂಪತ್ಯ ಮಧುರವಾಗಿರುತ್ತದೆ. ಜೀವನದಲ್ಲಿ ಕಷ್ಟವಿರದಿದ್ದರೆ ನಮಗೆ ಸುಖದ ಅನುಭೂತಿಯೇ ಆಗುತ್ತಿರಲಿಲ್ಲ. ಕಷ್ಟ ಬಂದಾಗ ದಂಪತಿ ಧೃತಿಗೆಡಬಾರದು. ಪರಸ್ಪರ ಸಮಾಲೋಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಆಗ ಜೀವನದಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ಲಭಿಸುತ್ತದೆ’ ಎಂದರು.

ADVERTISEMENT

‘ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ತತ್ವಾದರ್ಶಗಳನ್ನು ನಾಡಿನ ಜನರಿಗೆ ತಿಳಿಸುವ ಉದ್ದೇಶದಿಂದ ಇದೇವರ್ಷ ಸೆಪ್ಟೆಂಬರ್ 1ರಿಂದ ರಾಜ್ಯದಾದ್ಯಂತ ‘ಬಸವ ಸಂಸ್ಕೃತಿ ಅಭಿಯಾನ’ ಹಮ್ಮಿಕೊಳ್ಳಲಾಗುತ್ತಿದೆ. ಜನರು ಸಕ್ರಿಯವಾಗಿ ಪಾಲ್ಗೊಂಡು ಅಭಿಯಾನ ಯಶಸ್ವಿಗೊಳಿಸಬೇಕು’ ಎಂದು ಕೋರಿದರು.

‘ಆದರ್ಶ ದಂಪತಿ’ ಪ್ರಶಸ್ತಿ ಸ್ವೀಕರಿಸಿದ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ‘ಯುದ್ಧವನ್ನು ಯಾರೂ ಸಂಭ್ರಮಿಸಬಾರದು. ಇದು ಮಾನವ ಕುಲಕ್ಕೆ ಕಳಂಕವಿದ್ದಂತೆ. ಬಸವಾದಿ ಶಿವಶರಣರ ವಚನಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ, ಜಗತ್ತಿನಲ್ಲಿ ಯುದ್ಧಗಳೇ ನಡೆಯುವುದಿಲ್ಲ’ ಎಂದರು.

‘ಮಹಿಳಾ ರತ್ನ’ ಪ್ರಶಸ್ತಿ ಸ್ವೀಕರಿಸಿದ ಹಿಂದೂಸ್ತಾನಿ ಗಾಯಕಿ ರೋಹಿಣಿ ಗಂಗಾಧರಯ್ಯ ಕರಜಗಿಮಠ, ‘ಸಂಗೀತ ಕಲಿಯಲು ಯಾವುದೇ ಜಾತಿ–ಮತದ ಭೇದವಿಲ್ಲ. ಮನಸ್ಸಿಗೆ ಮುದ ನೀಡುವ ಭಾರತೀಯ ಸಂಗೀತಕ್ಕೆ ಮನುಷ್ಯನನ್ನು ಆರೋಗ್ಯವಂತನನ್ನಾಗಿಸುವ ಶಕ್ತಿ ಇದೆ’ ಎಂದರು.

ನಾಗನೂರು ರುದ್ರಾಕ್ಷಿಮಠದ ಅಲ್ಲಮಪ್ರಭು ಸ್ವಾಮೀಜಿ ನೇತೃತ್ವ ವಹಿಸಿದ್ದರು. ಸುನಂದಾ ಎಮ್ಮಿ ಉಪನ್ಯಾಸ ನೀಡಿದರು. ಉಜ್ವಲಾ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಜಿ.ತುಂಗರೇಣುಕ, ಶಿಲ್ಪಾ ಭೈರನಟ್ಟಿ, ರಾಜಶೇಖರ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.